ಜಪಾನ್ ಹಿಂದಿಕ್ಕಿದ್ದೇವೆಂದು ತೃಪ್ತರಾಗದಿರಿ… ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ
Anand Mahindra comment on India's GDP growth story: ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ ಎನಿಸಿರುವುದಕ್ಕೆ ಉದ್ಯಮಿ ಆನಂದ್ ಮಹೀಂದ್ರ ಸಂತಸಪಟ್ಟಿದ್ದಾರೆ. ಆದರೆ, ಇಷ್ಟಕ್ಕೆ ಸಮಾಧಾನ ಆಗುವಂತಿಲ್ಲ. ಅತೃಪ್ತಿ ಮುಂದುವರಿಯಬೇಕು. ಭಾರತದ ಮುಂದಿನ ಜಿಗಿತವು ಜಿಡಿಪಿ ತಲಾದಾಯದಲ್ಲಾಗಿರಬೇಕು ಎಂದಿದ್ದಾರೆ.

ನವದೆಹಲಿ, ಮೇ 26: ಭಾರತವು ಜಿಡಿಪಿ ವಿಚಾರದಲ್ಲಿ ಜಪಾನ್ ಅನ್ನು ಹಿಂದಿಕ್ಕಿ, ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿದೆ. ಐಎಂಎಫ್ನ ಡಾಟಾ ಉಲ್ಲೇಖಿಸಿ ನೀತಿ ಆಯೋಗ್ನ ಸಿಇಒ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ. ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದರಿಂದ ಈ ವರ್ಷವೇ ಜಪಾನ್ ಅನ್ನು ಭಾರತ ಹಿಂದಿಕ್ಕುವ ನಿರೀಕ್ಷೆ ಇತ್ತು. ಅದು ಸಾಧ್ಯವಾಗಿದೆ. ಇದೇ ವೇಳೆ, ಜಿಡಿಪಿ ಎಷ್ಟು ಜಿಗಿದರೂ ಏನಂತೆ, ತಲಾದಾಯ (GDP per capita) ಕೆಳಮಟ್ಟದಲ್ಲೇ ಇದೆಯಲ್ಲಾ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಜಿಡಿಪಿ ತಲಾದಾಯದಲ್ಲಿ ಭಾರತವು 144ನೇ ಸ್ಥಾನದಲ್ಲಿದೆಯಂತೆ. ಈ ಜಿಡಿಪಿ ತಲಾದಾಯದ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಮತ್ತು ಹಲವು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ಮತ್ತು ಸ್ಪಂದನೆ ನೀಡುತ್ತಲೇ ಇರುವ ಆನಂದ್ ಮಹೀಂದ್ರ ಅವರು ಭಾರತದ ಜಿಡಿಪಿ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಅದೇ ವೇಳೆ, ಜಪಾನ್ ಅನ್ನು ಭಾರತ ಜಿಡಿಪಿಯಲ್ಲಿ ಹಿಂದಿಕ್ಕಿರುವುದನ್ನು ಸಂಭ್ರಮಿಸಬೇಕಿಲ್ಲ. ಅತೃಪ್ತತೆ ಮುಂದುವರಿಯಬೇಕು. ಭಾರತದ ಮುಂದಿನ ಜಿಗಿತವು ಜಿಡಿಪಿ ತಲಾದಾಯದಲ್ಲಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿ.ವ್ಯಾ.; ಜಾಗತಿಕವಾಗಿ 3ನೇ ಸ್ಥಾನದಲ್ಲಿ
‘ಜಿಡಿಪಿಯಲ್ಲಿ ಜರ್ಮನಿಯನ್ನು ಹಿಂದಿಕ್ಕುವುದು ಮಾತ್ರವಲ್ಲ, ಭಾರತದ ಮುಂದಿನ ಜಿಗಿತವು ಜಿಡಿಪಿ ತಲಾದಾಯದ್ದಾಗಿರಬೇಕು. ಆಡಳಿತ, ಮೂಲಸೌಕರ್ಯ, ತಯಾರಿಕೆ, ಶಿಕ್ಷಣ ಮತ್ತು ಬಂಡವಾಳ ಸೌಕರ್ಯ ಕ್ಷೇತ್ರದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳು ಮುಂದುವರಿಯಬೇಕು. ಆಗ ನಾವು ಏರುಗತಿಯಲ್ಲಿ ಇರಲು ಸಾಧ್ಯವಾಗುತ್ತದೆ’ ಎಂದು ಮಹೀಂದ್ರ ಗ್ರೂಪ್ನ ಛೇರ್ಮನ್ ಆದ ಅವರು ಸಲಹೆ ನೀಡಿದ್ದಾರೆ.
When I was in business school, the idea of India overtaking Japan in GDP felt like a distant, almost audacious dream. Today, that milestone is no longer theoretical — we’ve become the world’s fourth largest economy.
It’s no small achievement. Japan has long been an economic… pic.twitter.com/28LgnC4Osx
— anand mahindra (@anandmahindra) May 25, 2025
ಜಪಾನ್ ಹಿಂದಿಕ್ಕಿದ್ದು ಕಡಿಮೆ ಸಾಧನೆಯಲ್ಲ…
‘ನಾನು ಬ್ಯುಸಿನೆಸ್ ಸ್ಕೂಲ್ನಲ್ಲಿದ್ದಾಗ ಭಾರತವು ಜಿಡಿಪಿಯಲ್ಲಿ ಜಪಾನ್ ಅನ್ನು ಹಿಂದಿಕ್ಕುವ ಸಾಧ್ಯ ಬಹಳ ದೂರದ ಮತ್ತು ಕನಸಿನ ಮಾತಾಗಿತ್ತು. ಇವತ್ತು ಅದು ಕನಸಾಗಿ ಉಳಿದಿಲ್ಲ. ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದೇವೆ.
ಇದನ್ನೂ ಓದಿ: ಜಪಾನ್ ಅನ್ನು ಹಿಂದಿಕ್ಕಿರುವ ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ: ನೀತಿ ಆಯೋಗ್ ಸಿಇಒ
‘ಇದೇನೂ ಸಣ್ಣ ಸಾಧನೆಯಲ್ಲ. ಅದ್ಭತ ಉತ್ಪನ್ನಶೀಲತೆ ಮತ್ತು ಕ್ಷಮತೆ ಇರುವ ಜಪಾನ್ನ ಆರ್ಥಿಕತೆ ಬಹಳ ಕಾಲದಿಂದ ಬಲಿಷ್ಠವಾಗಿತ್ತು. ಅವರನ್ನು ಸರಿಗಟ್ಟಿರುವುದು ಭಾರತೀಯರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ’ ಎಂದೂ ಆನಂದ್ ಮಹೀಂದ್ರ ಹೇಳಿದ್ಧಾರೆ.
ಜಿಡಿಪಿ ತಲಾದಾಯ ಎಂದರೇನು? ಭಾರತದ್ದು ಎಷ್ಟಿದೆ?
ಜಿಡಿಪಿ ತಲಾದಾಯ ಎಂದರೆ ಜನಸಂಖ್ಯೆಗೆ ಜಿಡಿಪಿಯನ್ನು ಹಂಚಿಕೆ ಮಾಡಿದಾಗ ಬರುವ ಸಂಖ್ಯೆಯಾಗಿರುತ್ತದೆ. ಭಾರತದ ಜಿಡಿಪಿ 4.18 ಟ್ರಿಲಿಯನ್ ಡಾಲರ್ ಇದ್ದು, ಜನಸಂಖ್ಯೆ 140 ಕೋಟಿ ಇದ್ದಾಗ, ಪ್ರತೀ ವ್ಯಕ್ತಿಗೆ ಎಷ್ಟು ಡಾಲರ್ ಆಗುತ್ತದೆ ಎಂಬುದನ್ನು ಗಣಿಸಿದಾಗ ಸಿಗುವ ಮೊತ್ತವೇ ಜಿಡಿಪಿ ತಲಾದಾಯ.
ಭಾರತದ ಜಿಡಿಪಿ ತಲಾದಾಯ 2025ರಲ್ಲಿ 2,880 ಡಾಲರ್ ಇದೆ. ಜಪಾನ್ನ ಜಿಡಿಪಿ ಭಾರತದಷ್ಟೇ ಇದ್ದರೂ ಅದರ ತಲಾದಾಯವು ಬರೋಬ್ಬರಿ 33,960 ಡಾಲರ್ ಇದೆ. ಅಂದರೆ, ಭಾರತದಕ್ಕಿಂತ 11 ಪಟ್ಟು ಹೆಚ್ಚು ತಲಾದಾಯ ಹೊಂದಿದೆ.
ಇದನ್ನೂ ಓದಿ: ಬ್ರಿಟನ್ನಿಂದ ಗುಳೆ ಹೊರಟ ಶ್ರೀಮಂತರ ಪಟ್ಟಿಗೆ ಭಾರತ ಮೂಲದ ಶ್ರವಿಣ್ ಸೇರ್ಪಡೆ; ಸಾಹುಕಾರರು ಯುಕೆ ಬಿಡಲು ಏನು ಕಾರಣ?
ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಸ್ವಾಭಾವಿಕವಾಗಿ ಜಿಡಿಪಿ ತಲಾದಾಯ ಕಡಿಮೆ ಇದೆ. ಚೀನಾ ದೇಶದಲ್ಲೂ ಜನಸಂಖ್ಯೆ ಹೆಚ್ಚಿರುವುದರಿಂದ 19 ಟ್ರಿಲಿಯನ್ ಆರ್ಥಿಕತೆಗೆ ಪ್ರತಿಯಾಗಿ ತಲಾದಾಯವು 13,690 ಡಾಲರ್ ಮಾತ್ರವೇ ಇರುವುದು.
ಬ್ರಿಟನ್ ದೇಶದ ಆರ್ಥಿಕತೆಯು ಭಾರತ, ಜಪಾನ್ಗಿಂತ ಕೆಳಗೆ ಇದೆಯಾದರೂ ಅದರ ಜಿಡಿಪಿ ತಲಾದಾಯವು 55,000 ಡಾಲರ್ನಷ್ಟಿದೆ. ಭಾರತದಂತೆ ಉದಯೋನ್ಮುಖ ಆರ್ಥಿಕತೆ ಎನಿಸಿದ ಬ್ರೆಜಿಲ್ ದೇಶ ಜಿಡಿಪಿಯಲ್ಲಿ 10ನೇ ಸ್ಥಾನದಲ್ಲಿದೆಯಾದರೂ ಅದರ ತಲಾದಾಯವು 10,000 ಡಾಲರ್ನಷ್ಟಿದೆ. ಅದಕ್ಕೆ ಒಂದು ಕಾರಣ ಕಡಿಮೆ ಜನಸಂಖ್ಯೆ ಇರುವುದಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Mon, 26 May 25








