IT Refund: ಐಟಿ ರಿಟರ್ನ್ ಫೈಲ್ ಮಾಡಿದರೂ ರೀಫಂಡ್ ಬಂದಿಲ್ಲವಾ? ಸಮಸ್ಯೆ ಪತ್ತೆಹಚ್ಚಿ ಬಗೆಹರಿಸುವುದು ಹೇಗೆ?
Troubleshooting Income Tax Refund Failure: ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ ಕೆಲ ವಾರಗಳಿಂದ ಕೆಲ ತಿಂಗಳುಗಳ ಒಳಗೆ ರೀಫಂಡ್ ಸಿಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೆ ರೀಫಂಡ್ ಆಗದೇ ಹೋಗಬಹುದು. ಅದರ ಕಾರಣ ತಿಳಿಯುವುದು ಅದಕ್ಕೆ ಪರಿಹಾರ ಹುಡುಕುವುದು ಈ ವಿವರ ಇಲ್ಲಿದೆ...
2022-23ರ ಹಣಕಾಸು ವರ್ಷಕ್ಕೆ ಐಟಿ ರಿಟರ್ನ್ ಸಲ್ಲಿಸಲು ಗಡುವಿಗೆ ಕೆಲವೇ ದಿನ ಬಾಕಿದೆ. ಜುಲೈ 31ರವರೆಗು ಮಾತ್ರ ಐಟಿಆರ್ ಫೈಲಿಂಗ್ಗೆ (ITR Filing) ಕಾಲಾವಕಾಶ ಇದೆ. ಜೂನ್ ತಿಂಗಳಿಂದಲೇ ಐಟಿಆರ್ ಸಲ್ಲಿಕೆ ಕಾರ್ಯಕ್ಕೆ ಅವಕಾಶ ಕೊಡಲಾಗಿತ್ತು. 10 ದಿನಗಳ ಹಿಂದಿನ ಮಾಹಿತಿಯಂತೆ 3 ಕೋಟಿಗೂ ಹೆಚ್ಚು ಐಟಿಆರ್ಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ. ಐಟಿಆರ್ ಸಲ್ಲಿಕೆಯಾಗಿ ಕೆಲ ತಿಂಗಳುಗಳಲ್ಲಿ ರೀಫಂಡ್ ಆಗುತ್ತದೆ. ಎಲ್ಲಾ ದಾಖಲೆಗಳು ಸರಿ ಇದ್ದಲ್ಲಿ ಕೆಲವೇ ವಾರಗಳಲ್ಲಿ ರೀಫಂಡ್ ಬಂದುಬಿಡಬಹುದು. ಸಾಕಷ್ಟು ತೆರಿಗೆ ಪಾವತಿದಾರರು ರೀಫಂಡ್ (Income tax refund) ಆಗುತ್ತಿಲ್ಲ ಎಂದು ಹತಾಶೆ ತೋಡಿಕೊಂಡಿದ್ದಾರೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಪರಿಶೀಲಿಸಿದಾಗ ‘ರಿಸ್ಟ್ರಿಕ್ಟೆಡ್ ರೀಫಂಡ್’ ಅಥವಾ ‘ನಾಟ್ ಎಲಿಜಿಬಲ್ ಫಾರ್ ರೀಫಂಡ್’ ಎನ್ನುವ ಸಂದೇಶ ಕಾಣುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಐಟಿಆರ್ಗಳಲ್ಲಿ ಏನು ದೋಷ ಇದ್ದರೆ ರೀಫಂಡ್ ಕಷ್ಟಸಾಧ್ಯವಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಐಟಿ ರೀಫಂಡ್ ಸರಿಯಾಗಿ ಆಗದಿರುವುದಕ್ಕೆ ಕಾರಣಗಳು
ತಪ್ಪು ಮಾಹಿತಿ: ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿ ಮಾಹಿತಿ ಸರಿಯಾಗಿ ಕೊಡದೇ ಇದ್ದರೆ ರೀಫಂಡ್ ಸಮಸ್ಯೆಯಾಗುತ್ತದೆ. ಹಾಗೆಯೇ, ಬ್ಯಾಂಕ್ ಖಾತೆ ಮತ್ತು ಪ್ಯಾನ್ ಕಾರ್ಡ್ನಲ್ಲಿರುವ ಮಾಹಿತಿಯೂ ಹೊಂದಿಕೆಯಾಗಿರಬೇಕು.
ಸಲ್ಲಿಸುವಾಗ ಆಗುವ ತಪ್ಪುಗಳು: ಐಟಿ ರಿಟರ್ನ್ ಫೈಲಿಂಗ್ ವೇಳೆ ಆದಾಯ, ವೆಚ್ಚ, ಹೂಡಿಕೆ ಇತ್ಯಾದಿ ಬಗ್ಗೆ ಅರೆಬರೆ ಮಾಹಿತಿ ನೀಡುವುದು, ತಪ್ಪು ಲೆಕ್ಕ ಕೊಡುವುದು ಇತ್ಯಾದಿ.
ಬಾಕಿ ತೆರಿಗೆ ಮುರಿದುಕೊಂಡಿರಬಹುದು: ನೀವು ಸರ್ಕಾರಕ್ಕೆ ಕೊಡಬೇಕಾದ ಯಾವುದಾದರೂ ತೆರಿಗೆ ಬಾಕಿ ಉಳಿದಿದ್ದರೆ ಆಗ ನಿಮ್ಮ ರೀಫಂಡ್ ಹಣವನ್ನು ಮುರಿದುಕೊಳ್ಳಲಾಗುತ್ತದೆ.
ಐಟಿ ರೀಫಂಡ್ ಆಗಲಿಲ್ಲವೆಂದರೆ ಏನು ಮಾಡಬೇಕು?
- ಐಟಿಆರ್ ರೀಫಂಡ್ ಸ್ಟೇಟಸ್ ಅನ್ನು ಪರಿಶೀಲಿಸಿ, ರೀಫಂಡ್ ಹಣ ಬಿಡುಗಡೆಗೆ ಮತ್ತೊಮ್ಮೆ ಮನವಿ ಸಲ್ಲಿಸಿ
- ಹಿಂದೆ ಸಲ್ಲಿಸಿದ್ದ ಐಟಿಆರ್ ಅನ್ನು ಅಗತ್ಯ ಇದ್ದರೆ ತಿದ್ದಿ ಮರಳಿ ಸಲ್ಲಿಸಿ
- ಯಾವುದಾದರೂ ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಿ
- ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸಿ. ಇಲ್ಲದಿದ್ದರೆ ಅದನ್ನು ಮಾಡಿ
ಇನ್ಕಮ್ ಟ್ಯಾಕ್ಸ್ ರೀಫಂಡ್ ಪಡೆಯಲು ಪ್ರೀ ವ್ಯಾಲಿಡೇಟ್ ಮಾಡಿದ ಬ್ಯಾಂಕ್ ಖಾತೆ ಇರಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪ್ರೀ ವ್ಯಾಲಿಡೇಟ್ ಮಾಡಿ ರೀಫಂಡ್ಗೆ ನಾಮಿನೇಟ್ ಮಾಡಬಹುದು. ಎಸ್ಬಿ ಖಾತೆ, ಕರೆಂಟ್ ಅಕೌಂಟ್, ಓವರ್ಡ್ರಾಫ್ಟ್ ಅಕೌಂಟ್, ಎನ್ಆರ್ಒ ಅಕೌಂಟ್, ಕ್ಯಾಷ್ ಕ್ರೆಡಿಟ್ ಅಕೌಂಟ್ಗಳನ್ನು ಮಾತ್ರ ಪ್ರೀವ್ಯಾಲಿಡೇಟ್ ಮಾಡಲು ಸಾಧ್ಯ.
ಬ್ಯಾಂಕ್ ಖಾತೆಗಳನ್ನು ಪ್ರೀ ವ್ಯಾಲಿಡೇಟ್ ಮಾಡುವ ಕೆಲಸ ಬಹಳ ಸುಲಭ. ಐಟಿಆರ್ ಫೈಲಿಂಗ್ ವೇಳೆ ನೀವು ಬ್ಯಾಂಕ್ ಖಾತೆಯೊಂದನ್ನು ಆಯ್ದುಕೊಂಡು ಪ್ರೀವ್ಯಾಲಿಡೇಶನ್ಗೆ ಮನವಿ ಸಲ್ಲಿಸಬಹುದು. ಆಗ ಬ್ಯಾಂಕ್ ಅದನ್ನು ಅನುಮೋದಿಸಿದರೆ ಆ ಖಾತೆಯು ಪ್ರೀ ವ್ಯಾಲಿಡೇಟ್ ಆಗುತ್ತದೆ. ಸಾಮಾನ್ಯವಾಗಿ 10-12 ಕಾರ್ಯದಿನಗಳಲ್ಲಿ ಇದು ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Thu, 27 July 23