
ನವದೆಹಲಿ, ಮೇ 28: ಭಾರತದ ಔದ್ಯಮಿಕ ಉತ್ಪಾದನಾ ಸೂಚ್ಯಂಕವು (IIP- Index of Industrial Production) ಏಪ್ರಿಲ್ ತಿಂಗಳಲ್ಲಿ ಶೇ. 2.7ರಷ್ಟು ಏರಿಕೆ ಆಗಿದೆ. 2025ರ ಮಾರ್ಚ್ ತಿಂಗಳಲ್ಲಿ ಐಐಪಿ ಶೇ. 3ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಏಪ್ರಿಲ್ನಲ್ಲಿ ಏರಿಕೆಯ ಪ್ರಮಾಣ ತುಸು ಕಡಿಮೆ ಆಗಿದೆ. ಆದರೆ, ಕ್ಷೇತ್ರದ ತಜ್ಞರು ಏಪ್ರಿಲ್ನಲ್ಲಿ ಐಐಪಿ ಶೇ. 1.27ಕ್ಕೆ ಕುಸಿಯಬಹುದು ಎಂದು ಅಂದಾಜು ಮಾಡಿದ್ದರು. ಅವರ ನಿರೀಕ್ಷೆಗಿಂತ ಹೆಚ್ಚು ಬೆಳವಣಿಗೆ ದಾಖಲಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (Ministry of Statistics and Programme implementation) ಇಂದು ಬುಧವಾರ ಈ ದತ್ತಾಂಶವನ್ನು ಬಿಡುಗಡೆ ಮಾಡಿತು.
ಒಟ್ಟಾರೆ ಔದ್ಯಮಿಕ ಉತ್ಪಾದನೆ ಏರಿಕೆ ಪ್ರಮಾಣ ಕಡಿಮೆ ಆಗಲು ಪ್ರಮುಖ ಕಾರಣವಾಗಿರುವುದು ವಿದ್ಯುತ್ ಉತ್ಪಾದನೆ ಮತ್ತು ಮೈನಿಂಗ್ ಉತ್ಪಾದನೆ ಇಳಿಕೆಗೊಂಡಿರುವುದಾಗಿದೆ. ಮಾರ್ಚ್ ತಿಂಗಳಲ್ಲಿ ಶೆ. 6.3ರಷ್ಟು ಏರಿಕೆ ಕಂಡಿದ್ದ ವಿದ್ಯುತ್ ಉತ್ಪಾದನೆ ಏಪ್ರಿಲ್ನಲ್ಲಿ ಹೆಚ್ಚಳ ಕಂಡಿರುವುದು ಶೇ. 1.1 ಮಾತ್ರ. ಶೇ. 0.4ರಷ್ಟು ಏರಿಕೆ ಕಂಡಿದ್ದ ಮೈನಿಂಗ್ ಕ್ಷೇತ್ರದ ಉತ್ಪಾದನೆ ಏಪ್ರಿಲ್ನಲ್ಲಿ ಮೈನಸ್ 0.2 ಪ್ರತಿಶತದಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?
ಆದರೆ, ಏಪ್ರಿಲ್ನಲ್ಲಿ ಐಐಪಿ ಇಂಡೆಕ್ಸ್ ಅನ್ನು ಉಳಿಸಿದ್ದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ. ಮಾರ್ಚ್ನಲ್ಲಿ ಶೇ. 3ರಷ್ಟು ಹೆಚ್ಚಿದ್ದ ಈ ಕ್ಷೇತ್ರದ ಉತ್ಪಾದನೆಯು ಏಪ್ರಿಲ್ನಲ್ಲಿ ಶೇ. 3.4ರಷ್ಟು ಏರಿಕೆ ಕಂಡಿದೆ.
ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ತಯಾರಿಕೆ ಏಪ್ರಿಲ್ನಲ್ಲಿ ಬರೋಬ್ಬರಿ ಶೇ. 17ರಷ್ಟು ಹೆಚ್ಚಳ ಕಂಡಿದೆ. ಮೋಟಾರು ವಾಹನಗಳು, ಟ್ರೇಲರ್ಗಳ ತಯಾರಿಕೆಯೂ ಶೇ. 15.4ರಷ್ಟು ಹೆಚ್ಚಳ ಆಗಿದೆ. ಇದು ಏಪ್ರಿಲ್ ತಿಂಗಳಲ್ಲಿ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಟ್ಟಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಎಚ್ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?
ಮಾರ್ಚ್ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ 23 ಕೈಗಾರಿಕಾ ಗುಂಪುಗಳಲ್ಲಿ 13 ಸಕಾರಾತ್ಮಕ ಬೆಳವಣಿಗೆ ಹೊಂದಿದ್ದುವು. ಏಪ್ರಿಲ್ನಲ್ಲಿ 16 ಗುಂಪುಗಳು ಪಾಸಿಟಿವ್ ಆಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ