Vivo Smartphones: ವಿವೊ ಸ್ಮಾರ್ಟ್​​ಫೋನ್ ರಫ್ತಿಗೆ ಭಾರತ ತಡೆ; ಚೀನಾ ಕಂಪನಿಗೆ ಭಾರೀ ಹಿನ್ನಡೆ

| Updated By: ಗಣಪತಿ ಶರ್ಮ

Updated on: Dec 07, 2022 | 11:26 AM

ಸ್ಮಾರ್ಟ್​​ಫೋನ್​ಗಳ ಮಾದರಿಗಳು ಮತ್ತು ಅವುಗಳ ಮೌಲ್ಯದ ಬಗ್ಗೆ ತಪ್ಪಾದ ವಿವರ ನೀಡಿದ್ದಕ್ಕಾಗಿ ಕಂದಾಯ ಗುಪ್ತಚರ ಘಟಕ ರಫ್ತಿಗೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿವೆ.

Vivo Smartphones: ವಿವೊ ಸ್ಮಾರ್ಟ್​​ಫೋನ್ ರಫ್ತಿಗೆ ಭಾರತ ತಡೆ; ಚೀನಾ ಕಂಪನಿಗೆ ಭಾರೀ ಹಿನ್ನಡೆ
ವಿವೊ ಸ್ಮಾರ್ಟ್​​ಫೋನ್​ (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ: ವಿವೊ ಸ್ಮಾರ್ಟ್​ಫೋನ್ (Vivo smartphones) ರಫ್ತಿಗೆ (Export) ಭಾರತ (India) ತಡೆಯೊಡ್ಡಿದ್ದು, ಚೀನಾದ (China) ಕಂಪನಿಗೆ ಭಾರೀ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ. ವಿವೊ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿಯು ಭಾರತದ ಘಟಕದಲ್ಲಿ ತಯಾರಿಸಿ ನೆರೆ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದ್ದ 27,000 ಸ್ಮಾರ್ಟ್​ಫೋನ್​ಗಳ ಸಾಗಾಟಕ್ಕೆ ಭಾರತ ತಡೆಯೊಡ್ಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್​ಬರ್ಗ್’ ತಾಣ ವರದಿ ಮಾಡಿದೆ. ರಫ್ತು ಮಾಡುವ ಸಲುವಾಗಿ ಕೊಂಡೊಯ್ಯಲಾಗುತ್ತಿದ್ದ 27,000 ಸ್ಮಾರ್ಟ್​ಫೋನ್​ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಹಣಕಾಸು ಇಲಾಖೆಯ ಅಧೀನ ಸಂಸ್ಥೆಯಾಗಿರುವ ಕಂದಾಯ ಗುಪ್ತಚರ ಘಟಕ ತಡೆಹಿಡಿದಿದೆ. ಈ ಸ್ಮಾರ್ಟ್​​ಫೋನ್​ಗಳು ಸುಮಾರು 1.5 ಕೋಟಿ ಡಾಲರ್ ಮೌಲ್ಯದ್ದಾಗಿವೆ ಎಂದು ಮೂಲಗಳು ಹೇಳಿವೆ.

ರಫ್ತು ತಡೆಗೆ ಕಾರಣವೇನು?

ಸ್ಮಾರ್ಟ್​​ಫೋನ್​ಗಳ ಮಾದರಿಗಳು ಮತ್ತು ಅವುಗಳ ಮೌಲ್ಯದ ಬಗ್ಗೆ ತಪ್ಪಾದ ವಿವರ ನೀಡಿದ್ದಕ್ಕಾಗಿ ಕಂದಾಯ ಗುಪ್ತಚರ ಘಟಕ ರಫ್ತಿಗೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿವೆ. ಆದರೆ, ರಫ್ತಿಗೆ ತಡೆಯೊಡ್ಡಿರುವ ವಿಚಾರವಾಗಿ ಹಣಕಾಸು ಸಚಿವಾಲಯವಾಗಲೀ ವಿವೊ ಇಂಡಿಯಾ ಆಗಲೀ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಈ ರೀತಿಯ ಕ್ರಮಗಳನ್ನು ನಿಲ್ಲಿಸಲು ಮಧ್ಯ ಪ್ರವೇಶಿಸಬೇಕು ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್​’ನ ಅಧ್ಯಕ್ಷ ಪಂಕಜ್ ಮೊಹಿಂದ್ರೂ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕೇಂದ್ರ ಸಂಸ್ಥೆಗಳ ಇಂಥ ಕ್ರಮದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತು ಮೇಲಿನ ಉತ್ತೇಜನಕ್ಕೆ ತಡೆಯಾಗಲಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: RBI Repo Rate Hike: ಆರ್​ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ

ವಿಮಾನ ನಿಲ್ದಾಣದಲ್ಲಿ ಸ್ಮಾರ್ಟ್​​ಫೋನ್ ರಫ್ತಿಗೆ ತಡೆಯೊಡ್ಡಿರುವುದು ಚೀನಾದ ಸ್ಮಾರ್ಟ್​​ಫೋನ್ ತಯಾರಿ ಉದ್ಯಮಿಗಳಲ್ಲಿ ನಿರಾಶೆಗೆ ಕಾರಣವಾಗಿದೆ. 2020ರಲ್ಲಿ ಗಾಲ್ವನ್ ಕಣಿವೆ ಸಂಘರ್ಷದ ಬಳಿಕವೂ ಚೀನಾದ ಉದ್ಯಮ, ತಂತ್ರಜ್ಞಾನ ಕ್ಷೇತ್ರದ ವಹಿವಾಟುಗಳ ಮೇಲೆ ಭಾರತ ವಿವಿಧ ನಿರ್ಬಂಧಗಳನ್ನು ಹೇರಿತ್ತು. ನೂರಾರು ಚೀನೀ ಆ್ಯಪ್​ಗಳನ್ನು ನಿಷೇಧಿಸಿತ್ತು.

ಭಾರತದಲ್ಲಿ ತಯಾರಿಸಿದ ಮೊದಲ ಬ್ಯಾಚ್​ನ ಸ್ಮಾರ್ಟ್​​ಫೋನ್​ಗಳನ್ನು ವಿವೊ ನವೆಂಬರ್​​ನಲ್ಲಿ ಸೌದಿ ಅರೇಬಿಯಾ ಹಾಗೂ ಥಾಯ್ಲೆಂಡ್​ಗೆ ರಫ್ತು ಮಾಡಿತ್ತು. ಈ ಮಧ್ಯೆ, ಅಕ್ರಮ ಹಣಕಾಸು ವರ್ಗಾವಣೆ ವಿಚಾರವಾಗಿ ವಿವೊ ಕಂಪನಿ ಈಗಾಗಲೇ ಸರ್ಕಾರದ ಕಣ್ಗಾವಲಿನಲ್ಲಿದೆ. ಆದರೆ, ಆರೋಪವು ನ್ಯಾಯಾಲಯದಲ್ಲಿ ಇನ್ನಷ್ಟೇ ಸಾಬೀತಾಗಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ