ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) 2018ರ ಜನವರಿಯಿಂದ ಈವರೆಗೆ 19 ದೇಶಗಳ 177 ಉಪಗ್ರಹಗಳನ್ನು (Satellites) ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಸುಮಾರು 1,100 ಕೋಟಿ ರೂ. ಗಳಿಸಿದೆ. ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಕೊಲಂಬಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಜಪಾನ್, ಲಿಥುವೇನಿಯಾ, ಲುಕ್ಸೆಂಬರ್ಗ್, ಮಲೇಷ್ಯಾ, ನೆದರ್ಲೆಂಡ್ಸ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ಸ್ಪೇನ್, ಸ್ವಿಜರ್ಲೆಂಡ್, ಯುನೈಟೆಡ್ ಕಿಂಗ್ಡಂ ಹಾಗೂ ಅಮೆರಿಕದ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ.
ವಿದೇಶಗಳೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದ ಅನ್ವಯ ಆ ದೇಶಗಳ ಉಪಗ್ರಹಗಳನ್ನು ಪಿಎಸ್ಎಲ್ವಿ ಹಾಗೂ ಜಿಎಸ್ಎಲ್ವಿ-ಎಂಕೆIII ಮೂಲಕ ಉಡಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಮತ್ತೆ ಮಂಗಳಯಾನಕ್ಕೆ ಇಸ್ರೋ ಪ್ಲಾನ್; ಜಪಾನ್ನೊಂದಿಗೆ ಚಂದ್ರ ಗ್ರಹದಲ್ಲಿ ಅನ್ವೇಷಣೆಗೆ ಚಿಂತನೆ
2018ರ ಜನವರಿಯಿಂದ 2022ರ ನವೆಂಬರ್ವರೆಗೆ ಇಸ್ರೋ 177 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ವಿದೇಶಿ ವಿನಿಯಮದ ಮೂಲಕ 94 ದಶಲಕ್ಷ ಅಮೆರಿಕನ್ ಡಾಲರ್ ಮತ್ತು 46 ದಶಲಕ್ಷ ಯುರೋ ಗಳಿಸಿದೆ. ಈ ವಿಚಾರವಾಗಿ ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ದೂರದೃಷ್ಟಿಯಿಂದ ಕೂಡಿದ ಅನೇಕ ಸುಧಾರಣೆಗಳಿಗೆ ಸರ್ಕಾರವು 2020ರ ಜೂನ್ನಲ್ಲಿ ಕ್ರಮ ಕೈಗೊಂಡಿತ್ತು. ಸರ್ಕಾರೇತರ ಸಂಸ್ಥೆಗಳೂ ವಾಣಿಜ್ಯ ಉದ್ದೇಶದೊಂದಿಗೆ ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ವಾಣಿಜ್ಯ ಉದ್ದೇಶದ 36 ಉಪಗ್ರಹಗಳನ್ನೊಳಗೊಂಡ ಎಲ್ವಿಎಂ3 ಉಡಾವಣೆಗೆ ಕಾರಣವಾಯಿತು. ಇತ್ತೀಚೆಗೆ ಖಾಸಗಿ ಕ್ಷೇತ್ರದ ಸ್ಕೈರೂಟ್ ಏರೋಸ್ಪೇಸ್ ಕೂಡ ಉಪಗ್ರಹ ಉಡಾವಣೆ ಮಾಡಲು ಅನುವು ಮಾಡಿಕೊಟ್ಟಿತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಉಡಾವಣೆ ಯಶಸ್ವಿ: 36 ಉಪಗ್ರಹ ಹೊತ್ತು ಆಕಾಶಕ್ಕೆ ಹಾರಿದ GSLV MkIII
36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆಯನ್ನು ಇಸ್ರೋ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿಸಿತ್ತು. ಅತ್ಯಂತ ಭಾರವಾದ ರಾಕೆಟ್ ಜಿಎಸ್ಎಲ್ವಿ-ಎಂಕೆIII ಉಡಾವಣೆ ಯಶಸ್ವಿಯಾಗಿತ್ತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಜಿಎಸ್ಎಲ್ವಿ ರಾಕೆಟ್ ಅನ್ನು ವಾಣಿಜ್ಯ ಉಡಾವಣೆಗೆ ಬಳಸಲಾಗಿತ್ತು.
ಇನ್-ಸ್ಪೇಸ್ ಏಕಗವಾಕ್ಷಿ ವ್ಯವಸ್ಥೆ ಮೂಲಕ ಸರ್ಕಾರೇತರ ಸಂಸ್ಥೆಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ಅನುಮತಿ ನೀಡಲು ಕ್ರಮಕೈಗೊಳ್ಳಲಾಗಿತ್ತು. ಇದರಿಂದ ಸ್ಟಾರ್ಟಪ್ಗಳಿಗೆ ನೆರವಾಗಿದೆ. ಈ ವ್ಯವಸ್ಥೆಯಡಿ ಸುಮಾರು 111 ಸ್ಟಾರ್ಟಪ್ಗಳು ನೋಂದಣಿ ಮಾಡಿಕೊಂಡಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Thu, 15 December 22