ಒಂದು ವರ್ಷದಲ್ಲಿ ನಮ್ಮ ಆಯ ಮತ್ತು ವ್ಯಯವನ್ನು ಅಂದರೆ ಆದಾಯ ಮತ್ತು ಖರ್ಚನ್ನು ಇನ್ಕಮ್ ಟ್ಯಾಕ್ಸ್ ರಿಟರ್ನ್ (IT Returns) ಸಲ್ಲಿಸುವ ಮೂಲಕ ಆದಾಯ ತೆರಿಗೆ ಇಲಾಖೆಗೆ ತೋರಿಸುತ್ತೇವೆ. ಕಡಿತಗೊಂಡಿರುವ ತೆರಿಗೆಯನ್ನು ಮರಳಿ ಕ್ಲೇಮ್ ಮಾಡಲು ಇಲಾಖೆ ಹಲವು ಅವಕಾಶಗಳನ್ನು ಕೊಟ್ಟಿದೆ. ಕೆಲ ಸೇವಿಂಗ್ ಸ್ಕೀಮ್ಗಳು, ಮನೆ ಬಾಡಿಗೆ, ದೇಣಿಗೆ (Donations) ಇತ್ಯಾದಿಗೆ ಮಾಡುವ ಖರ್ಚನ್ನು ತೋರಿಸಿದರೆ ಒಂದಷ್ಟು ತೆರಿಗೆ ಹಣವನ್ನು ಮರಳಿ ಪಡೆಯಬಹುದು. ಆದರೆ ಬಹಳಷ್ಟು ತೆರಿಗೆ ಪಾವತಿದಾರರು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಆದಾಯ ತೆರಿಗೆ ಇಲಾಖೆಯ ಅನುಮಾನ. ನಕಲಿ ರೆಂಟ್ ರೆಸಿಪ್ಟ್ಗಳು, ನಕಲಿ ಡೊನೇಶನ್ಗಳು ಇತ್ಯಾದಿ ನಕಲಿ ದಾಖಲೆಗಳನ್ನು ಐಟಿಆರ್ನಲ್ಲಿ ತೋರಿಸಲಾಗುತ್ತಿದೆ. ಇಂಥ ಐಟಿಆರ್ಗಳ ಮೇಲೆ ಗಮನ ಇಟ್ಟಿರುವ ಐಟಿ ಇಲಾಖೆ, ವಿವಿಧ ಹಂತಗಳಲ್ಲಿ ಪರಿಶೀಲನೆ ಮಾಡುತ್ತಿದೆ.
ಸಂಬಳಕ್ಕೆ ಕೆಲಸ ಮಾಡುವ ತೆರಿಗೆ ಪಾವತಿದಾರರು ಬಾಡಿಗೆ ಮನೆಯಲ್ಲಿದ್ದರೆ ಬಾಡಿಗೆ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಸೆಕ್ಷನ್ 10(13ಎ) ಪ್ರಕಾರ ಮನೆ ಬಾಡಿಗೆ ಒಂದು ಲಕ್ಷ ರೂಗಿಂತ ಹೆಚ್ಚು ಇದ್ದರೆ ಮಾಲೀಕರ ಪ್ಯಾನ್ ನಂಬರ್ ನಮೂದಿಸಬೇಕು. 1 ಲಕ್ಷ ರೂ ಒಳಗಿದ್ದರೆ ಪ್ಯಾನ್ ನಂಬರ್ ಕೊಡುವ ಅವಶ್ಯಕತೆ ಇಲ್ಲ.
ಈ ಕಾನೂನನ್ನು ಹಲವು ತೆರಿಗೆಪಾವತಿದಾರರು ದುರುಪಯೋಗಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಇಂಥ ತೆರಿಗೆ ಪಾವತಿದಾರರಿಗೆ ಇಲಾಖೆಯಿಂದ ನೋಟೀಸ್ ಬಂದಿದೆ. ಸರಿಯಾದ ದಾಖಲೆಗಳು ಇದ್ದರೆ ಬಚಾವ್. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾದೀತು.
ಇದನ್ನೂ ಓದಿ: IT Refund: ಐಟಿ ರಿಟರ್ನ್ ಫೈಲ್ ಮಾಡಿದರೂ ರೀಫಂಡ್ ಬಂದಿಲ್ಲವಾ? ಸಮಸ್ಯೆ ಪತ್ತೆಹಚ್ಚಿ ಬಗೆಹರಿಸುವುದು ಹೇಗೆ?
ನಕಲಿ ಮನೆ ಬಾಡಿಗೆ ತೋರಿಸಲಾಗುತ್ತಿದೆ ಎಂದು ಇಲಾಖೆಗೆ ಅನಿಸಿದಲ್ಲಿ ಆಗ ಸಮಗ್ರವಾಗಿ ತನಿಖೆ ನಡೆಸುತ್ತದೆ. ಬಾಹ್ಯ ಮೂಲಗಳಿಂದ ವ್ಯಕ್ತಿಯ ಬಗ್ಗೆ ವಿವರ ಪಡೆದು, ಐಟಿಆರ್ನಲ್ಲಿರುವ ಮಾಹಿತಿಯೊಂದಿಗೆ ತುಲನೆ ಮಾಡಲಾಗುತ್ತದೆ. ಅದರಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದು ಕಂಡುಬಂದರೆ ಅವರಿಗೆ ನೋಟೀಸ್ ನೀಡಲಾಗುತ್ತದೆ.
ಆದಾಯವನ್ನು ಮುಚ್ಚಿಟ್ಟುಕೊಳ್ಳಲಾಗಿರುವುದು ಕಂಡು ಬಂದಲ್ಲಿ, ಆದಾಯಕ್ಕೆ ಕಟ್ಟಬೇಕಿರುವ ತೆರಿಗೆಯ ಎರಡು ಪಟ್ಟು ಹಣವನ್ನು ದಂಡವಾಗಿ ಕಟ್ಟಿಸಿಕೊಳ್ಳುವ ಅಧಿಕಾರ ಐಟಿ ಇಲಾಖೆಗೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ