ನಾಲ್ಕು ವರ್ಷಗಳ ನಂತರ ಕರಿಮೆಣಸಿನ ಬೆಲೆಯು ಪ್ರತಿ ಕಿಲೋಗೆ ರೂ. 500ಕ್ಕಿಂತ ಹೆಚ್ಚಾಗಿದೆ. ಹಬ್ಬದ ಋತುವಿಗೆ ಹೆಚ್ಚಿನ ಅಗತ್ಯ ಮತ್ತು ಕೊವಿಡ್-19 ಲಾಕ್ಡೌನ್ ನಿರ್ಬಂಧಗಳು ಸಡಿಲಗೊಳ್ಳುತ್ತಾ ಬೇಡಿಕೆಯು ಹೆಚ್ಚಾಗಿರುವುದರಿಂದ ಹಿನ್ನೆಲೆಯಲ್ಲಿ ಇಂಥದ್ದೊಂದು ಬೆಳವಣಿಗೆ ಆಗಿದೆ. ಹಬ್ಬದ ಋತುವಿನ ಆರಂಭದೊಂದಿಗೆ ಕಾಳುಮೆಣಸಿನ ಬೆಲೆಗಳು ಏರಲಾರಂಭಿಸಿದವು. ಕಳೆದ ಒಂದು ವಾರದಲ್ಲಿ ಶೇ 5ರಷ್ಟು ಏರಿಕೆಯಾಗಿ ಪ್ರತಿ ಕೇಜಿಗೆ 511 ರೂಪಾಯಿಗೆ ತಲುಪಿತು. ಮುಂದಿನ ವರ್ಷದ ಆರಂಭದಲ್ಲಿ ಕೊಯ್ಲು ಅವಧಿಯು ಪೂರ್ಣ ಪ್ರಮಾಣಕ್ಕೆ ಹೋಗುವವರೆಗೆ ಬೆಲೆಗಳು ಹೆಚ್ಚಾಗಿರುತ್ತವೆ ಎಂದು ವ್ಯಾಪಾರಿಗಳು ಮತ್ತು ರಫ್ತುದಾರರು ನಿರೀಕ್ಷಿಸುತ್ತಾರೆ. ಕಾಳುಮೆಣಸು ಕೊಯ್ಲು ಕಾಲವು ಡಿಸೆಂಬರ್‌ನಿಂದ ಪ್ರಾರಂಭವಾಗಿ, ಮಾರ್ಚ್‌ವರೆಗೆ ಇರುತ್ತದೆ. ಪ್ರತಿಕೂಲ ವಾತಾವರಣದ ಕಾರಣ ಮುಂದಿನ ವರ್ಷ ಕಡಿಮೆ ಬೆಳೆ ಆಗಬಹುದು ಎಂಬ ವರದಿಗಳಿಂದ ಈ ಬೆಲೆ ಹೆಚ್ಚಳಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿದೆ.
ಇತರ ಕಾಳುಮೆಣಸು ಉತ್ಪಾದಿಸುವ ದೇಶಗಳಿಗಿಂತ ಭಿನ್ನವಾಗಿ, ಭಾರತೀಯ ಕಾಳುಮೆಣಸು ಬೆಲೆಗಳನ್ನು ಹೆಚ್ಚಾಗಿ ದೇಶೀಯ ಬೇಡಿಕೆಯಿಂದ ನಿರ್ಧರಿಸಲಾಗುತ್ತದೆ. ವಾರ್ಷಿಕ ಉತ್ಪಾದನೆಯ ಸುಮಾರು 60,000 ಟನ್‌ಗಳ ಸಿಂಹಪಾಲನ್ನು ಹೊಂದಿದೆ. “ಕ್ಯಾಟರಿಂಗ್, ಹೋಟೆಲ್‌ಗಳು, ಮದುವೆಗಳು ಮತ್ತು ಖಾರದ ತಯಾರಕರಿಂದ ಹೆಚ್ಚಿನ ಬೇಡಿಕೆಯಿದೆ. ವಿಶೇಷವಾಗಿ ಹರ್ಯಾಣ, ಗುಜರಾತ್ ಮತ್ತು ರಾಜಸ್ಥಾನದ ಆಹಾರ ಉದ್ಯಮದಿಂದ ಬೇಡಿಕೆ ಹೆಚ್ಚಿದೆ,” ಎಂದು ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಹೇಳಿದ್ದಾರೆ.
ವಿಯೆಟ್ನಾಂನಲ್ಲಿ ಉತ್ಪಾದನೆ ಕುಸಿತ
ಚೀನಾ ತನ್ನ ಖರೀದಿಯನ್ನು ಹೆಚ್ಚಿಸಿದ್ದರಿಂದ ಮತ್ತು ಕರಿಮೆಣಸಿನ ಅತಿದೊಡ್ಡ ಉತ್ಪಾದಕ ವಿಯೆಟ್ನಾಂನಲ್ಲಿ ಉತ್ಪಾದನೆಯು ಕುಸಿದಿದ್ದರಿಂದ ಜಾಗತಿಕ ಮೆಣಸು ಬೆಲೆಗಳು ಜೂನ್‌ನಿಂದ ಏರಿವೆ. “ವಿಯೆಟ್ನಾಂ, ಬ್ರೆಜಿಲ್ ಮತ್ತು ಇಂಡೋನೇಷ್ಯಾದಲ್ಲಿ ಬೆಲೆಗಳು ಪ್ರತಿ ಟನ್‌ಗೆ 4,300ರಿಂದ 4,500 ಯುಎಸ್ಡಿಯಲ್ಲಿ ವಹಿವಾಟು ನಡೆಸುತ್ತಿವೆ. ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ,” ಎಂದು ಬಾಫ್ನಾ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೋಜನ್ ಮಲೈಲ್ ಹೇಳಿದ್ದಾರೆ. ಮಲೇಷ್ಯಾದ ಮೆಣಸು ಪ್ರತಿ ಟನ್‌ಗೆ 5,200 ಯುಎಸ್ಡಿಗೆ ಮಾರಾಟವಾಗುತ್ತಿದ್ದು, ಭಾರತೀಯ ಮೆಣಸು ಪ್ರತಿ ಟನ್‌ಗೆ 6,780 ಡಾಲರ್ನಂತೆ ಅತ್ಯಧಿಕ ಬೆಲೆಯನ್ನು ಹೊಂದಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ಆಗಿಲ್ಲ.
ದೇಶೀಯ ಬೇಡಿಕೆ ಹೆಚ್ಚಾದಂತೆ ಕಳೆದೆರಡು ತಿಂಗಳಲ್ಲಿ ಭಾರತೀಯ ಕಾಳುಮೆಣಸಿನ ಬೆಲೆಗಳು ಹೆಚ್ಚಾಗತೊಡಗಿದವು. ವರ್ಷದಿಂದ ವರ್ಷಕ್ಕೆ ಶೇ 30ರಷ್ಟು ಹೆಚ್ಚಳವಾಗಿದೆ. 2017ರಲ್ಲಿ ಕಾಳುಮೆಣಸಿನ ಬೆಲೆ ಕೇಜಿಗೆ 500 ರೂಪಾಯಿಗಳನ್ನು ಮೀರಿತ್ತು ಮತ್ತು ಪ್ರತಿ ಕೇಜಿಗೆ 600 ರೂಪಾಯಿಗಿಂತ ಕಡಿಮೆಯಲ್ಲಿ ನಿಂತಿತ್ತು. “ವಿಯೆಟ್ನಾಂನಿಂದ ಮ್ಯಾನ್ಮಾರ್ ಮೂಲಕ ಭಾರತಕ್ಕೆ ಸಾಕಷ್ಟು ಅಕ್ರಮ ಆಮದು ಬರುತ್ತಿತ್ತು. ಆದರೆ ಮ್ಯಾನ್ಮಾರ್‌ನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ನಿಂತುಹೋಗಿದೆ. ಇದು ಉತ್ತರ ಭಾರತದ ಮಾರುಕಟ್ಟೆಗಳಿಗೆ ಹೋಗುತ್ತಿತ್ತು. ಇದರಿಂದ ಬೆಲೆ ಏರಿಕೆಗೆ ಕಾರಣವಾಗಿರಬಹುದು,’’ ಎಂದು ಹೇಳಲಾಗುತ್ತದೆ. ವಿಶ್ಲೇಷಕರ ಪ್ರಕಾರ, ಶ್ರೀಲಂಕಾದಿಂದ ನೂರಾರು ಟನ್ ಕಾಳುಮೆಣಸು ಆಮದು ಸಾಗಣೆಯನ್ನು ನ್ಯಾಯಾಲಯದ ಮೊಕದ್ದಮೆಯಿಂದಾಗಿ ತಡೆಹಿಡಿಯಲಾಗಿದೆ.
ಭಾರತವು ಕಾಳುಮೆಣಸಿನ ನಿವ್ವಳ ಆಮದುದಾರ
ಕಳೆದ ಕೆಲವು ವರ್ಷಗಳಲ್ಲಿ ಭಾರತದ ಕಾಳುಮೆಣಸು ರಫ್ತು ಸುಮಾರು 16,000ರಿಂದ 17,000 ಟನ್‌ಗಳಷ್ಟು ಸ್ಥಗಿತಗೊಂಡಿದೆ. ಬಹುಪಾಲು ವಾಲ್ಯೂಮ್ ವಿಯೆಟ್ನಾಂ ಮತ್ತು ಶ್ರೀಲಂಕಾದಿಂದ ಆಮದು ಮಾಡಿಕೊಳ್ಳಲಾದ ಕಾಳುಮೆಣಸಿನ ಮೌಲ್ಯವರ್ಧನೆಯಾಗಿದೆ. ಇದರ ಪರಿಣಾಮವಾಗಿ ಭಾರತವು ಕಾಳುಮೆಣಸಿನ ನಿವ್ವಳ ಆಮದುದಾರನಾಗಿ ಮಾರ್ಪಟ್ಟಿದೆ. ರಫ್ತಿಗಾಗಿ ಕಾಳುಮೆಣಸಿನ ಆಮದು 2021ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ 22,469 ಟನ್‌ಗಳಷ್ಟಿದ್ದವು, ಇದು ವರ್ಷದಿಂದ ವರ್ಷಕ್ಕೆ ಶೇ 37 ಶೇಕಡಾ ಹೆಚ್ಚಳವಾಗಿದೆ. ರಫ್ತುಗಳಲ್ಲಿ ಭಾರತೀಯ ಕಾಳುಮೆಣಸಿನ ಪಾಲು ಈಗ ಕಡಿಮೆಯಾಗಿದೆ. ಅದಕ್ಕೆ ಕಾರಣ ಏನೆಂದೆ ಹೆಚ್ಚಿನ ಬೆಲೆಗಳು. ರಫ್ತಿನ ಮೇಲೆ ಅವಲಂಬಿತ ಆಗಿರುವ ವಿಯೆಟ್ನಾಂ ಮತ್ತು ಬ್ರೆಜಿಲ್‌ಗಿಂತ ಭಿನ್ನವಾಗಿ, ಭಾರತವು ದೃಢವಾದ ದೇಶೀಯ ಮಾರುಕಟ್ಟೆಯನ್ನು ಹೊಂದಿದೆ.
ಸರಕು ಸಾಗಣೆ ದರ ಹೆಚ್ಚಳ ಮತ್ತು ಕಂಟೇನರ್ ಕೊರತೆಯು ಮೆಣಸು ಸಾಗಣೆ ಮೇಲೆ ಪರಿಣಾಮ ಬೀರಿದೆ. “ಅಮೆರಿಕಕ್ಕೆ ಸರಕು ಸಾಗಣೆ ದರವು ಪ್ರತಿ ಕಂಟೇನರ್‌ಗೆ 15,000 ಯುಎಸ್ಡಿಗೆ ಅಂದರೆ ಐದು ಪಟ್ಟು ಹೆಚ್ಚಾಗಿದೆ. ಅಮೆರಿಕವು ಬ್ರೆಜಿಲ್‌ನಿಂದ ಹೆಚ್ಚಿನ ಕಾಳುಮೆಣಸನ್ನು ಪಡೆಯುತ್ತಿದೆ, ಅದು ಹತ್ತಿರದಲ್ಲಿದೆ,” ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಇರುವವರು. ಕೊಯ್ಲಿನ ಸಮಯದಲ್ಲಿ ರಫ್ತು ದರಗಳನ್ನು ಮುಂಚಿತವಾಗಿ ನಿಗದಿಪಡಿಸಲಾಗುತ್ತದೆ. “ಆದ್ದರಿಂದ ರಫ್ತುದಾರರು ಸರಕು ದರ ಹೆಚ್ಚಳವನ್ನು ತಡೆದುಕೊಳ್ಳುವಂಥ ಮತ್ತು ನಷ್ಟದಲ್ಲಿ ಸಾಗಿಸಲು ಒತ್ತಡ ಸೃಷ್ಟಿಯಾಗಿದೆ,” ಎಂದು ಗುರುತು ಬಹಿರಂಗ ಪಡಿಸಲು ಇಚ್ಛಿಸದ ರಫ್ತುದಾರರೊಬ್ಬರು ಹೇಳಿದ್ದಾರೆ.
ಕರ್ನಾಟಕವು ಭಾರತದ ಪ್ರಮುಖ ಮೆಣಸು ಉತ್ಪಾದಿಸುವ ರಾಜ್ಯ
ವಿಯೆಟ್ನಾಂ ಮತ್ತು ಭಾರತ ಸೇರಿದಂತೆ ವಿಶ್ವದಾದ್ಯಂತ ಶಾಖೆಗಳನ್ನು ಹೊಂದಿರುವ ನೆದರ್‌ಲ್ಯಾಂಡ್ ಮೂಲದ ಮಸಾಲೆ ಸಂಸ್ಕರಣೆ ಮತ್ತು ವಿತರಣಾ ಕಂಪೆನಿಯಾದ ನೆಡ್‌ಸ್ಪೈಸ್‌ನ ಸಂಶೋಧನಾ ವರದಿಯ ಪ್ರಕಾರ, ವಿಯೆಟ್ನಾಂನ ಮೆಣಸು ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಸುಮಾರು ಶೇ 18ರಷ್ಟು ಕಡಿಮೆಯಾಗಿದ್ದು, ಪ್ರತಿಕೂಲ ವಾತಾವರಣ ಹಾಗೂ ಕೊರೊನಾ ಬಿಕ್ಕಟ್ಟಿನಿಂದ ಬೀರಿದ ನಕಾರಾತ್ಮಕ ಪರಿಣಾಮದಿಂದ 2020-21ರಲ್ಲಿ 201,000 ಕುಸಿಯಿತು. ಮಸಾಲೆಗಳ ಎರಡನೇ ಅತಿದೊಡ್ಡ ಉತ್ಪಾದಕ ಬ್ರೆಜಿಲ್‌ನಲ್ಲಿ ಕುಸಿತವು ಅತ್ಯಲ್ಪವಾಗಿತ್ತು. ಇದು ಇತರ ಪ್ರಮುಖ ಉತ್ಪಾದಕರಾದ ಭಾರತ ಮತ್ತು ಇಂಡೋನೇಷ್ಯಾ ಗಳಿಸಿದ ಲಾಭವನ್ನು ಇಲ್ಲದಂತಾಗಿಸಿತು.
ಜಾಗತಿಕ ಉತ್ಪಾದನೆಯು ಹಿಂದಿನ ವರ್ಷಕ್ಕಿಂತ 497,000 ಟನ್‌ಗಳಿಗೆ ಸುಮಾರು ಶೇ 12ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳುತ್ತದೆ. ಆದರೆ ಬೇಡಿಕೆಯು ಕೊವಿಡ್ ನಂತರದಲ್ಲಿ 5,05,000 ಟನ್‌ಗಳಿಗೆ ಹೆಚ್ಚಾಗಿದೆ. ಆದರೂ ಸರಕು ಸಾಗಣೆ ಅಡೆತಡೆಗಳ ಹೊರತಾಗಿಯೂ ರಫ್ತು ಉತ್ತಮವಾಗಿರುವುದರಿಂದ ಜಾಗತಿಕ ದಾಸ್ತಾನು ಸ್ಥಾನವು ಬಲವಾಗಿದೆ ಎಂದು ವರದಿಯಲ್ಲಿದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಿಂದಾಗಿ ಭಾರತದಲ್ಲಿ ಮೆಣಸು ಬೆಳೆಯುತ್ತಿರುವ ರೈತರು ಮುಂದಿನ ವರ್ಷ ಕಡಿಮೆ ಫಸಲು ನಿರೀಕ್ಷಿಸುತ್ತಿದ್ದಾರೆ. ಕರ್ನಾಟಕವು ಭಾರತದ ಪ್ರಮುಖ ಮೆಣಸು ಉತ್ಪಾದಿಸುವ ರಾಜ್ಯವಾಗಿದ್ದು, ಆ ನಂತರ ಕೇರಳ ಇದೆ.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ: ಮುಂದೇನು?
Published On - 2:09 pm, Fri, 19 November 21