ಮುಂಬೈ: ಅಮೆರಿಕ ಸೇರಿದಂತೆ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಆರ್ಥಿಕ ಹಿಂಜರಿತ ಭೀತಿ ಆವರಿಸಿಕೊಂಡಿರುವ ನಡುವೆಯೇ ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಏರಿಕೆ ದಾಖಲಿಸಿವೆ. ಮುಂಬೈ ಷೇರುಪೇಟೆಯು (Bombay Stock Exchange – BSE) ಬೆಳಿಗ್ಗೆ 10.30ರ ಹೊತ್ತಿಗೆ 60,123.33 ಅಂಶ ದಾಟಿತ್ತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕವು (National Stock Exchange – NSE) ಇದೇ ಹೊತ್ತಿಗೆ 17,912.80 ಅಂಶಗಳ ಎತ್ತರ ದಾಖಲಿಸಿದೆ. ಬಿಎಸ್ಇ 60 ಸಾವಿರ ಮತ್ತು ಎನ್ಎಸ್ಇ 17,800 ಅಂಶಗಳನ್ನು ದಾಟಿರುವುದು ಮಹತ್ವದ ವಿದ್ಯಮಾನ ಎಂದೇ ಹೂಡಿಕೆ ಕ್ಷೇತ್ರವು ವಿಶ್ಲೇಷಿಸುತ್ತಿದೆ. ಸಣ್ಣ ಮತ್ತು ಮಧ್ಯ ಪ್ರಮಾಣದ (Small and Midcap) ಕಂಪನಿಗಳ ಸರಾಸರಿ ಮೌಲ್ಯ ಆಧರಿಸಿ ಪ್ರತಿಫಲಿಸುವ ಮಿಡ್-ಸ್ಮಾಲ್ಕ್ಯಾಪ್ ಇಂಡಿಸಿಸ್ ಮೌಲ್ಯ ಶೇ 0.50 ಹೆಚ್ಚಾಗಿದೆ.
ಅಮೆರಿಕ ಷೇರುಪೇಟೆಯಲ್ಲಿಯೂ ಮುನ್ನಡೆ ದಾಖಲಾಗಿದ್ದು ಹಾಗೂ ಏಷ್ಯಾದ ಪ್ರಮುಖ ಷೇರುಪೇಟೆಗಳು ಹೆಚ್ಚಿನ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ್ದು ಭಾರತದ ಹೂಡಿಕೆದಾರರಲ್ಲಿಯೂ ಹೊಸ ಆಸೆ ಹುಟ್ಟಿಸಿದೆ. ಇಂದು ಷೇರುಪೇಟೆ ಎತ್ತರದ ವಹಿವಾಟು ಆರಂಭಿಸಲು ಇದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಜಾಗತಿಕ ಸಂವೇದಿ ಸೂಚ್ಯಂಕಗಳಿಗೆ ಸರಿಸಮನಾಗಿ ಭಾರತದ ಷೇರುಪೇಟೆಯು ಸಹ ಇತ್ತೀಚಿನ ದಿನಗಳಲ್ಲಿ ಸತತ ಕುಸಿತ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಷೇರುಪೇಟೆ ನಿಧಾನವಾಗಿ ಕರಡಿ ಹಿಡಿತಕ್ಕೆ (Bear Market) ಸಿಲುಕುತ್ತಿದೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿ, ಹೂಡಿಕೆದಾರರ ಆತ್ಮವಿಶ್ವಾಸ ಕುಸಿಯುತ್ತಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors – FII) ಭಾರತದ ಕಂಪನಿಗಳಲ್ಲಿ ಮಾಡಿದ್ದ ಹೂಡಿಕೆ ಹಿಂಪಡೆಯುವ ಪ್ರಕ್ರಿಯೆ ಶುರು ಮಾಡಿದ್ದರು. ಆದರೆ ಭಾರತೀಯ ಮ್ಯೂಚುವಲ್ ಫಂಡ್, ವಿಮಾ ಕಂಪನಿಗಳು ಷೇರುಗಳನ್ನು ಖರೀದಿಸುವ ಮೂಲಕ ಮಾರುಕಟ್ಟೆಗೆ ಸ್ಥಿರತೆ ಮರಳುವಂತೆ ಮಾಡಿದ್ದವು. ಇದೀಗ ಹೂಡಿಕೆದಾರರ ವಿಶ್ವಾಸ ಮರುಸ್ಥಾಪನೆಯಾಗಿದ್ದು, ಷೇರುಪೇಟೆ ಸತತ ಏರಿಕೆ ದಾಖಲಿಸುತ್ತಿದೆ.
‘ಭಾರತದ ಷೇರುಪೇಟೆ ಕರಡಿ ಹಿಡಿತದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಲೆಂದೇ ಈಗ ವಿಜೃಂಭಿಸುತ್ತಿದೆ ಎಂಬ ವಿಶ್ಲೇಷಣೆಗಳನ್ನು ಸಂಪೂರ್ಣ ಒಪ್ಪಲು ಸಾಧ್ಯವಿಲ್ಲ. ಭಾರತದ 50 ಅತಿದೊಡ್ಡ ಕಂಪನಿಗಳ ಬಂಡವಾಳ ಗಾತ್ರ ಪ್ರತಿನಿಧಿಸುವ ನಿಫ್ಟಿ50 (Nifty50) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತಲೂ ಕೇವಲ ಶೇ 4.3 ಅಂಶಗಳಷ್ಟೇ ಕಡಿಮೆಯಿದೆ. ಅಮೆರಿಕದ ಎಸ್ಅಂಡ್ಪಿ500, ನಾಸ್ಡಾಕ್ ಸಹ ಪುಟಿದೆದ್ದಿವೆ. ಕಳೆದ ಜೂನ್ನಿಂದ ಈಚೆಗೆ ಅಮೆರಿಕ ಷೇರುಪೇಟೆ ಶೇ 24ರಷ್ಟು ಏರಿಕೆ ಕಂಡಿದೆ’ ಎಂದು ಜಿಯೊಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಮುಖ್ಯ ಹೂಡಿಕೆ ಕಾರ್ಯತಂತ್ರ ನಿಪುಣ ವಿ.ಕೆ.ವಿಜಯ್ಕುಮಾರ್ (VK Vijaykumar) ಹೇಳಿದರು.
ಅಮೆರಿಕದಲ್ಲಿಯೂ ಹಣದುಬ್ಬರ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್ ಬಡ್ಡಿದರಗಳನ್ನು ಈ ಹಿಂದಿನಂತೆ ಹೆಚ್ಚಿಸುವ ಸಾಧ್ಯತೆ ಕಡಿಮೆಯಿದೆ. ಭಾರತದಲ್ಲಿಯೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಖರೀದಿ ಮುಂದುವರಿಸಿದ್ದಾರೆ. ಹೀಗಾಗಿ ಮುಂದಿನ ಕೆಲ ದಿನಗಳವರೆಗೆ ಷೇರುಪೇಟೆ ಮೌಲ್ಯ ಇದೇ ರೀತಿ ಹೆಚ್ಚುತ್ತಾ ಸಾಗಲಿದೆ. ಈ ಅವಧಿಯಲ್ಲಿ ಯಾವುದೇ ಕಂಪನಿಯನ್ನು ಅಡ್ಡಾದಿಡ್ಡಿ ಖರೀದಿ ಅಥವಾ ಮಾರಾಟ ಮಾಡಬಾರದು. ಕಡಿಮೆ ಮೊತ್ತಕ್ಕೆ ಸಿಗುವ ಉತ್ತಮ ಕಂಪನಿಗಳ ಖರೀದಿಗೆ ಗಮನ ಹರಿಸಬೇಕು’ ಎಂದು ಅವರು ಕಿವಿಮಾತು ಹೇಳಿದ್ದಾರೆ.
Published On - 10:54 am, Wed, 17 August 22