ನವದೆಹಲಿ: ಎರಡು ವರ್ಷದ ಹಿಂದೆ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ್ದ ಭಾರತದ ಜಿಡಿಪಿ ಇನ್ನೆರಡು ವರ್ಷದಲ್ಲಿ 4 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ ಎಂದು ಉದ್ಯಮ ಸಂಘಟನೆ ಪಿಎಚ್ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ (PHDCCI- Progress, Harmony, Development Chamber of Commerce and Industry) ಭವಿಷ್ಯ ನುಡಿದಿದೆ. 2024-25ರ ಹಣಕಾಸು ವರ್ಷದಷ್ಟರಲ್ಲಿ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ. ಅಲ್ಲದೇ ಜಿಡಿಪಿ ತಲಾದಾಯ ಪ್ರಮಾಣವು (Per Capita Income for Nominal GDP) 2,800 ಡಾಲರ್ಗೆ ಏರಬಹುದು ಎಂದು ಅಂದಾಜು ಮಾಡಲಾಗಿದೆ. ಅಂದರೆ ಸರಾಸರಿ ತಲಾದಾಯವು 2.29 ಲಕ್ಷ ರುಪಾಯಿ ಆಗಲಿದೆ. 2022ರ ಮಾರ್ಚ್ನಲ್ಲಿ ತಲಾದಾಯ 2,301 ಡಾಲರ್ ಇದೆ. ಪಿಎಚ್ಡಿ ಚೇಂಬರ್ ಇತ್ತೀಚೆಗೆ (ಜುಲೈ 13) ನಡೆಸಿದ ಸೆಮಿನಾರ್ವೊಂದರಲ್ಲಿ ಈ ಬಗ್ಗೆ ವರದಿಯೊಂದನ್ನು ಮಂಡಿಸಿತ್ತು.
ಕಳೆದ 3 ವರ್ಷಗಳಲ್ಲಿ ಸರಕಾರ ತೆಗೆದುಕೊಂಡ ಹಲವು ರಚನಾತ್ಮಕ ಸುಧಾರಣೆಗಳ ದೆಸೆಯಿಂದಾಗಿ ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಲಿದೆ ಎಂದು ಪ್ರೋಗ್ರೆಸ್, ಹಾರ್ಮೋನಿ, ಡೆವಲಪ್ಮೆಂಟ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆ ಹೇಳಿದೆ.
‘ಖರೀದಿ ವೆಚ್ಚ ಅಧಿಕವಾಗಿದೆ, ಕಚ್ಛಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರಿದ ಬೆಲೆ ಹೆಚ್ಚಳವಾಗಿದೆ. ಉತ್ಪಾಕರ ವೆಚ್ಚ ಅಂತರವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಸುಲಭ ಕಾನೂನು ಹೊಂದಿಕೆ, ಏಕ ಕವಾಕ್ಷಿ ವ್ಯವಸ್ಥೆ ಇತ್ಯಾದಿ ವ್ಯವಹಾರ ವೆಚ್ಚ ಇಳಿಕೆಯಿಂದ ಭಾರತದಲ್ಲಿ ಸರಾಗ ವ್ಯವಹಾರಕ್ಕೆ ಪುಷ್ಟಿ ಕೊಡುತ್ತದೆ,’ ಎಂದು ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹೇಳಿದೆ.
ಇತ್ತೀಚಿನ ಕೆಲ ಜಾಗತಿಕ ವಿದ್ಯಮಾನಗಳಿಂದ ಭಾರತದ ಆರ್ಥಿಕತೆಗೆ ಹಿನ್ನಡೆಯಾಗಿದೆ. ಕಚ್ಛಾ ತೈಲ ಆಮದು, ರುಪಾಯಿ ಮೌಲ್ಯ ಕುಸಿತ, ಹಣದುಬ್ಬರ ಇತ್ಯಾದಿಗಳು ಇತ್ತೀಚಿನ ವರ್ಷಗಳಲ್ಲಿ ಪರಿಣಾಮ ಬೀರಿದ್ದವು. ಆದರೆ, ರಷ್ಯಾ ಮತ್ತು ಉಕ್ರೇನ್ಗೆ ಭಾರತದ ರಫ್ತು ಪ್ರಮಾಣ ಗಮನಾರ್ಹವಿಲ್ಲವಾದ್ದರಿಂದ ರಫ್ತು ಮತ್ತು ಹಣಕಾಸು ವಲಯಕ್ಕೆ ಹೆಚ್ಚಿನ ಧಕ್ಕೆಯಾಗಿಲ್ಲ. ಫಾರೆಕ್ಸ್ ಮೀಸಲು ನಿಧಿ ಉತ್ತಮ ಪ್ರಮಾಣದಲ್ಲಿ ಇದೆ ಎಂದು ಪಿಎಚ್ಡಿಸಿಸಿಐನ ಸೆಮಿನಾರ್ನಲ್ಲಿ ಪಾಲ್ಗೊಂಡಿದ್ದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Trade Deficit: ಹಣದುಬ್ಬರ ಬಳಿಕ, ಈಗ ವ್ಯಾಪಾರ ಕೊರತೆಯೂ ಜೂನ್ನಲ್ಲಿ ಕಡಿಮೆ
ಇಂಟರ್ನ್ಯಾಷನಲ್ ಗ್ರೋತ್ ಸೆಂಟರ್ನ ಪ್ರಣಬ್ ಸೇನ್, ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ನ ಪ್ರೊಫೆಸರ್ ಅಶಿಮಾ ಗೋಯಲ್, ಆರ್ಬಿಐನ ಆರ್ಥಿಕತೆ ಮತ್ತು ನೀತಿ ಸಂಶೋಧನಾ ವಿಭಾಗದ ನಿರ್ದೇಶಕ ರಾಜ್ಮಲ್, ಭಾರ್ತಿ ವಿದ್ಯಾಪೀಠದ ಡೈರೆಕ್ಟರ್ ಯಾಮಿನಿ ಅಗರ್ವಾಲ್, ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಹಬ್ನ ಹಿರಿಯ ಆರ್ಥಿಕ ತಜ್ಞ ಮನಪ್ರೀತ್ ಜುನೇಜಾ, ಪಿಎಚ್ಡಿಸಿಸಿಐನ ಸಿಇಒ ಸೌರಭ್ ಸಾನ್ಯಾಲ್, ಚೀಫ್ ಎಕನಾಮಿಸ್ಟ್ ಎಸ್ ಪಿ ಶರ್ಮಾ ಮೊದಲಾದವರು ಈ ಸೆಮಿನಾರ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ