Renewable energy: ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿ.ವ್ಯಾ.; ಜಾಗತಿಕವಾಗಿ 3ನೇ ಸ್ಥಾನದಲ್ಲಿ
India's renewable energy capicity reaches 232 GW: ಭಾರತದಲ್ಲಿ ಮರುಬಳಕೆ ಇಂಧನ ಅಥವಾ ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯವು 232 ಗಿಗಾ ವ್ಯಾಟ್ ಮುಟ್ಟಿರುವುದು ತಿಳಿದುಬಂದಿದೆ. 2014ಕ್ಕೆ ಹೋಲಿಸಿದರೆ ಭಾರತದಲ್ಲಿ ರಿನಿವಬಲ್ ಎನರ್ಜಿ ಮೂರು ಪಟ್ಟು ಹೆಚ್ಚಾಗಿದೆ. ಕಳೆದ 10 ವರ್ಷದಲ್ಲಿ ಸೌರವಿದ್ಯುತ್, ವಾಯು ವಿದ್ಯುತ್, ಬಯೋ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಏರಿಕೆ ಆಗಿರುವುದು ಗೊತ್ತಾಗಿದೆ.

ನವದೆಹಲಿ, ಮೇ 25: ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ (Installed renewable energy capacity) 232 ಗಿಗಾ ವ್ಯಾಟ್ ತಲುಪಿದೆ. ಕಳೆದ ಒಂದು ದಶಕದಲ್ಲಿ ಇದು ಮೂರು ಪಟ್ಟು ಹೆಚ್ಚಾಗಿದೆ. 2014ರ ಮಾರ್ಚ್ ತಿಂಗಳಲ್ಲಿ ಭಾರತದ ಈ ಮರುಬಳಕೆ ಶಕ್ತಿ ಸಾಮರ್ಥ್ಯ 75.52 ಗಿಗಾ ವ್ಯಾಟ್ ಇತ್ತು. ಭಾರತದಲ್ಲಿ 10 ವರ್ಷದಲ್ಲಿ ರಿನಿವಬಲ್ ಎನರ್ಜಿ ಯೋಜನೆಗಳು ಸಾಕಷ್ಟು ಚಾಲ್ತಿಗೆ ಬಂದಿದ್ದು, ಸೌರಶಕ್ತಿ ವಿದ್ಯುತ್ ದರಗಳೂ ಕೂಡ ಶೇ. 80ರಷ್ಟು ಇಳಿಕೆ ಆಗಿವೆ. ಈಗ ಒಂದು ಯುನೆಟ್ಗೆ 10.95 ರೂ ಮಾತ್ರವೇ ಇದೆ.
ರಿನಿವಬಲ್ ಎನರ್ಜಿಗಳಲ್ಲಿ ಸೌರಶಕ್ತಿ, ವಾಯುಶಕ್ತಿ ಅಷ್ಟೇ ಅಲ್ಲದೆ ಜಲವಿದ್ಯುತ್ ಕೂಡ ಸೇರಿದೆ. ಜಲವಿದ್ಯುತ್ ಘಟಕಗಳು ಭಾರತದಲ್ಲಿ ಮೊದಲಿಂದಲೂ ಇವೆ. ಕಳೆದ ಹತ್ತು ವರ್ಷದಲ್ಲಿ ಸೌರಶಕ್ತಿ, ವಾಯುಶಕ್ತಿಯಂತಹ ಪರ್ಯಾಯ ವಿದ್ಯುತ್ ಉತ್ಪಾದನಾ ಘಟಕಗಳು ಸಾಕಷ್ಟು ಹೆಚ್ಚಾಗಿವೆ. 2014ರ ಮಾರ್ಚ್ನಲ್ಲಿ ಭಾರತದಲ್ಲಿ ಸೌರಶಕ್ತಿ ಕೆಪಾಸಿಟಿ 2.82 ಗಿಗಾ ವ್ಯಾಟ್ನಷ್ಟು ಇತ್ತು. ಇವತ್ತು ಅದು 108 ಗಿಗಾ ವ್ಯಾಟ್ಗೆ ಏರಿದೆ. ವಿಂಡ್ ಎನರ್ಜಿ ಅಥವಾ ವಾಯುಶಕ್ತಿ ವಿದ್ಯುತ್ ಸಾಮರ್ಥ್ಯ 21 ಗಿಗಾವ್ಯಾಟ್ನಷ್ಟು ಇದ್ದದ್ದು 51 ಗಿಗಾ ವ್ಯಾಟ್ ಮುಟ್ಟಿದೆ.
ಇದನ್ನೂ ಓದಿ: ಸೂಪರ್ ಫಾಸ್ಟ್ ಆಗಿ ಚಾರ್ಚ್ ಆಗುವ ಸೋಡಿಯಂ ಬ್ಯಾಟರಿ ತಯಾರಿಸಿದ ಬೆಂಗಳೂರಿನ ವಿಜ್ಞಾನಿಗಳು; ಸ್ವಾವಲಂಬನೆಯ ಹಾದಿ ಸುಗಮ
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೋಲಾರ್ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಸಖತ್ ಹೆಚ್ಚಾಗಿದೆ. ಹತ್ತು ವರ್ಷಗಳ ಹಿಂದೆ ಸೋಲಾರ್ ಸೆಲ್ ಮತ್ತು ವೇಫರ್ಗಳು ಭಾರತದಲ್ಲಿ ತಯಾರಾಗುತ್ತಿದ್ದುದು ತೀರಾ ಕಡಿಮೆ. ಇವತ್ತು 25 ಗಿಗಾವ್ಯಾಟ್ನಷ್ಟು ಸೋಲಾರ್ ಸೆಲ್ ತಯಾರಿಕೆ ಆಗಿದೆ.
ರಿನಿವಬಲ್ ಎನರ್ಜಿ ಸಾಮರ್ಥ್ಯದಲ್ಲಿ ಮೂರನೇ ಸ್ಥಾನದಲ್ಲಿ ಭಾರತ
- ಚೀನಾ: 1,827 ಗಿಗಾ ವ್ಯಾಟ್
- ಅಮೆರಿಕ: 428 ಗಿಗಾ ವ್ಯಾಟ್
- ಭಾರತ: 232 ಗಿಗಾ ವ್ಯಾಟ್
- ಬ್ರೆಜಿಲ್: 213 ಗಿಗಾ ವ್ಯಾಟ್
- ಜರ್ಮನಿ: 179 ಗಿಗಾ ವ್ಯಾಟ್
- ಜಪಾನ್: 132 ಗಿಗಾ ವ್ಯಾಟ್
- ಕೆನಡಾ: 110 ಗಿಗಾ ವ್ಯಾಟ್
- ಸ್ಪೇನ್: 88.5 ಗಿಗಾ ವ್ಯಾಟ್
- ಫ್ರಾನ್ಸ್: 74 ಗಿಗಾ ವ್ಯಾಟ್
- ಇಟಲಿ: 72 ಗಿಗಾ ವ್ಯಾಟ್
ಇದನ್ನೂ ಓದಿ: ಬ್ರಿಟನ್ನಿಂದ ಗುಳೆ ಹೊರಟ ಶ್ರೀಮಂತರ ಪಟ್ಟಿಗೆ ಭಾರತ ಮೂಲದ ಶ್ರವಿಣ್ ಸೇರ್ಪಡೆ; ಸಾಹುಕಾರರು ಯುಕೆ ಬಿಡಲು ಏನು ಕಾರಣ?
ಇನ್ನೈದು ವರ್ಷದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆಯಾ ಭಾರತ?
2030ರಷ್ಟರಲ್ಲಿ ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಇನ್ನೈದು ವರ್ಷದಲ್ಲಿ ಪ್ರತೀ ವರ್ಷ ಕನಿಷ್ಠ 50 ಗಿಗಾ ವ್ಯಾಟ್ನಷ್ಟು ರಿನಿವಬಲ್ ಎನರ್ಜಿ ಕೆಪಾಸಿಟಿ ಹೆಚ್ಚಾಗುವ ಅವಶ್ಯಕತೆ ಇದೆ. ಈ ಗುರಿ ನೆರವೇರಿದರೆ ಅಮೆರಿಕಕ್ಕಿಂತ ಹೆಚ್ಚು ರಿನಿವಬಲ್ ಎನರ್ಜಿ ಸಾಮರ್ಥ್ಯ ಭಾರತದ್ದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








