ಜಪಾನ್ ಅನ್ನು ಹಿಂದಿಕ್ಕಿರುವ ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ: ನೀತಿ ಆಯೋಗ್ ಸಿಇಒ
India overtakes Japan to become world's 4th largest economy: ಅತಿದೊಡ್ಡ ಆರ್ಥಿಕತೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿರುವ ಭಾರತ 4ನೇ ಸ್ಥಾನದಲ್ಲಿದೆ ಎಂದು ನೀತಿ ಆಯೋಗ್ನ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ಜರ್ಮನಿಯನ್ನು ಮುಂದಿನ ಮೂರು ವರ್ಷದೊಳಗೆ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ನೀತಿ ಆಯೋಗ್ನ 10ನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಐಫೋನ್ ತಯಾರಿಕೆ ಅಗ್ಗದಲ್ಲಿ ಆಗುತ್ತದೆ ಎಂದಿದ್ದಾರೆ.

ನವದೆಹಲಿ, ಮೇ 25: ಭಾರತವು ಜಪಾನ್ ಅನ್ನು ಹಿಂದಿಕ್ಕೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ (economy) ದೇಶವಾಗಿದೆ ಎಂದು ನೀತಿ ಆಯೋಗ್ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ಶನಿವಾರ ನಡೆದ ನೀತಿ ಆಯೋಗ್ನ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸುಬ್ರಹ್ಮಣ್ಯಂ, ಒಟ್ಟಾರೆ ಆರ್ಥಿಕ ಮತ್ತು ಜಾಗತಿಕ ರಾಜಕೀಯ ವಾತಾರಣವು ಭಾರತಕ್ಕೆ ಅನುಕೂಲಕರವಾಗಿದೆ ಎಂದಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಐಎಂಎಫ್ನ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿರುವುದನ್ನು ಹೇಳಿದ್ದಾರೆ.
‘ನಾನೀಗ ಮಾತನಾಡುತ್ತಿರುವಂತೆಯೇ ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವೆನಿಸಿದ್ದೇವೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದೇವೆ. ಅಮೆರಿಕ, ಚೀನಾ, ಜರ್ಮನಿ ಮಾತ್ರವೇ ಈಗ ಭಾರತಕ್ಕಿಂತ ದೊಡ್ಡ ಆರ್ಥಿಕತೆ ಹೊಂದಿವೆ. ಈಗ ನಾವಂದುಕೊಂಡ ರೀತಿಯಲ್ಲೇ ಸಾಗಿದಲ್ಲಿ ಎರಡೂವರೆ ಮೂರು ವರ್ಷದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಲಿದ್ದೇವೆ’ ಎಂದು ನೀತಿ ಆಯೋಗ್ ಸಿಇಒ ತಿಳಿಸಿದ್ದಾರೆ.
ಇದನ್ನೂ ಓದಿ: ಇಪಿಎಫ್ ಮೇಲೆ ಶೇ. 8.25 ಬಡ್ಡಿದರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
ಆ್ಯಪಲ್ ಫೋನ್ ಭಾರತದಲ್ಲಿ ಕಡಿಮೆ ಬೆಲೆಗೆ ತಯಾರಿ: ಸುಬ್ರಹ್ಮಣ್ಯಂ
ಆ್ಯಪಲ್ನ ಐಫೋನ್ ಅನ್ನು ಅಮೆರಿಕದಲ್ಲಿ ತಯಾರಿಸದೇ ಹೋದರೆ ಅದಕ್ಕೆ ಶೇ. 25ರಷ್ಟು ಟ್ಯಾರಿಫ್ ಹಾಕುವುದಾಗಿ ಡೊನಾಲ್ಡ್ ಟ್ರಂಪ್ ಹಾಕಿರುವ ಬೆದರಿಕೆಯನ್ನು ಭಾರತದ ನೀತಿ ಆಯೋಗ್ ಸಿಇಒ ತಳ್ಳಿಹಾಕಿದ್ದಾರೆ. ‘ಟ್ಯಾರಿಫ್ ಕ್ರಮ ಇನ್ನೂ ಅನಿಶ್ಚಿತ ಎನಿಸಿದೆ. ಈಗಿರುವ ಅಂಶಗಳನ್ನು ಗಮನಿಸಿದರೆ ಐಫೋನ್ ತಯಾರಿಕೆಯ ವೆಚ್ಚ ಭಾರತದಲ್ಲಿ ಅಗ್ಗ ಎನಿಸುತ್ತದೆ’ ಎಂದು ನೀತಿ ಆಯೋಗ್ ಸಿಇಒ ಹೇಳಿದ್ದಾರೆ.
ಅಮೆರಿಕ ಬಿಟ್ಟು ಭಾರತದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ತಯಾರಿಸುವ ಫೋನ್ಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ಹಾಕುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ್ಯಪಲ್ ಹಾಗೂ ಸ್ಯಾಮ್ಸುಂಗ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದ್ರೂ ಶೇ. 25 ಸುಂಕ: ಆ್ಯಪಲ್ಗೆ ಟ್ರಂಪ್ ಬೆದರಿಕೆ
ಕೆಲ ವರ್ಷಗಳ ಹಿಂದಿನವರೆಗೂ ಶೇ. 95 ಐಫೋನ್ಗಳನ್ನು ಚೀನಾದಲ್ಲಿ ತಯಾರಿಸುತ್ತಿದ್ದ ಆ್ಯಪಲ್ ಕಂಪನಿ ಈಗ ಭಾರತದಲ್ಲಿ ತನ್ನ ತಯಾರಿಕೆ ಸೌಲಭ್ಯ ವಿಸ್ತರಿಸುತ್ತಾ ಬಂದಿದೆ. ಈಗ ಹೆಚ್ಚೂಕಡಿಮೆ ಶೇ. 20ರಷ್ಟು ಐಫೋನ್ಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರ್ ಆಗುತ್ತಿವೆ. ಸ್ಯಾಮ್ಸುಂಗ್ ಕಂಪನಿಯೂ ಕೂಡ ಭಾರತದಲ್ಲಿ ತನ್ನ ಹಲವು ಫೋನ್ಗಳನ್ನು ತಯಾರಿಸುತ್ತಿವೆ. ಸ್ಮಾರ್ಟ್ಫೊನ್ ತಯಾರಿಕೆಯು ಭಾರತದಲ್ಲಿ ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




