
ನವದೆಹಲಿ, ಜೂನ್ 3: ಭಾರತದ ಆರ್ಥಿಕತೆಗೆ ಸೇವಾ ವಲಯದಿಂದ (Services Sector) ಮತ್ತೊಂದು ಅತ್ಯಂತ ಆಶಾದಾಯಕ ಸುದ್ದಿ ಹೊರಬಿದ್ದಿದೆ. ಬಲವಾದ ದೇಶೀಯ ಬೇಡಿಕೆ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಿಂದಾಗಿ ಭಾರತದ ಸೇವಾ ವಲಯದ ಬೆಳವಣಿಗೆಯು ಮೇ ತಿಂಗಳಲ್ಲಿ ಕಳೆದ 6 ತಿಂಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಎಸ್‌ಬಿಸಿ (HSBC) ಸಂಸ್ಥೆಯು ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, ಭಾರತದ ಸೇವಾ ವಲಯದ ‘ಖರೀದಿ ವ್ಯವಸ್ಥಾಪಕರ ಸೂಚ್ಯಂಕ’ (Purchasing Managers’ Index – PMI) ಏಪ್ರಿಲ್ ತಿಂಗಳಲ್ಲಿದ್ದ 60.8 ಅಂಕಗಳಿಂದ ಮೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿದಿದೆ.
ಪಿಎಂಐ (PMI) ಎಂಬುದು ಆರ್ಥಿಕತೆಯ ಆರೋಗ್ಯವನ್ನು ಅಳೆಯುವ ಒಂದು ಪ್ರಮುಖ ಸೂಚ್ಯಂಕವಾಗಿದೆ. ಸರಕುಗಳ ಓಡಾಟವಾಗುವ ಸಪ್ಲೈ ಚೈನ್ನ ಮ್ಯಾನೇಜರ್ಗಳ ಮಾಸಿಕ ಸಮೀಕ್ಷೆ ನಡೆಸಿ ಈ ಇಂಡೆಕ್ಸ್ ಅಪ್ಡೇಟ್ ಮಾಡಲಾಗುತ್ತದೆ. ಹೊಸ ವರ್ಕ್ ಆರ್ಡರ್ಗಳು, ಉತ್ಪಾದನೆ, ಉದ್ಯೋಗ, ಸರಬರಾಜು ಅವಧಿ ಮತ್ತು ಸರಕುಗಳ ಸಂಗ್ರಹ, ಈ ಅಂಶಗಳನ್ನು ಪರಿಗಣಿಸಲಾಗುತ್ತದೆ.
ಆರ್ಥಿಕ ತಜ್ಞರ ಪ್ರಕಾರ, ಪಿಎಂಐ ಸೂಚ್ಯಂಕವು 50 ಕ್ಕಿಂತ ಹೆಚ್ಚಿದ್ದರೆ ಅದು ಆ ವಲಯದ ಬೆಳವಣಿಗೆ ಅಥವಾ ವಿಸ್ತರಣೆಯನ್ನು (Expansion) ತೋರಿಸುತ್ತದೆ. ಪಿಎಂಐ ಇಂಡೆಕ್ಸ್ 50 ಕ್ಕಿಂತ ಕಡಿಮೆ ಇದ್ದರೆ ಅದು ಆರ್ಥಿಕ ಕುಸಿತವನ್ನು (Contraction) ಸೂಚಿಸುತ್ತದೆ.
ಭಾರತದ ಸರ್ವಿಸ್ ಸೆಕ್ಟರ್ ಪಿಎಂಐ ಸತತವಾಗಿ 50 ರ ಮಟ್ಟಕ್ಕಿಂತ ಮೇಲೆಯೇ ಉಳಿದುಕೊಂಡು ಬಂದಿದ್ದು, ದೇಶದ ಸೇವಾ ವಲಯವು ಬಲಿಷ್ಠವಾದ ಹಾದಿಯಲ್ಲಿ ಸಾಗುತ್ತಿರುವುದನ್ನು ಇದು ಸಾಬೀತುಪಡಿಸಿದೆ.
ಇದನ್ನೂ ಓದಿ: ಫಾರೆಕ್ಸ್ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ
ಇದನ್ನೂ ಓದಿ: ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ
ಬೆಲೆ ಏರಿಕೆಯ (ಹಣದುಬ್ಬರ) ಒತ್ತಡಗಳ ನಡುವೆಯೂ ಕಂಪನಿಗಳ ವೆಚ್ಚ ನಿರ್ವಹಣೆ ಉತ್ತಮವಾಗಿದೆ ಎಂದು ವರದಿ ಹೇಳಿದೆ. ಮುಂಬರುವ ದಿನಗಳಲ್ಲಿ ಉದ್ಯಮದ ಸ್ಥಿತಿಗತಿಗಳು ಇನ್ನಷ್ಟು ಉತ್ತಮಗೊಳ್ಳಲಿವೆ ಎಂಬ ದೃಢವಾದ ವಿಶ್ವಾಸವನ್ನು ಸೇವಾ ವಲಯದ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.
ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಶೇಕಡಾ 50 ಕ್ಕಿಂತ ಹೆಚ್ಚು ಕೊಡುಗೆ ನೀಡುವ ಸೇವಾ ವಲಯದ ಈ ಭರ್ಜರಿ ಪ್ರಗತಿಯು, ಇಡೀ ದೇಶದ ಆರ್ಥಿಕತೆಯು ಮುಂಬರುವ ತ್ರೈಮಾಸಿಕಗಳಲ್ಲಿ ವೇಗವಾಗಿ ಮುನ್ನಡೆಯಲು ಬಲವಾದ ಅಡಿಪಾಯ ಹಾಕಿಕೊಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ