
ನವದೆಹಲಿ, ಮೇ 28: ಸಾಮಾನ್ಯವಾಗಿ ಉದ್ಯೋಗಿಗಳಿಗೆ ಸಂಬಳ ಡಬಲ್ ಆಗಲು ಏಳೆಂಟು ವರ್ಷಗಳೇ ಆಗಬಹುದು. ಆದರೆ, ದೆಹಲಿಯ ಸಾಫ್ಟ್ವೇರ್ ಎಂಜಿನಿಯರ್ವೊಬ್ಬರು ಒಂದೇ ವರ್ಷದಲ್ಲಿ ಬಹುತೇಕ ಎಂಟತ್ತು ಪಟ್ಟು ಹೆಚ್ಚು ಸಂಬಳದ ಕೆಲಸ ಗಿಟ್ಟಿಸಿದ್ದಾನೆ. ಈ ಕುರಿತು ಆತ ಎಕ್ಸ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದು ಈಗ ವೈರಲ್ ಆಗುತ್ತಿದೆ. ಆ ಪೋಸ್ಟ್ನಲ್ಲಿ ಬರೆದಿರುವ ಪ್ರಕಾರ, ಈತ ಸದ್ಯ ವರ್ಷಕ್ಕೆ 5.5 ಲಕ್ಷ ರೂ ಸಂಬಳದಲ್ಲಿದ್ದಾನೆ. ಆಗಲೇ 45 ಲಕ್ಷ ರೂ ಸಂಬಳದ ಕೆಲಸದ ಆಫರ್ ಪಡೆದಿದ್ದಾನಂತೆ. ಹಾಗಂತ, ದೇವೇಶ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಈತ, ಮಹತ್ವ ಕೊಡಬೇಕಿರುವುದು ಕೆಲಸಕ್ಕೆ ಹೊರತು ಸಂಬಳಕ್ಕಲ್ಲ ಎನ್ನುವ ಸಲಹೆಯನ್ನೂ ನೀಡಿದ್ದಾನೆ.
‘ನಾನು ಐಬಿಎಂನಲ್ಲಿ 5.5 ಲಕ್ಷ ರೂ ಸಿಟಿಸಿಯೊಂದಿಗೆ ಒಂದು ವರ್ಷದ ಹಿಂದೆ ಪೂರ್ಣಾವಧಿ ವೃತ್ತಿ ಆರಂಭಿಸಿದೆ. ಈಗ ಒಂದು ವರ್ಷದೊಳಗೆ ನನಗೆ 45 ಲಕ್ಷ ರೂ ಸಿಟಿಸಿಯ ಕೆಲಸದ ಆಫರ್ ಬಂದಿದೆ. ನನ್ನಂಥ ಮಧ್ಯವರ್ಗದ ವ್ಯಕ್ತಿಗೆ ಇದು ಇನ್ನೂ ಕನಸಿನಂತೆಯೇ ಇದೆ’ ಎಂದು ದೇವೇಶ್ ತನ್ನ ಪೋಸ್ಟ್ನಲ್ಲಿ ಬರೆದಿದ್ದಾನೆ.
ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?
ದೇವೇಶ್ ಅವರ ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಇದೆಲ್ಲವೂ ವಾಸ್ತವದಲ್ಲಿ ಸಾಧ್ಯವಿಲ್ಲದ ಸಂಗತಿ. ಈತ ಹೇಳುತ್ತಿರುವುದು ಕಟ್ಟುಕಥೆ ಎಂಬಿತ್ಯಾದಿ ಕಾಮೆಂಟ್ಗಳು ಬಂದಿವೆ. ಇದಾದ ಬಳಿಕ ದೇವೇಶ್ ಅವರು ಸರಣಿ ಪೋಸ್ಟ್ ಹಾಕಿ, ಯುವ ಉದ್ಯೋಗಾಂಕ್ಷಿಗಳಿಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ.
‘ಸಲಹೆ ನೀಡುವಷ್ಟು ಅನುಭವಿ ನಾನಲ್ಲವಾದರೂ ಒಂದು ಮಾತು ಹೇಳಲು ಬಯಸುತ್ತೇನೆ. ನಿಮ್ಮ ವೃತ್ತಿಯ ಆರಂಭದಲ್ಲಿ ಹಣದ ಬದಲು ಕೆಲಸಕ್ಕೆ ಆದ್ಯತೆ ಕೊಡಿ. ನಿಮಗೆ ಒಳ್ಳೆಯ ಪ್ಯಾಕೇಜ್ ಕೆಲಸದ ಆಫರ್ ಸಿಗಲಿಲ್ಲವೆಂದರೂ ಕಡಿಮೆ ಸಂಬಳದ ಕೆಲಸಕ್ಕೆ ಸೇರಿಕೊಂಡು, ಚೆನ್ನಾಗಿ ಕೆಲಸ ಮಾಡಿ ಬಳಿಕ ದೊಡ್ಡ ಜಂಪ್ ಪಡೆಯಿರಿ. ನೀವು ವೃತ್ತಿಜಗತ್ತಿಗೆ ಪ್ರವೇಶ ಪಡೆಯುವುದು ಮುಖ್ಯ’ ಎಂದು ದೇವೇಶ್ ಹೇಳಿದ್ದಾರೆ.
ಇದನ್ನೂ ಓದಿ: ವಯಸ್ಸಾದವರು ನಿರುಪಯುಕ್ತರಲ್ಲ; ದೇಶದ ಸಂಪತ್ತಿಗೆ ಕೊಡುಗೆ ನೀಡಬಲ್ಲರು: ರೋಹಿಣಿ ನಿಲೇಕಣಿ ಫಿಲಾಂಟ್ರೋಪೀಸ್
‘ಐದಾರು ಲಕ್ಷ ರೂ ಪ್ಯಾಕೇಜ್ ಪಡೆಯುತ್ತಿದ್ದವ ಹೇಗೆ 45 ಲಕ್ಷ ರೂ ಪ್ಯಾಕೇಜ್ನ ಸಂಬಳಕ್ಕೆ ಜಂಪ್ ಮಾಡಲು ಸಾಧ್ಯವಾಯಿತು ಎಂದು ಹಲವು ಅನುಮಾನಿಸುತ್ತಿದ್ದಾರೆ. ಆದರೆ, MAANG ಅಥವಾ FAANG ಎಂದು ನಾವು ಏನು ಹೇಳುತ್ತೇವೋ, ಆ ಕಂಪನಿಗಳಲ್ಲಿ ಬೇಸಿಕ್ ಪೇ ಮತ್ತು ಸಿಟಿಸಿ ಮುಂಚಿತವಾಗಿ ನಿಗದಿಯಾಗಿರುತ್ತದೆ. ನಿಮ್ಮ ಹಿಂದಿನ ಸಂಬಳದ ಮೂಲಕ ನಿಮ್ಮನ್ನು ಆ ಕಂಪನಿಗಳು ಅಳೆಯುವುದಿಲ್ಲ. ಎಲ್ಲರಿಗೂ ಅದೇ ಸಂಬಳ ಇರುತ್ತದೆ,’ ಎಂದು ದೇವೇಶ್ ವಿವರಿಸಿದ್ದಾರೆ.
Never mentioned it but tbh, I still sometimes think I am still in a dream, bcoz I started my full time career last year at IBM with just a CTC of 5.5 LPA, and now having an offer of over 45 LPA CTC in hand within an year, for a middle class guy like me, it’s still a dream❤️.
— Devesh (@theywayshhh) May 26, 2025
ದೇವೇಶ್ ತಮ್ಮ ಈ ಮೇಲಿನ ಪೋಸ್ಟ್ನಲ್ಲಿ ಪ್ರಸ್ತಾಪಿಸಿದ FAANG ಎಂದರೆ ಫೇಸ್ಬುಕ್, ಆ್ಯಪಲ್, ಅಮೆಜಾನ್, ಗೂಗಲ್ ಇತ್ಯಾದಿ ತಂತ್ರಜ್ಞಾನ ಕಂಪನಿಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ