ಇಲಾನ್ ಮಸ್ಕ್ ‘ಒಲಿಗಾರ್ಕ್’ ಆರೋಪಕ್ಕೆ ಭಾರತ ತಿರುಗೇಟು; ಸ್ಟಾರ್​ಲಿಂಕ್ ವಿಳಂಬಕ್ಕೆ ನಿಯಮಗಳೇ ಕಾರಣವಲ್ಲ ಎಂದ ಸರ್ಕಾರ

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಗೆ ಕೆಲ ಪ್ರಭಾವಿ ಉದ್ಯಮಿಗಳು ತಡೆ ಒಡ್ಡುತ್ತಿದ್ದಾರೆ ಎಂಬ ಇಲಾನ್ ಮಸ್ಕ್ ಆರೋಪವನ್ನು ಭಾರತ ಸರ್ಕಾರ ಆಧಾರರಹಿತ ಎಂದು ತಳ್ಳಿಹಾಕಿದೆ. ಉಪಗ್ರಹ ಸಂವಹನ ನಿಯಮಾವಳಿಗಳು ಪಾರದರ್ಶಕವಾಗಿವೆ ಎಂದು ಪಿಐಬಿ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ. ಸ್ಯಾಟ್​ಕಾಮ್ ಸೇವೆಗೆ ಸ್ಟಾರ್​ಲಿಂಕ್, ಒನ್​ವೆಬ್ ಮತ್ತು ಜಿಯೋ ಈ ಮೂರೂ ಕಂಪನಿಗಳಿಗೂ ಒಂದೇ ಮಾನದಂಡದಲ್ಲಿ ಅನುಮತಿಸಲಾಗಿರುವುದನ್ನು ಸರ್ಕಾರ ತಿಳಿಸಿದೆ.

ಇಲಾನ್ ಮಸ್ಕ್ ಒಲಿಗಾರ್ಕ್ ಆರೋಪಕ್ಕೆ ಭಾರತ ತಿರುಗೇಟು; ಸ್ಟಾರ್​ಲಿಂಕ್ ವಿಳಂಬಕ್ಕೆ ನಿಯಮಗಳೇ ಕಾರಣವಲ್ಲ ಎಂದ ಸರ್ಕಾರ
ಇಲಾನ್ ಮಸ್ಕ್
Image Credit source: Getty Images

Updated on: Oct 08, 2026 | 1:39 PM

ನವದೆಹಲಿ, ಅಕ್ಟೋಬರ್ 8: ಸ್ಪೇಸ್‌ಎಕ್ಸ್ (SpaceX) ಮತ್ತು ಸ್ಟಾರ್‌ಲಿಂಕ್ (Starlink) ಮುಖ್ಯಸ್ಥ ಇಲಾನ್ ಮಸ್ಕ್ (Elon Musk) ಅವರು ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಜಾರಿಗೆ ಬರದಂತೆ ಕೆಲವು ಪ್ರಭಾವಿ “ಒಲಿಗಾರ್ಕ್​ಗಳು” (ಪ್ರಭಾವಿ ಉದ್ಯಮಿಗಳು) ತಮ್ಮ ಏಕಸ್ವಾಮ್ಯ (Monopoly) ಕಾಯ್ದುಕೊಳ್ಳಲು ತಡೆ ಒಡ್ಡುತ್ತಿದ್ದಾರೆ ಎಂದು ಮಾಡಿದ ಆರೋಪವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಮಸ್ಕ್ ಅವರ ಈ ಆರೋಪಗಳು “ಆಧಾರರಹಿತ ಮತ್ತು ಕಪೋಲಕಲ್ಪಿತ” ಎಂದು ಕೇಂದ್ರ ಸಂಪರ್ಕ ಸಚಿವಾಲಯವು ಹೇಳಿದೆ. ಈ ಸಂಬಂಧ ಪತ್ರಿಕಾ ಮಾಹಿತಿ ಬ್ಯೂರೋ (PIB) ಮೂಲಕ ಅಧಿಕೃತ ಸ್ಪಷ್ಟನೆ ಹೊರಡಿಸಿದೆ.

ಇಲಾನ್ ಮಸ್ಕ್ ಮಾಡಿದ ಆರೋಪವೇನು?

ಭಾರತದ ಸಾವಿರಾರು ಹಳ್ಳಿಗಳಲ್ಲಿ ಇನ್ನೂ 4G ಇಂಟರ್ನೆಟ್ ಸೌಲಭ್ಯ ತಲುಪಿಲ್ಲ ಎಂಬ ವರದಿಗೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರತಿಕ್ರಿಯಿಸಿದ್ದ ಮಸ್ಕ್, “ಭಾರತೀಯರ ಮೇಲೆ ತಮ್ಮ ಏಕಸ್ವಾಮ್ಯ ಸಾಧಿಸಲು ಮತ್ತು ಅದನ್ನು ಕಾಯ್ದುಕೊಳ್ಳಲು ಕೆಲವೇ ಕೆಲವು ಪ್ರಭಾವಿ ಉದ್ಯಮಿಗಳು (Oligarchs) ನಮ್ಮ ಸ್ಟಾರ್‌ಲಿಂಕ್ ಸೇವೆಯನ್ನು ತಡೆಯುತ್ತಿದ್ದಾರೆ” ಎಂದು ಪರೋಕ್ಷವಾಗಿ ಭಾರತದ ಪ್ರಮುಖ ಟೆಲಿಕಾಂ ದೈತ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ ಉದ್ಘಾಟನೆ; ಟೆಲಿಕಾಂ ಕ್ಷೇತ್ರದ ಅಭಿವೃದ್ಧಿ ಶ್ಲಾಘಿಸಿದ ಪ್ರಧಾನಿ ಮೋದಿ

ಭಾರತ ಸರ್ಕಾರದ ಖಡಕ್ ಪ್ರತ್ಯುತ್ತರ

ಮಸ್ಕ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಕೇಂದ್ರ ಸಂಪರ್ಕ ಸಚಿವಾಲಯವು, ಭಾರತದ ಉಪಗ್ರಹ ಸಂವಹನ (Satellite Communication) ನಿಯಮಾವಳಿ ಚೌಕಟ್ಟು ಸಂಪೂರ್ಣವಾಗಿ ಪಾರದರ್ಶಕ, ನ್ಯಾಯಸಮ್ಮತ ಮತ್ತು ತಾರತಮ್ಯರಹಿತವಾಗಿದೆ (Fair and Non-Discriminatory) ಎಂದು ತಿಳಿಸಿದೆ.

ಎಲ್ಲಾ ಕಂಪನಿಗಳಿಗೂ ಒಂದೇ ಮಾನದಂಡ ಎಂದ ಸರ್ಕಾರ

ಸರ್ಕಾರದ ಪ್ರಕಾರ, ಪ್ರಸ್ತುತ ಮೂರು ಪ್ರಮುಖ ಉಪಗ್ರಹ ಇಂಟರ್ನೆಟ್ ಕಂಪನಿಗಳಿಗೆ ಲೈಸೆನ್ಸ್ ಪ್ರಕ್ರಿಯೆಯ ಭಾಗವಾಗಿ ಅನುಮತಿ ಹಂತದಲ್ಲಿದ್ದು, ಪ್ರತಿಯೊಂದು ಸಂಸ್ಥೆಯೂ ಭಾರತದ ರಾಷ್ಟ್ರೀಯ ಭದ್ರತಾ ಮಾನದಂಡಗಳನ್ನು (National Security Requirements) ಕಡ್ಡಾಯವಾಗಿ ಪೂರೈಸಬೇಕಾಗಿದೆ.

ಇದನ್ನೂ ಓದಿ: ಸಣ್ಣ ಪ್ರಮಾಣದ ಯುಪಿಐ ಶುಲ್ಕದಿಂದ ದೊಡ್ಡ ಪರಿಣಾಮ ಆಗುವುದಿಲ್ಲ: ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಭಿಪ್ರಾಯ

ಸ್ಟಾರ್‌ಲಿಂಕ್ ಸೇರಿದಂತೆ ರಿಲಯನ್ಸ್ ಜಿಯೋ (Jio Satellite) ಮತ್ತು ಭಾರ್ತಿ ಏರ್‌ಟೆಲ್‌ನ ಒನ್‌ವೆಬ್ (OneWeb) ಸಂಸ್ಥೆಗಳೂ ಸಹ ನಿಯಂತ್ರಣ ಮತ್ತು ಭದ್ರತಾ ಪರಿಶೀಲನೆಯ ಒಂದೇ ಹಂತದಲ್ಲಿವೆ. ಹೀಗಾಗಿ ಯಾವುದೇ ಒಂದು ಸಂಸ್ಥೆಗೆ ಆದ್ಯತೆ ನೀಡುವ ಅಥವಾ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ತಿಳಿಸಿದೆ.

ಭದ್ರತಾ ನಿಯಮ ಮತ್ತು ಡೇಟಾ ಸುರಕ್ಷತೆ

ಭಾರತದಲ್ಲಿ ಉಪಗ್ರಹ ಸ್ಪೆಕ್ಟ್ರಮ್ ಹಂಚಿಕೆ ಮತ್ತು ಸೇವೆಗೆ ಸಂಬಂಧಿಸಿದಂತೆ ಸೈಬರ್ ಭದ್ರತೆ, ಗ್ರಾಹಕರ ಡೇಟಾವನ್ನು ದೇಶದ ಒಳಗಡೆಯೇ ಸಂಗ್ರಹಿಸುವುದು (Data Localisation) ಹಾಗೂ ದೇಶದ ಭದ್ರತಾ ತಪಾಸಣೆಗೆ ಒಳಪಡುವುದು ಕಡ್ಡಾಯ. ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವಷ್ಟೇ ಎಲ್ಲಾ ಕಂಪನಿಗಳಿಗೂ ನಿಯಮಾನುಸಾರ ವಾಣಿಜ್ಯ ಸೇವೆಗೆ ಅನುಮತಿ ಸಿಗಲಿದೆ ಎಂದು ಸರ್ಕಾರ ನಿಲುವು ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us