ಹಿಂಬಾಗಿಲ ಮೂಲಕ ಟಾಟಾ ಸನ್ಸ್ ಲಪಟಾಯಿಸುವ ಯತ್ನ: ನೋಯೆಲ್ ಟಾಟಾ ವಿರುದ್ಧ ರತನ್ ಟಾಟಾ ಸೋದರ ಆರೋಪ

ಟಾಟಾ ಕುಟುಂಬದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ. ರತನ್ ಟಾಟಾ ಸಹೋದರ ಜಿಮ್ಮಿ ಟಾಟಾ, ನೋಯೆಲ್ ಟಾಟಾ ವಿರುದ್ಧ 'ಟಾಟಾ ಸನ್ಸ್' ಅನ್ನು ಪರೋಕ್ಷವಾಗಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಕುಟುಂಬ ಸದಸ್ಯರನ್ನು ಟ್ರಸ್ಟ್‌ಗಳಿಗೆ ಸೇರ್ಪಡೆ, ಚಂದ್ರಶೇಖರನ್ ಮರುನೇಮಕಕ್ಕೆ ವಿರೋಧ ಮತ್ತು ಟಾಟಾ ಸನ್ಸ್ IPO ವಿರೋಧವು ವಿವಾದದ ಪ್ರಮುಖ ಅಂಶಗಳಾಗಿವೆ.

ಹಿಂಬಾಗಿಲ ಮೂಲಕ ಟಾಟಾ ಸನ್ಸ್ ಲಪಟಾಯಿಸುವ ಯತ್ನ: ನೋಯೆಲ್ ಟಾಟಾ ವಿರುದ್ಧ ರತನ್ ಟಾಟಾ ಸೋದರ ಆರೋಪ
ರತನ್ ಟಾಟಾ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಹೋದರ ಜಿಮ್ಮಿ ಟಾಟಾ
Image Credit source: PTI

Updated on: Nov 17, 2026 | 5:52 PM

ಮುಂಬೈ, ನವೆಂಬರ್ 17: ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಗೌರವಯುತ ಬ್ಯುಸಿನೆಸ್ ಫ್ಯಾಮಿಲಿಗಳಲ್ಲಿ ಒಂದೆನಿಸಿದ ಟಾಟಾ ಕುಟುಂಬದೊಳಗೆ ಭಿನ್ನಸ್ವರ ಎದ್ದಿದೆ. ಟಾಟಾ ಸನ್ಸ್ ವಿಚಾರವಾಗಿ ನೋಯೆಲ್ ಟಾಟಾ ಅವರು ಹಾಗೂ ಇತರ ನಿರ್ದೇಶಕರ ಮಧ್ಯೆ ಭಿನ್ನಾಭಿಪ್ರಾಯಗಳು ಎದ್ದಿದ್ದವು. ಈಗ ಟಾಟಾ ಕುಟುಂಬದೊಳಗೆಯೇ ಭಿನ್ನಾಭಿಪ್ರಾಯ ಬಂದಿದೆ. ರತನ್ ಟಾಟಾ ಅವರ ಸ್ವಂತ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರು ನೋಯೆಲ್ ವಿರುದ್ಧವೇ ಆರೋಪ ಮಾಡಿದ್ದಾರೆ. ‘ಟಾಟಾ ಸನ್ಸ್’ (Tata Sons) ಸಂಸ್ಥೆಯನ್ನು ಪರೋಕ್ಷವಾಗಿ ಸ್ವಾಧೀನಪಡಿಸಿಕೊಳ್ಳಲು (Back-door takeover) ಯತ್ನಿಸುತ್ತಿದ್ದಾರೆ ಎಂಬುದು ಜಿಮ್ಮಿ ಟಾಟಾ ಅವರ ಆರೋಪ. ರತನ್ ಟಾಟಾ ಅವರ ಕಿರಿಯ ಸಹೋದರರಾದ ಜಿಮ್ಮಿ ನವಲ್ ಟಾಟಾ ಅವರು ‘ಸರ್ ರತನ್ ಟಾಟಾ ಟ್ರಸ್ಟ್’ನ ಟ್ರಸ್ಟಿಯೂ ಆಗಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕ ಜೀವನದಿಂದ ದೂರವಿರುವ ಜಿಮ್ಮಿ ಟಾಟಾ ಅವರು, ಸಹ-ಟ್ರಸ್ಟಿ ವಿಜಯ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಟಾಟಾ ಸಮೂಹದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Loading...

ವಿವಾದದ ಪ್ರಮುಖ ಅಂಶಗಳೇನು?

ಟಾಟಾ ಸಮೂಹದ ಮಾತೃಸಂಸ್ಥೆಯಾದ ‘ಟಾಟಾ ಸನ್ಸ್’ನಲ್ಲಿ ಶೇ. 66ರಷ್ಟು ಪಾಲನ್ನು ‘ಟಾಟಾ ಟ್ರಸ್ಟ್ಸ್’ (ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್) ಹೊಂದಿವೆ. ಹೀಗಾಗಿ ಟ್ರಸ್ಟ್‌ಗಳ ಮೇಲೆ ಹಿಡಿತ ಸಾಧಿಸುವವರೇ ಇಡೀ ಟಾಟಾ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಾರೆ. ಜಿಮ್ಮಿ ಟಾಟಾ ಅವರ ಆಕ್ರೋಶಕ್ಕೆ ಮೂರು ಪ್ರಮುಖ ಕಾರಣಗಳಿವೆ:

  • ಟ್ರಸ್ಟ್‌ಗಳಲ್ಲಿ ಕುಟುಂಬ ಸದಸ್ಯರ ನೇಮಕ: ನೋಯೆಲ್ ಟಾಟಾ ಅವರು ತಮ್ಮ ಮೂವರು ಮಕ್ಕಳಾದ ನೆವಿಲ್ಲೆ, ಲಿಯಾ ಮತ್ತು ಮಾಯಾ ಟಾಟಾ ಅವರನ್ನು ಪ್ರಮುಖ ಟಾಟಾ ಟ್ರಸ್ಟ್‌ಗಳ ಮಂಡಳಿಗಳಿಗೆ ಸೇರ್ಪಡೆಗೊಳಿಸಿರುವುದನ್ನು ಜಿಮ್ಮಿ ತೀವ್ರವಾಗಿ ವಿರೋಧಿಸಿದ್ದಾರೆ. ಮಕ್ಕಳಿಲ್ಲದ ಟಾಟಾ ಸಂಸ್ಥಾಪಕರು ಸಾರ್ವಜನಿಕ ಕಲ್ಯಾಣಕ್ಕಾಗಿ ಈ ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದಾರೆಯೇ ಹೊರತು, ಒಂದೇ ಕುಟುಂಬದ ಆಸ್ತಿಯನ್ನಾಗಿಸಲು ಅಲ್ಲ. ಯಾವುದೇ ಹೂಡಿಕೆಯಿಲ್ಲದೆ ಟ್ರಸ್ಟ್‌ಗಳ ಮೂಲಕ ಟಾಟಾ ಸನ್ಸ್ ಮೇಲೆ ಕುಟುಂಬದ ಏಕಸ್ವಾಮ್ಯ ಸಾಧಿಸುವುದು ಸರಿಯಲ್ಲ ಎಂದು ಅವರು ಗುಡುಗಿದ್ದಾರೆ.
  • ಎನ್. ಚಂದ್ರಶೇಖರನ್ ಮರುನೇಮಕ: ಸೆಪ್ಟೆಂಬರ್ 2026ರಲ್ಲಿ ಟಾಟಾ ಸನ್ಸ್ ಆಡಳಿತ ಮಂಡಳಿಯು ಕಾರ್ಯನಿರ್ವಾಹಕ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಮೂರನೇ ಅವಧಿಗೆ ಮರುನೇಮಕ ಮಾಡಲು 4-1 ಮತಗಳಿಂದ ಒಪ್ಪಿಗೆ ನೀಡಿತ್ತು. ಆದರೆ ನೋಯೆಲ್ ಟಾಟಾ ಒಬ್ಬರೇ ಇದನ್ನು ವಿರೋಧಿಸಿ, ವಿಶೇಷ ‘ವೀಟೋ’ (Veto) ಅಧಿಕಾರ ಬಳಸಲು ಮುಂದಾಗಿದ್ದರು. ಚಂದ್ರಶೇಖರನ್ ನಾಯಕತ್ವದಲ್ಲಿ ಟಾಟಾ ಸಂಸ್ಥೆಗೆ ದಾಖಲೆಯ ಲಾಭ ಬಂದಿದೆ ಎಂದು ಬೆಂಬಲಿಸಿರುವ ಜಿಮ್ಮಿ, 2013-14ರಲ್ಲಿ ತಿದ್ದುಪಡಿ ಮಾಡಲಾದ ‘ಸರ್ವಾಧಿಕಾರಿ ವೀಟೋ ಅಧಿಕಾರ’ವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
  • ಟಾಟಾ ಸನ್ಸ್ ಷೇರು ಮಾರುಕಟ್ಟೆ ಪ್ರವೇಶ (IPO): ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿಗಳ ಪ್ರಕಾರ ಟಾಟಾ ಸನ್ಸ್ ಸಂಸ್ಥೆಯನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದನ್ನು (Listing) ನೋಯೆಲ್ ಟಾಟಾ ವಿರೋಧಿಸುತ್ತಿದ್ದಾರೆ. ಆದರೆ, ಸಂಸ್ಥೆಯಲ್ಲಿನ ರಹಸ್ಯ ಸಂಸ್ಕೃತಿಯನ್ನು ಕೊನೆಗಾಣಿಸಲು ಮತ್ತು ಪಾರದರ್ಶಕತೆ ತರಲು ಆರ್‌ಬಿಐ ನಿಯಮದಂತೆ ಟಾಟಾ ಸನ್ಸ್ ಲಿಸ್ಟಿಂಗ್ ಆಗಲೇಬೇಕು ಎಂದು ಜಿಮ್ಮಿ ಟಾಟಾ, ಟ್ರಸ್ಟಿಗಳಾದ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರೊಂದಿಗೆ ಧ್ವನಿಗೂಡಿಸಿದ್ದಾರೆ.

ಇದನ್ನೂ ಓದಿ: ಟಿವಿಎಸ್ ಸಾಮ್ರಾಜ್ಯದಲ್ಲಿ ಉತ್ತರಾಧಿಕಾರದ ಕಿಚ್ಚು: ತಂದೆಯ ಆಸ್ತಿಯಲ್ಲಿ ಸಮಪಾಲು ಕೋರಿದ ಲಕ್ಷ್ಮೀ ವೇಣು; ಮಗಳ ಬೆನ್ನಿಗೆ ನಿಂತ ತಾಯಿ

ಟಾಟಾ ಕುಟುಂಬದ ವಂಶವೃಕ್ಷ ಮತ್ತು ರಚನೆ ಹೇಗಿದೆ?

ಈ ವಿವಾದದ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಇಂದಿನ ಟಾಟಾ ಕುಟುಂಬದ ಯಾರೊಬ್ಬರೂ ಸಂಸ್ಥಾಪಕ ಜಮ್‌ಶೆಟ್ಜಿ ಟಾಟಾ ಅವರ ನೇರ ರಕ್ತಸಂಬಂಧಿ ವಂಶಸ್ಥರಲ್ಲ!

  1. ಮೊದಲ ತಲೆಮಾರು (ಸಂಸ್ಥಾಪಕರು): 1868ರಲ್ಲಿ ಟಾಟಾ ಸಮೂಹವನ್ನು ಸ್ಥಾಪಿಸಿದ ಜಮ್‌ಶೆಟ್ಜಿ ಟಾಟಾ ಮತ್ತು ಹೀರಾಬಾಯಿ ದಂಪತಿಗೆ ಸರ್ ದೊರಾಬ್ಜಿ ಟಾಟಾ ಮತ್ತು ಸರ್ ರತನ್‌ಜಿ ಟಾಟಾ ಎಂಬ ಇಬ್ಬರು ಪುತ್ರರು ಹಾಗೂ ಮೆಹೆರ್ಬಾಯಿ ಎಂಬ ಪುತ್ರಿ ಇದ್ದರು. ಆದರೆ ಇಬ್ಬರೂ ಪುತ್ರರಿಗೆ ಮಕ್ಕಳಿರಲಿಲ್ಲ. ಹೀಗಾಗಿ ಅವರಿಬ್ಬರೂ ತಮ್ಮ ಸಂಪತ್ತನ್ನು ಸಾರ್ವಜನಿಕ ಸೇವೆಯ ಟ್ರಸ್ಟ್‌ಗಳಿಗೆ (SDTT ಮತ್ತು SRTT) ದಾನ ಮಾಡಿದರು.
  2. ದತ್ತು ಮತ್ತು ವಿಸ್ತೃತ ಕುಟುಂಬ: ಸರ್ ರತನ್‌ಜಿ ಟಾಟಾ ಅವರ ನಿಧನದ ನಂತರ ಅವರ ಪತ್ನಿ ನವಾಜ್‌ಬಾಯಿ ಅವರು ದೂರದ ಸಂಬಂಧಿ ನವಲ್ ಟಾಟಾ ಅವರನ್ನು ದತ್ತು ಪಡೆದರು. ಮತ್ತೊಂದೆಡೆ ಜಮ್‌ಶೆಟ್ಜಿ ಅವರ ಸೋದರ ಸಂಬಂಧಿಯ ಪುತ್ರ ಜೆ.ಆರ್.ಡಿ. ಟಾಟಾ (JRD Tata) ಅವರು 50 ವರ್ಷಗಳ ಕಾಲ ಟಾಟಾ ಸಮೂಹವನ್ನು ಮುನ್ನಡೆಸಿದರು (ಇವರಿಗೂ ಮಕ್ಕಳಿರಲಿಲ್ಲ).
  3. ನವಲ್ ಟಾಟಾ ಅವರ ಎರಡು ಕುಟುಂಬಗಳು: ದತ್ತುಪುತ್ರ ನವಲ್ ಟಾಟಾ ಅವರು ಎರಡು ವಿವಾಹವಾದರು. ಇದೇ ಇಂದಿನ ಎರಡು ಪ್ರತ್ಯೇಕ ಕವಲುಗಳಿಗೆ ಕಾರಣವಾಯಿತು.
  • ಮೊದಲ ಪತ್ನಿ ಸೂನಿ ಕಮಿಸ್ಸಾರಿಯಟ್: ಇವರಿಗೆ ರತನ್ ಟಾಟಾ (2024ರಲ್ಲಿ ನಿಧನ) ಮತ್ತು ಜಿಮ್ಮಿ ಟಾಟಾ ಜನಿಸಿದರು. ಇವರಿಬ್ಬರೂ ಅವಿವಾಹಿತರು.
  • ಎರಡನೇ ಪತ್ನಿ ಸಿಮೋನ್ ಡುನೋಯರ್: ಇವರಿಗೆ ನೋಯೆಲ್ ಟಾಟಾ ಜನಿಸಿದರು. ನೋಯೆಲ್ ಅವರು ಶಪೂರ್ಜಿ ಪಲ್ಲೊಂಜಿ ಕುಟುಂಬದ ಆಲೂ ಮಿಸ್ತ್ರಿ (ಸೈರಸ್ ಮಿಸ್ತ್ರಿ ಸಹೋದರಿ) ಅವರನ್ನು ವಿವಾಹವಾಗಿದ್ದು, ಇವರಿಗೆ ಲಿಯಾ, ಮಾಯಾ ಮತ್ತು ನೆವಿಲ್ಲೆ ಎಂಬ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ: ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್

ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್ ವಿಚಾರದಲ್ಲಿ ಮುಂದೇನು?

ಒಂದೆಡೆ ಟಿವಿಎಸ್ (TVS) ಸಮೂಹದ ವೇಣು ಶ್ರೀನಿವಾಸನ್ ಮತ್ತು ಜಿಮ್ಮಿ ಟಾಟಾ ಅವರು ಟಾಟಾ ಸನ್ಸ್‌ನ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ವೃತ್ತಿಪರತೆ ಉಳಿಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ನೋಯೆಲ್ ಟಾಟಾ ಅವರು ಟ್ರಸ್ಟ್‌ಗಳ ಮೂಲಕ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಚಾರಿಟಿ ಕಮಿಷನರ್ ಮತ್ತು ಆರ್‌ಬಿಐ (RBI) ಈ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದು ಭಾರತದ ಕಾರ್ಪೊರೇಟ್ ಜಗತ್ತಿನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us