Andhra vs Karnataka: ಬೆಂಗಳೂರಿನಿಂದ ಎಚ್ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?
Reports say Andhra CM trying to shift HAL projects to his state: ಬೆಂಗಳೂರಿನ ಐಕಾನಿಕ್ ಕಂಪನಿಗಳಲ್ಲಿ ಒಂದೆನಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಎಎಂಸಿಎ ಮತ್ತು ಎಲ್ಸಿಎ ಏರ್ಕ್ರಾಫ್ಟ್ಗಳನ್ನು ಬೆಂಗಳೂರಿನಲ್ಲಿ ತಯಾರಿಸುತ್ತಿದೆ. ಇವೆರಡು ಯೋಜನೆಗಳನ್ನು ಬೆಂಗಳೂರಿನಿಂದ ತಮ್ಮ ರಾಜ್ಯಕ್ಕೆ ಸ್ಥಳಾಂತರಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದಾರೆನ್ನುವ ಸುದ್ದಿ ಇದೆ. ಕರ್ನಾಟಕದ ಸಚಿವ ಎಂ.ಬಿ. ಪಾಟೀಲ್ ಅವರು ವಿಚಾರವನ್ನು ಬಲವಾಗಿ ಆಕ್ಷೇಪಿಸುವುದಾಗಿ ಹೇಳಿದ್ದಾರೆ.

ಬೆಂಗಳೂರು, ಮೇ 27: ಎಚ್ಎಎಲ್ ಅಭಿವೃದ್ಧಿಪಡಿಸುತ್ತಿರುವ ಎಎಂಸಿಎ ಮತ್ತು ಎಲ್ಸಿಎ ಏರ್ಕ್ರಾಫ್ಟ್ ಯೋಜನೆಗಳನ್ನು (HAL aircraft projects) ಬೆಂಗಳೂರಿನಿಂದ ಆಂಧ್ರಕ್ಕೆ ಸ್ಥಳಾಂತರಿಸುವ ಪ್ರಯತ್ನ ಆಗಿದೆ ಎನ್ನುವಂತಹ ವರದಿಗಳು ಬಂದಿವೆ. ಆಂಧ್ರ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಇದೊಂದು ಪ್ರಸ್ತಾಪ ಮಾಡಿದ್ಧಾರೆನ್ನುವ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಕರ್ನಾಟಕ ಸರ್ಕಾರ ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾಗಿ ಮಾತನಾಡಲು ಮುಂದಾಗಿದೆ.
ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ನಿನ್ನೆ ಈ ಬಗ್ಗೆ ಮಾತನಾಡಿ, ಎಚ್ಎಎಲ್ನ ಯಾವುದೇ ಪ್ರಾಜೆಕ್ಟ್ ಅನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವ ಯಾವುದೇ ಪ್ರಸ್ತಾಪವನ್ನೂ ಆಕ್ಷೇಪಿಸುವುದಾಗಿ ತಿಳಿಸಿದ್ದಾರೆ. ‘ಎಚ್ಎಎಲ್ನ ರೆಕ್ಕೆಗಳನ್ನು ಬೆಂಗಳೂರಿನ ಹೊರಗೆ ಸಾಗಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ಕಂಪನಿ ಏರ್ಬಸ್ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ
ಅನಂತಪುರ ಜಿಲ್ಲೆಯಲ್ಲಿ ಎಚ್ಎಎಲ್ಗೆ ಸ್ಥಳ ಕೊಡುವ ಆಫರ್ ಕೊಟ್ಟರಾ ನಾಯ್ಡು?
ಚಾಲನೆಯಲ್ಲಿರುವ ವರದಿ ಪ್ರಕಾರ, ಆಂಧ್ರದ ಅನಂತಪುರಂ ಜಿಲ್ಲೆಯಲ್ಲಿರುವ ಲೇಪಾಕ್ಷಿ ಮತ್ತು ಮಡಕಸಿರ ಭಾಗದಲ್ಲಿ ಎಚ್ಎಎಲ್ನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ ಮತ್ತು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ ತಯಾರಿಕಾ ಘಟಕಗಳಿಗೆ 10,000 ಎಕರೆ ಜಾಗವನ್ನು ನೀಡುವುದಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ ಎನ್ನುವ ಸುದ್ದಿ ಇದೆ.
ಲೇಪಾಕ್ಷಿ ಮಡಕಸಿರ ಭಾಗವು ಕರ್ನಾಟಕದ ಗಡಿಗೆ ಸಮೀಪವೇ ಇದೆ. ಬೆಂಗಳೂರು ಏರ್ಪೋರ್ಟ್ನಿಂದ ಒಂದು ಗಂಟೆಯ ಪ್ರಯಾಣವಷ್ಟೇ ಇರುವುದು. ಕಿಯಾ ಕಾರ್ ಫ್ಯಾಕ್ಟರಿ ಕೂಡ ಅನಂತಪುರ ಜಿಲ್ಲೆಯಲ್ಲೇ ಇದೆ. ಬೆಂಗಳೂರಿಗೂ ಕೂಡ ಇದು ಹೊಂದಿಕೊಂಡಂತೆ ಇದೆ. ಸಾಕಷ್ಟು ಸ್ಥಳವೂ ಲಭ್ಯ ಇದೆ. ಹೀಗಾಗಿ, ಎಚ್ಎಎಲ್ ಪ್ರಾಜೆಕ್ಟ್ಗಳಿಗೆ ಇದು ಸೂಕ್ತ ಸ್ಥಳ ಎನ್ನುವಂತಹ ವಾದವನ್ನು ನಾಯ್ಡು ಮುಂದಿಟ್ಟಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಲು ಎಎಂಸಿಎ ಯೋಜನೆಗೆ ಸರ್ಕಾರ ಚಾಲನೆ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಬೆಂಗಳೂರಿನಲ್ಲಿ ಸಾಕಷ್ಟು ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಗಳನ್ನು ಹೊಂದಿದೆ. ಎಎಂಸಿಎ ಮತ್ತು ಎಲ್ಸಿಎ ಘಟಕಗಳೂ ಕೂಡ ಬೆಂಗಳೂರಿನಲ್ಲಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನವನ್ನು ಸಚಿವ ಎಂಬಿ ಪಾಟೀಲ್ ವಿರೋಧಿಸಿದ್ದಾರೆ.
‘ಹೊಸ ಘಟಕ ಕೇಳುವುದರಲ್ಲಿ ಅರ್ಥ ಇದೆ. ಈಗಾಗಲೇ ಕರ್ನಾಟಕದಲ್ಲಿ ಇರುವಂಥದ್ದನ್ನು ವರ್ಗಾಯಿಸುವಂತೆ ಕೇಳುವುದು ತಪ್ಪು. ಮಾಧ್ಯಮ ವರದಿಗಳು ನಿಜವೇ ಆದಲ್ಲಿ ಇದು ಬಹಳ ಗಂಭೀರ ಸಂಗತಿಯಾಗುತ್ತದೆ. ಚಂದ್ರಬಾಬು ನಾಯ್ಡು ಅವರಿಗೆ ಈ ಸೂಕ್ಷ್ಮತೆ ಗೊತ್ತಿರುತ್ತೆಂದು ಭಾವಿಸಿದ್ದೇನೆ. ಅವರು ನಿಜವಾಗಿಯೂ ಈ ಮನವಿ ಮಾಡಿದ್ದರೆ ನನಗೆ ಬಹಳ ಅಚ್ಚರಿಯಾಗುತ್ತದೆ’ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Tue, 27 May 25