
ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಆಪಲ್ (Apple) ತನ್ನ ವಾರ್ಷಿಕ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 9, 2026ರಂದು ಆಯೋಜಿಸಲು ಸಿದ್ಧತೆ ನಡೆಸಿದೆ. ಅಮೆರಿಕದ ಕ್ಯುಪರ್ಟಿನೊದಲ್ಲಿರುವ ಆಪಲ್ ಪಾರ್ಕ್‌ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಯುಎಸ್ ಸಮಯದ ಪ್ರಕಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಭಾರತೀಯ ಸಮಯದ ಪ್ರಕಾರ ರಾತ್ರಿ 10.30ಕ್ಕೆ ವೀಕ್ಷಿಸಬಹುದು. ಆಪಲ್‌ನ ಅಧಿಕೃತ ವೆಬ್‌ಸೈಟ್ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಲಭ್ಯವಾಗಲಿದೆ. ಈ ಬಾರಿ ಆಪಲ್ ತನ್ನ ಕಾರ್ಯಕ್ರಮಕ್ಕೆ “ಸರ್ಪ್ರೈಸ್ ಅಂಡ್ ಶೈನ್” ಎಂಬ ಟ್ಯಾಗ್‌ಲೈನ್ ಬಳಸಿದೆ.
ಈ ಬಾರಿಯ ಐಫೋನ್ ಬಿಡುಗಡೆ ಕಾರ್ಯಕ್ರಮ ಆಪಲ್‌ಗೆ ಮತ್ತೊಂದು ಕಾರಣಕ್ಕೂ ವಿಶೇಷವಾಗಲಿದೆ. ಕಂಪನಿಯ ಸಿಇಒ ಬದಲಾವಣೆಯ ನಂತರ ನಡೆಯಲಿರುವ ಪ್ರಮುಖ ಉತ್ಪನ್ನ ಬಿಡುಗಡೆ ಇದಾಗಿದೆ. ಸೆಪ್ಟೆಂಬರ್ 1, 2026ರಿಂದ ಟಿಮ್ ಕುಕ್ ಅವರ ನಂತರ ಜಾನ್ ಟರ್ನರ್ ಆಪಲ್‌ನ ಸಿಇಒ ಆಗಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಹೊಸ ಐಫೋನ್‌ಗಳ ಜೊತೆಗೆ ಹೊಸ ನಾಯಕತ್ವದ ಅಡಿಯಲ್ಲಿ ಆಪಲ್‌ನ ಮುಂದಿನ ದಿಕ್ಕು ಹೇಗಿರಲಿದೆ ಎಂಬುದರ ಮೇಲೂ ತಂತ್ರಜ್ಞಾನ ಕ್ಷೇತ್ರದ ಗಮನವಿದೆ.
ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್‌ಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಈ ಎರಡೂ ಪ್ರೀಮಿಯಂ ಮಾದರಿಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ನೀಡಲು ಆಪಲ್ ಮುಂದಾಗಿದೆ.
ಐಫೋನ್ 18 ಪ್ರೊ ಸರಣಿಯಲ್ಲಿ ಸುಧಾರಿತ 2nm ತಂತ್ರಜ್ಞಾನದಲ್ಲಿ ತಯಾರಿಸಲಾದ A20 ಪ್ರೊ ಚಿಪ್‌ಸೆಟ್ ಇರಬಹುದು. ಇದರ ಜೊತೆಗೆ ಆಪಲ್ ಅಭಿವೃದ್ಧಿಪಡಿಸಿರುವ C2 ಮೋಡೆಮ್‌ನ್ನೂ ಬಳಸುವ ಸಾಧ್ಯತೆ ಇದೆ. ಡಿಸ್ಪ್ಲೇಗೆ ಸಂಬಂಧಿಸಿದಂತೆ, ಫೇಸ್ ಐಡಿ ತಂತ್ರಜ್ಞಾನವನ್ನು ಸ್ಕ್ರೀನ್‌ನ ಕೆಳಭಾಗದಲ್ಲಿ ಅಳವಡಿಸುವ ಬಗ್ಗೆ ವದಂತಿಗಳಿವೆ. ಫೋನ್‌ನ ಹಿಂಭಾಗದಲ್ಲಿ ದೊಡ್ಡದಾದ ಕ್ಯಾಮೆರಾ ಬಂಪ್ ಇರಬಹುದು.
ಬಣ್ಣಗಳ ವಿಚಾರದಲ್ಲೂ ಆಪಲ್ ಹೊಸತನ ತರಬಹುದು ಎನ್ನಲಾಗುತ್ತಿದೆ. ಐಫೋನ್ 18 ಪ್ರೊ ಸರಣಿಯಲ್ಲಿ ಡಾರ್ಕ್ ಚೆರ್ರಿ ಎಂಬ ಹೊಸ ಬಣ್ಣದ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ. ಇನ್ನು ಐಫೋನ್ 18 ಪ್ರೊ ಮ್ಯಾಕ್ಸ್‌ನಲ್ಲಿ ಉತ್ತಮ ಛಾಯಾಗ್ರಹಣಕ್ಕಾಗಿ ವೇರಿಯಬಲ್ ಅಪರ್ಚರ್ ಕ್ಯಾಮೆರಾ ನೀಡಬಹುದು ಎಂಬ ವರದಿಗಳೂ ಇವೆ.
ಈ ಬಾರಿಯ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯಬಹುದಾದ ಮತ್ತೊಂದು ಸಾಧನವೆಂದರೆ ಆಪಲ್‌ನ ಮೊದಲ ಮಡಿಸಬಹುದಾದ ಐಫೋನ್. ಹಲವು ವರ್ಷಗಳಿಂದ ಆಪಲ್ ಫೋಲ್ಡಬಲ್ ಐಫೋನ್ ಅಭಿವೃದ್ಧಿಪಡಿಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇದನ್ನು ಐಫೋನ್ ಫೋಲ್ಡ್ ಅಥವಾ ಐಫೋನ್ ಅಲ್ಟ್ರಾ ಎಂದು ಕರೆಯಬಹುದು ಎಂಬ ಚರ್ಚೆಯೂ ಇದೆ.
ವರದಿಗಳ ಪ್ರಕಾರ, ಈ ಮಡಿಸಬಹುದಾದ ಐಫೋನ್ ತೆರೆದಾಗ ಸುಮಾರು 7.8 ಇಂಚಿನ ಒಳಗಿನ ಡಿಸ್ಪ್ಲೇ ಹೊಂದಿರಬಹುದು. ಹೊರಭಾಗದಲ್ಲಿ ಸುಮಾರು 5.3 ಇಂಚಿನ ಕವರ್ ಸ್ಕ್ರೀನ್ ಇರಬಹುದು. ಇಂತಹ ವಿನ್ಯಾಸವನ್ನು ಆಪಲ್ ಪರಿಚಯಿಸಿದರೆ, ಕಂಪನಿಯ ಐಫೋನ್ ಸರಣಿಯಲ್ಲಿ ಇದು ಮಹತ್ವದ ಬದಲಾವಣೆಯಾಗಲಿದೆ.
ಮೆಟಾದ ಈ ಪ್ರಯೋಗ ಯಶಸ್ವಿಯಾಗಿದ್ದರೆ ಅಲ್ಲೋಲಕಲ್ಲೋಲವಾಗುತ್ತಿತ್ತಾ ಜಗತ್ತು?; ಏನಿದು ಪ್ರಾಜೆಕ್ಟ್ ಓಟಿ?
ಐಫೋನ್‌ಗಳ ಜೊತೆಗೆ ಆಪಲ್ ತನ್ನ ಇತರ ಉತ್ಪನ್ನಗಳನ್ನೂ ನವೀಕರಿಸುವ ಸಾಧ್ಯತೆ ಇದೆ. ಹೊಸ ಆಪಲ್ ವಾಚ್ ಸರಣಿ 12 ಅನ್ನು ಈ ಕಾರ್ಯಕ್ರಮದಲ್ಲಿ ಪರಿಚಯಿಸಬಹುದು. ಇದರ ಜೊತೆಗೆ ಹೊಸ ಏರ್‌ಪಾಡ್ಸ್ ಮತ್ತು ಇತರ ಪರಿಕರಗಳನ್ನೂ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಈ ಬಾರಿ ಆಪಲ್ ತನ್ನ ಐಫೋನ್ ಬಿಡುಗಡೆ ತಂತ್ರದಲ್ಲಿ ಬದಲಾವಣೆ ಮಾಡಲಿದೆಯಂತೆ. ಬೇಸಿಕ್ ಐಫೋನ್ 18 ಅನ್ನು ಸೆಪ್ಟೆಂಬರ್‌ನ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡದೇ, 2027ರಲ್ಲಿ ಪರಿಚಯಿಸಲು ಕಂಪನಿ ಯೋಜಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 9ರ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ ಸರಣಿಯ ಜೊತೆಗೆ ಆಪಲ್‌ನ ಮೊದಲ ಮಡಿಸಬಹುದಾದ ಐಫೋನ್ ಸೇರಿದಂತೆ ಹಲವು ಹೊಸ ಉತ್ಪನ್ನಗಳ ಮೇಲೆ ಎಲ್ಲರ ಗಮನವಿದೆ. ಆದರೆ ಇವುಗಳಲ್ಲಿ ಬಹುತೇಕ ಮಾಹಿತಿಗಳು ಸದ್ಯಕ್ಕೆ ವರದಿಗಳು ಮತ್ತು ವದಂತಿಗಳ ಆಧಾರದಲ್ಲಿದ್ದು, ಆಪಲ್ ಅಧಿಕೃತವಾಗಿ ಘೋಷಿಸಿದ ಬಳಿಕವಷ್ಟೇ ಅಂತಿಮ ಮಾಹಿತಿ ತಿಳಿಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ