
ನವದೆಹಲಿ, ಮೇ 14: ಭಾರತದ ರಫ್ತು ಮತ್ತು ಹೂಡಿಕೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಉತ್ತೇಜನ ನೀಡುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 15 ರಿಂದ 20 ರವರೆಗೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಮತ್ತು ಪ್ರಮುಖ ಯುರೋಪಿಯನ್ ದೇಶಗಳ ಬಹು-ರಾಷ್ಟ್ರ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಮಹತ್ವದ ಐದು ರಾಷ್ಟ್ರಗಳ ವಿದೇಶಿ ಪ್ರವಾಸವನ್ನು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (FIEO) ಬಲವಾಗಿ ಸ್ವಾಗತಿಸಿದೆ. ಪ್ರಧಾನಿ ಮೋದಿ ಅವರು ಈ ಪ್ರವಾಸದಲ್ಲಿ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡಲಿದ್ದು, ಆಯಾ ದೇಶಗಳ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಎಫ್‌ಐಇಒ (FIEO) ಅಧ್ಯಕ್ಷ ಎಸ್. ಸಿ. ರಾಲ್ಹನ್ ಅವರ ಪ್ರಕಾರ, ಪ್ರಧಾನಿ ಭೇಟಿ ನೀಡುತ್ತಿರುವ ಈ ಎಲ್ಲಾ ದೇಶಗಳೊಂದಿಗೆ ಭಾರತವು ಈಗಾಗಲೇ ಜಂಟಿಯಾಗಿ 70 ಬಿಲಿಯನ್ ಡಾಲರ್ಗಿಂತಲೂ (ಸುಮಾರು 6.6 ಲಕ್ಷ ಕೋಟಿ ರೂ.) ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿದೆ. ಪ್ರಧಾನಿಯವರ ಈ ಹೈ-ಲೆವೆಲ್ ಭೇಟಿಯು ಕ್ರಾಸ್-ಬಾರ್ಡರ್ ಹೂಡಿಕೆ, ತಂತ್ರಜ್ಞಾನ ವಿನಿಮಯ ಮತ್ತು ಮುಕ್ತ ವ್ಯಾಪಾರಕ್ಕೆ ಹೊಸ ವೇಗವನ್ನು ನೀಡಲಿದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು
ಯುಎಇ ಜೊತೆ ಇಂಧನ ಮತ್ತು ಆರ್ಥಿಕ ಭದ್ರತೆ: ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವ ಬೆನ್ನಲ್ಲೇ ಮೋದಿ ಅವರ ಯುಎಇ ಭೇಟಿ ಗಮರ್ನಾಹವಾಗಿದೆ. ಭಾರತದ ಇಂಧನ ಸ್ಥಿರತೆ, ದೀರ್ಘಾವಧಿಯ ತೈಲ ಪೂರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಯುಎಇ ಹೂಡಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಭೇಟಿ ನೆರವಾಗಲಿದೆ.
ಯುರೋಪ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದ (FTA) ಮತ್ತು ಭಾರತ-ಇಎಫ್‌ಟಿಎ (EFTA) ವ್ಯಾಪಾರ ಒಪ್ಪಂದಗಳ ಹಿನ್ನೆಲೆಯಲ್ಲಿ ಈ ಪ್ರವಾಸ ಆಯೋಜನೆಗೊಂಡಿದೆ.
ಭವಿಷ್ಯದ ತಂತ್ರಜ್ಞಾನಗಳು: ಗ್ರೀನ್ ಹೈಡ್ರೋಜನ್ (ಹಸಿರು ಇಂಧನ), ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ (AI), ರಕ್ಷಣಾ ವಲಯದ ಉತ್ಪಾದನೆ ಮತ್ತು ಕ್ಲೀನ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಯುರೋಪ್ ನಾಯಕರೊಂದಿಗೆ ಮೋದಿ ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ
ಪ್ರಧಾನಿ ಅವರ ಈ ಭೇಟಿಯಿಂದಾಗಿ ಭಾರತದ ಇಂಜಿನಿಯರಿಂಗ್, ಫಾರ್ಮಾಸ್ಯುಟಿಕಲ್ಸ್ (ಔಷಧ), ಶುದ್ಧ ಇಂಧನ, ಜವಳಿ, ಆಹಾರ ಸಂಸ್ಕರಣೆ ಮತ್ತು ಡಿಜಿಟಲ್ ವ್ಯಾಪಾರ ವಲಯದ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳು ಮುಕ್ತವಾಗಲಿವೆ. ಅಷ್ಟೇ ಅಲ್ಲದೆ, ಪ್ರಧಾನಿಯವರು ‘ಯುರೋಪಿಯನ್ ರೌಂಡ್ ಟೇಬಲ್ ಫಾರ್ ಇಂಡಸ್ಟ್ರಿ’ ಮತ್ತು ‘ಭಾರತ-ನಾರ್ವೆ ಬಿಸಿನೆಸ್ ಮತ್ತು ರಿಸರ್ಚ್ ಶೃಂಗಸಭೆ’ಯಲ್ಲೂ ಭಾಗವಹಿಸಲಿದ್ದಾರೆ.
ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತವನ್ನು ವಿಶ್ವಾಸಾರ್ಹ ಆರ್ಥಿಕ ಪಾಲುದಾರ ಹಾಗೂ ಜಾಗತಿಕ ಪ್ರಗತಿಯ ಪ್ರಮುಖ ಚಾಲನಾ ಶಕ್ತಿಯಾಗಿ ಬಿಂಬಿಸಲು ಈ 6 ದಿನಗಳ ವಿದೇಶಿ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ