ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

India among the countries with lowest US tariffs: ಭಾರತ ಹಾಗೂ ಅಮೆರಿಕ ನಡುವೆ ಟ್ರೇಡ್ ಡೀಲ್ ಕುದುರಿರುವ ಸುದ್ದಿಯನ್ನು ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಭಾರತದ ಮೇಲಿನ ಪ್ರತಿಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲಾಗಿದೆ. ರಷ್ಯನ್ ತೈಲ ಖರೀದಿಗೆ ಪ್ರತಿಯಾಗಿ ವಿಧಿಸಲಾಗಿದ್ದ ಶೇ. 25 ದಂಡ ಶುಲ್ಕವನ್ನು ಅಮೆರಿಕ ಕೈಬಿಡಲಿದೆ.

ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು...
ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್

Updated on: Feb 03, 2026 | 11:13 AM

ನವದೆಹಲಿ, ಫೆಬ್ರುವರಿ 3: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡು ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇ. 25 ಪ್ರತಿಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆ. ರಷ್ಯನ್ ತೈಲ ಖರೀದಿಸುವುದಕ್ಕೆ ಪ್ರತಿಯಾಗಿ ಭಾರತಕ್ಕೆ ದಂಡವಾಗಿ ವಿಧಿಸಿದ್ದ ಶೇ. 25 ಸುಂಕವನ್ನೂ ಕೈಬಿಡುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಭಾರತದ ಸರಕುಗಳ ಮೇಲೆ ಅಮೆರಿಕದ ಟ್ಯಾರಿಫ್ ಶೇ. 50ರಿಂದ ಶೇ. 18ಕ್ಕೆ ಇಳಿಯಲಿದೆ.

ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಬಹುತೇಕ ಪೂರ್ಣಗೊಳ್ಳುವ ಸ್ಥಿತಿಯಲ್ಲಿದೆ. ಈ ಡೀಲ್​ಗೆ ಸಹಿ ಬಿದ್ದ ಬಳಿಕ ಹೊಸ ಟ್ಯಾರಿಫ್ ದರ ಜಾರಿಗೆ ಬರುತ್ತದೆ. ಆದರೆ, ರಷ್ಯನ್ ತೈಲ ಖರೀದಿಯನ್ನು ಭಾರತ ಕಡಿಮೆ ಮಾಡಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಈ ಬಗ್ಗೆ ಭಾರತದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ರಷ್ಯಾ ಮತ್ತು ಇರಾನ್ ಬದಲು ಅಮೆರಿಕ ಹಾಗೂ ವೆನೆಜುವೆಲಾದಿಂದ ಭಾರತ ತೈಲ ಖರೀದಿಸುತ್ತದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ಬಗ್ಗೆಯೂ ಭಾರತದಿಂದ ಸ್ಪಷ್ಟನೆ ಇನ್ನೂ ಬಂದಿಲ್ಲ. ಅದೇನೇ ಇದ್ದರೂ ಅಮೆರಿಕವು ಭಾರತದ ಸರಕುಗಳ ಮೇಲಿನ ಟ್ಯಾರಿಫ್ ಅನ್ನು ಶೇ. 18ಕ್ಕೆ ಇಳಿಸುತ್ತೇನೆಂದಿರುವುದು ಹೌದು. ವಿಶ್ವದ ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಕಡಿಮೆ ಟ್ಯಾರಿಫ್ ವಿಧಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ರೈಲ್ವೆಗೆ ಭರಪೂರ ಕೊಡುಗೆ: ಬಜೆಟ್​ನಲ್ಲಿ ಏನೂ ಸಿಕ್ಕಿಲ್ಲ ಎಂದವರಿಗೆ ಅಂಕಿಅಂಶ ಸಮೇತ ಅಶ್ವಿನಿ ವೈಷ್ಣವ್ ತಿರುಗೇಟು

ಅಮೆರಿಕದಿಂದ ಹೆಚ್ಚಿನ ಟ್ಯಾರಿಫ್ ಎದುರಿಸುತ್ತಿರುವ ದೇಶಗಳು

  • ಭಾರತ: ಶೇ. 18
  • ಥಾಯ್ಲೆಂಡ್: ಶೇ. 19
  • ಕಾಂಬೋಡಿಯಾ: ಶೇ. 19
  • ಮಲೇಷ್ಯಾ: ಶೇ. 19
  • ಪಾಕಿಸ್ತಾನ: ಶೇ. 19
  • ಬಾಂಗ್ಲಾದೇಶ: ಶೇ. 20
  • ವಿಯೆಟ್ನಾಂ: ಶೇ. 20
  • ಸೌತ್ ಆಫ್ರಿಕಾ: ಶೇ. 30
  • ಚೀನಾ: ಶೇ. 37
  • ಲಾವೊಸ್: ಶೇ. 40
  • ಮಯನ್ಮಾರ್: ಶೇ. 40
  • ಬ್ರೆಜಿಲ್: ಶೇ 50

ಅಮೆರಿಕದಿಂದ ಅತಿಕಡಿಮೆ ಟ್ಯಾರಿಫ್ ಎದುರಿಸುತ್ತಿರುವ ದೇಶಗಳು

  • ಬ್ರಿಟನ್: ಶೇ. 10
  • ಯೂರೋಪಿಯನ್ ಒಕ್ಕೂಟ: ಶೇ. 15
  • ಸ್ವಿಟ್ಜರ್​ಲ್ಯಾಂಡ್: ಶೇ. 15
  • ಜಪಾನ್: ಶೇ. 15
  • ಸೌತ್ ಕೊರಿಯಾ: ಶೇ. 15

ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ನೀಡಿರುವ ಹೇಳಿಕೆ ಪ್ರಕಾರ, ಅಮೆರಿಕದ ಸರಕುಗಳ ಮೇಲೆ ಟ್ಯಾರಿಫ್ ಅನ್ನು ಭಾರತ ಸೊನ್ನೆಗೆ ಇಳಿಸಲಿದೆ. ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆ ಪ್ರವೇಶ ನೀಡಲಿದೆ. ಆದರೆ, ಈ ಬಗ್ಗೆಯೂ ಭಾರತದ ವತಿಯಿಂದ ಹೇಳಿಕೆ ಬಂದಿಲ್ಲ.

ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ

ಭಾರತ ಹಾಗೂ ಅಮೆರಿಕ ನಡುವೆ ಟ್ರೇಡ್ ಡೀಲ್ ಕುದುರಿದೆ ಎನ್ನುವ ಸುದ್ದಿಯು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ನಿಫ್ಟಿ, ಸೆನ್ಸೆಕ್ಸ್​ನ ಎಲ್ಲಾ ಸೂಚ್ಯಂಕಗಳೂ ಹಸಿರು ಬಣ್ಣಕ್ಕೆ ತಿರುಗಿವೆ. ಭಾರತದ ಅನೇಕ ಉದ್ದಿಮೆಗಳು ಉತ್ಸಾಹದಿಂದ ಗರಿಗೆದರುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us