AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

RBI Denies $12B Gold Sale Claims: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಚಿನ್ನದ ದಾಸ್ತಾನನ್ನು ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಮತ್ತು RBI ಸ್ಪಷ್ಟವಾಗಿ ನಿರಾಕರಿಸಿವೆ. ದೇಶದ ಭೌತಿಕ ಚಿನ್ನದ ಸಂಗ್ರಹ 880.52 ಮೆಟ್ರಿಕ್ ಟನ್‌ಗಳಷ್ಟು ಸುರಕ್ಷಿತವಾಗಿದೆ. ಜಾಗತಿಕ ಚಿನ್ನದ ಬೆಲೆಗಳಲ್ಲಿನ ಏರಿಳಿತ ಮತ್ತು ರೂಪಾಯಿ ಮೌಲ್ಯದ ವ್ಯತ್ಯಾಸದಿಂದ ವಿದೇಶಿ ವಿನಿಮಯ ನಿಧಿಯ ಚಿನ್ನದ ಮೌಲ್ಯದಲ್ಲಿ ಬದಲಾವಣೆಯಾಗಿದೆ ಹೊರತು, ಮಾರಾಟದಿಂದಲ್ಲ ಎಂದು RBI ತಿಳಿಸಿದೆ. ಸಾರ್ವಜನಿಕರು ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಲು ಮನವಿ ಮಾಡಲಾಗಿದೆ.

ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ
ಆರ್‌ಬಿಐImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 03, 2026 | 2:29 PM

Share

ನವದೆಹಲಿ, ಜೂನ್ 3: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸುಮಾರು 12 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹1 ಲಕ್ಷ ಕೋಟಿಗೂ ಅಧಿಕ) ಮೌಲ್ಯದ ಚಿನ್ನವನ್ನು (Gold) ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಅಧಿಕೃತವಾಗಿ ತಿರಸ್ಕರಿಸಿವೆ. ಈ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿರುವ ಬ್ಯಾಂಕ್, ದೇಶದ ಭೌತಿಕ ಚಿನ್ನದ ದಾಸ್ತಾನು 880.52 ಮೆಟ್ರಿಕ್ ಟನ್‌ಗಳಷ್ಟು ಯಾವುದೇ ಬದಲಾವಣೆಯಿಲ್ಲದೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಬ್ಲೂಮ್‌ಬರ್ಗ್ (Bloomberg) ಮಾಧ್ಯಮ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ, ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಆರ್‌ಬಿಐ ಮೇ 22 ಕ್ಕೆ ಕೊನೆಗೊಂಡ ಎರಡು ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂದು ಅಂದಾಜಿಸಿತ್ತು.

ಆರ್‌ಬಿಐ ಮತ್ತು ಸರ್ಕಾರದ ಅಧಿಕೃತ ಸ್ಪಷ್ಟನೆ

ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಇದರ ಫ್ಯಾಕ್ಟ್-ಚೆಕ್ ನಡೆಸಿ, ಈ ವರದಿಯನ್ನು “ಫೇಕ್” (ಸುಳ್ಳು) ಎಂದು ಘೋಷಿಸಿದೆ.

PIB ಮಾಡಿರುವ ಟ್ವೀಟ್

ಇದನ್ನೂ ಓದಿ: ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ

ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ:

  • ದಾಸ್ತಾನು ಸುರಕ್ಷಿತ: ಭಾರತದ ಒಟ್ಟು ಭೌತಿಕ ಚಿನ್ನದ ದಾಸ್ತಾನು ಪ್ರಸ್ತುತ 880.52 ಮೆಟ್ರಿಕ್ ಟನ್​ಗಳಷ್ಟೇ ಇದ್ದು, ಅದರಲ್ಲಿ ಯಾವುದೇ ಕಡಿತವಾಗಿಲ್ಲ.
  • ಹೆಚ್ಚಿದ ಚಿನ್ನದ ಪಾಲು: ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ (Forex Reserves) ಚಿನ್ನದ ಪಾಲು ಸೆಪ್ಟೆಂಬರ್ 2025 ರ ಕೊನೆಯಲ್ಲಿ ಶೇ. 13.92 ರಷ್ಟಿತ್ತು. ಅದು ಮಾರ್ಚ್ 31, 2026 ರ ವೇಳೆಗೆ ಶೇ. 16.70 ಕ್ಕೆ ಮತ್ತು ಮೇ 22, 2026 ರ ವೇಳೆಗೆ ಶೇ. 16.85 ಕ್ಕೆ ಏರಿಕೆಯಾಗಿದೆ.
  • ವಾರ್ಷಿಕ ವರದಿ ದಾಖಲೆ: ಆರ್‌ಬಿಐನ 2025-26ರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಹಿಂದಿನ ವರ್ಷಕ್ಕೆ (879.58 ಮೆಟ್ರಿಕ್ ಟನ್) ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಚಿನ್ನದ ದಾಸ್ತಾನು 0.94 ಮೆಟ್ರಿಕ್ ಟನ್‌ನಷ್ಟು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ.

ಫಾರೆಕ್ಸ್ ಕುಸಿತಕ್ಕೆ ಅಸಲಿ ಕಾರಣವೇನು?

ಮಾಧ್ಯಮಗಳ ವರದಿಗೆ ಮೂಲ ಕಾರಣವಾಗಿದ್ದು ಆರ್‌ಬಿಐನ ಚಿನ್ನದ ಮೌಲ್ಯದಲ್ಲಾದ ಏರಿಳಿತ. ಮೇ 8 ರಂದು ಸುಮಾರು 120 ಬಿಲಿಯನ್ ಡಾಲರ್‌ನಷ್ಟಿದ್ದ ಆರ್‌ಬಿಐ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯವು, ಮೇ 22 ರ ವೇಳೆಗೆ 114.8 ಬಿಲಿಯನ್ ಡಾಲರ್‌ಗೆ ಕುಸಿದಿತ್ತು.

ಆದರೆ, ಈ ಫಾರೆಕ್ಸ್ ಮೌಲ್ಯದ ಕುಸಿತವು ಚಿನ್ನವನ್ನು ಮಾರಾಟ ಮಾಡಿದ್ದರಿಂದ ಆಗಿದ್ದಲ್ಲ. ಬದಲಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳಲ್ಲಿ ಉಂಟಾದ ಏರಿಳಿತಗಳು (International Gold Prices) ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ವ್ಯತ್ಯಾಸದಿಂದಾಗಿ ಈ ಮೌಲ್ಯ ಬದಲಾಗಿದೆಯೇ ಹೊರತು, ಬ್ಯಾಂಕಿನ ಬಳಿ ಇರುವ ಭೌತಿಕ ಚಿನ್ನದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ

ಬಂಗಾರ ಎಲ್ಲಿದೆ?

ಆರ್‌ಬಿಐ ಹೊಂದಿರುವ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದಲ್ಲಿ, ಶೇಕಡಾ 77 ರಷ್ಟು ಭಾಗವನ್ನು ಭಾರತದ ಒಳಗೇ ಸುರಕ್ಷಿತವಾಗಿ ಇಡಲಾಗಿದೆ. ವಿದೇಶಗಳಲ್ಲಿರುವ ಇನ್ನುಳಿದ ಭಾರತೀಯ ಚಿನ್ನದ ದಾಸ್ತಾನುಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ (Bank of England) ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ಸಂಸ್ಥೆಗಳಲ್ಲಿ ಇರಿಸಲಾಗಿದೆ.

ಇಂತಹ ಸೂಕ್ಷ್ಮ ಆರ್ಥಿಕ ವಿಷಯಗಳ ಕುರಿತು ಸಾರ್ವಜನಿಕರು ಮಾಧ್ಯಮಗಳ ಊಹಾಪೋಹಗಳನ್ನು ನಂಬದೆ, ಆರ್‌ಬಿಐ ನಿಯತಕಾಲಿಕವಾಗಿ ಬಿಡುಗಡೆ ಮಾಡುವ ಅಧಿಕೃತ ಬುಲೆಟಿನ್ ಹಾಗೂ ಮಾಹಿತಿಗಳನ್ನು ಮಾತ್ರ ಅವಲಂಬಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಜನರಲ್ಲಿ ಮನವಿ ಮಾಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Wed, 3 June 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More