ಟಿವಿಎಸ್ ಸಾಮ್ರಾಜ್ಯದಲ್ಲಿ ಉತ್ತರಾಧಿಕಾರದ ಕಿಚ್ಚು: ತಂದೆಯ ಆಸ್ತಿಯಲ್ಲಿ ಸಮಪಾಲು ಕೋರಿದ ಲಕ್ಷ್ಮೀ ವೇಣು; ಮಗಳ ಬೆನ್ನಿಗೆ ನಿಂತ ತಾಯಿ
ಟಿವಿಎಸ್ ಗ್ರೂಪ್ ಕುಟುಂಬದಲ್ಲಿ ಆಸ್ತಿ ವಿಭಜನೆ ಕುರಿತು ದೊಡ್ಡ ವಿವಾದ ಭುಗಿಲೆದ್ದಿದೆ. ವೇಣು ಶ್ರೀನಿವಾಸನ್ ಪುತ್ರಿ ಲಕ್ಷ್ಮೀ ವೇಣು, ತಂದೆಯ ಅವಿಭಕ್ತ ಆಸ್ತಿಯಲ್ಲಿ ಸಮಾನ ಪಾಲು ಕೋರಿ ನೋಟಿಸ್ ನೀಡಿದ್ದಾರೆ. ತಾಯಿ ಮಲ್ಲಿಕಾ ಶ್ರೀನಿವಾಸನ್ ಸಹ ಮಗಳ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ. ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಇದೆ ಎಂದು ಲಕ್ಷ್ಮೀ ವಾದಿಸಿದ್ದಾರೆ. ಈ ಪ್ರಕರಣ ಕಾನೂನು ಹೋರಾಟದ ಹಾದಿ ಹಿಡಿದಿದೆ.

ಚೆನ್ನೈ, ನವೆಂಬರ್ 17: ಎಲ್ಲರ ಮನೆಯ ದೋಸೆಯೂ ತೂತೇ ಇರುತ್ತದೆ. ಅಂತೆಯೇ ಒಡಕು ಇಲ್ಲದ ಕುಟುಂಬಗಳು ಇಲ್ಲ ಬಹಳ ಅಪರೂಪ. ಜನಸಾಮಾನ್ಯರಿಂದ ಹಿಡಿದು, ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಉದ್ಯಮಿಗಳು ಯಾರೇ ಇರಲಿ, ಕೌಟುಂಬಿಕ ಭಿನ್ನಾಭಿಪ್ರಾಯ, ಕಲಹಗಳು ಅಸಹಜವೇನಲ್ಲ. ಅನೇಕ ಕಾರ್ಪೊರೇಟ್ ದಿಗ್ಗಜರು ಕೌಟುಂಬಿಕ ಕಲಹದಿಂದ ಬೀದಿಗೆ ಬಿದ್ದಿದ್ದಿದೆ. ಕೆಲವರು ಸದ್ದಿಲ್ಲದೆ ವ್ಯಾಜ್ಯ ಪರಿಹಾರ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರದ್ದು ದೊಡ್ಡ ಸುದ್ದಿಯಾಗಿ ಎಲ್ಲರ ಬಾಯಿಗೂ ಆಹಾರವಾಗುತ್ತದೆ. ಇದೇ ಹೊತ್ತಲ್ಲಿ ಟಿವಿಎಸ್ ಗ್ರೂಪ್ನ ಕುಟುಂಬದ ವ್ಯಾಜ್ಯ ಸುದ್ದಿಯಾಗುತ್ತಿದೆ. ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಶತಮಾನಗಳ ಇತಿಹಾಸವಿರುವ ಉದ್ಯಮ ಸಮೂಹಗಳಲ್ಲಿ ಒಂದಾದ ಟಿವಿಎಸ್ (TVS) ಗ್ರೂಪ್ನ ವೇಣು ಶ್ರೀನಿವಾಸನ್ ಅವರ ಕುಟುಂಬದಲ್ಲಿ ಆಸ್ತಿ ಹಂಚಿಕೆಯ ವಿವಾದ ಇದೀಗ ಕಾನೂನು ಹೋರಾಟದ ತಿರುವು ಪಡೆದುಕೊಂಡಿದೆ.
ತಮ್ಮ ತಂದೆಯ ಶಾಖೆಗೆ ಸೇರಿದ ಅವಿಭಕ್ತ ಕುಟುಂಬದ ಆಸ್ತಿಗಳಲ್ಲಿ ತಮಗೂ ಸಮಾನ ಪಾಲು ಬೇಕೆಂದು ಆಗ್ರಹಿಸಿ ಪುತ್ರಿ ಲಕ್ಷ್ಮೀ ವೇಣು ಅವರು ತಂದೆ ವೇಣು ಶ್ರೀನಿವಾಸನ್ ಅವರಿಗೆ ಅಧಿಕೃತವಾಗಿ ‘ಆಸ್ತಿ ವಿಭಜನಾ ನೋಟಿಸ್’ (Partition Notice) ಕಳುಹಿಸಿದ್ದಾರೆ. ವಿಶೇಷವೆಂದರೆ, ಟ್ರ್ಯಾಕ್ಟರ್ ದಿಗ್ಗಜ ‘ಟ್ಯಾಫೆ’ (TAFE) ಸಂಸ್ಥೆಯ ಮುಖ್ಯಸ್ಥೆಯೂ ಆಗಿರುವ ತಾಯಿ ಮಲ್ಲಿಕಾ ಶ್ರೀನಿವಾಸನ್ ಅವರು ತಮ್ಮ ಮಗಳ ಈ ಬೇಡಿಕೆಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಕುತೂಹಲವೆಂದರೆ, ವೇಣು ಶ್ರೀನಿವಾಸನ್ ಅವರು ಟಾಟಾ ಗ್ರೂಪ್ನ ಪ್ರಮುಖ ಸದಸ್ಯರೂ ಆಗಿದ್ದಾರೆ. ಟಾಟಾ ಸನ್ಸ್ ಮಂಡಳಿಯ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಪ್ರಮುಖ ಟಾಟಾ ಟ್ರಸ್ಟ್ಗಳ ಒಬ್ಬ ಟ್ರಸ್ಟೀ ಮತ್ತು ವೈಸ್ ಛೇರ್ಮನ್ ಸ್ಥಾನ ಹೊಂದಿದ್ದಾರೆ. ಈ ಪ್ರತಿಷ್ಠಿತ ಉದ್ಯಮಿಯ ಕುಟುಂಬದಲ್ಲಿ ಆಸ್ತಿ ವ್ಯಾಜ್ಯ ಹುಟ್ಟಿಕೊಂಡಿದೆ.
ಟಿವಿಎಸ್ ಗ್ರೂಪ್ ಆಸ್ತಿ ವಿವಾದದ ಹಿನ್ನೆಲೆ ಏನು?
1911ರಲ್ಲಿ ಒಂದು ಸಣ್ಣ ಬಸ್ ಸೇವೆಯೊಂದಿಗೆ ಆರಂಭವಾಗಿ ಇಂದು ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಬೃಹತ್ ಸಾಮ್ರಾಜ್ಯವಾಗಿ ಬೆಳೆದಿರುವ ಟಿವಿಎಸ್ ಸಮೂಹದ ಆಸ್ತಿಗಳನ್ನು 2020ರಲ್ಲಿ ಕುಟುಂಬದ ನಾಲ್ಕು ಪ್ರಮುಖ ಶಾಖೆಗಳ ನಡುವೆ ಹಂಚಿಕೆ ಮಾಡಲಾಗಿತ್ತು. ಇದರ ಅಡಿಯಲ್ಲಿ ವೇಣು ಶ್ರೀನಿವಾಸನ್ ಅವರ ಕುಟುಂಬದ ಪಾಲಿಗೆ ಟಿವಿಎಸ್ ಹೋಲ್ಡಿಂಗ್ಸ್ (TVS Holdings), ಟಿವಿಎಸ್ ಮೋಟಾರ್ ಕಂಪನಿ (TVS Motor Company), ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಹಾಗೂ ಸುಂದರಂ-ಕ್ಲೇಟನ್ (Sundaram-Clayton) ಸಂಸ್ಥೆಗಳ ಷೇರುಗಳು ಮತ್ತು ಆಸ್ತಿಗಳು ಬಂದಿದ್ದವು.
ಆದರೆ, ಈ ಆಸ್ತಿಗಳ ಲಾಭದಾಯಕ ಹಿತಾಸಕ್ತಿಗಳನ್ನು (Beneficial Interests) ತಮ್ಮ ಸಹೋದರ ಸುದರ್ಶನ್ ವೇಣು ಅವರ ಪರವಾಗಿ ಕೇಂದ್ರೀಕರಿಸಲಾಗಿದೆ ಎಂಬುದು ಲಕ್ಷ್ಮೀ ವೇಣು ಅವರ ಪ್ರಮುಖ ಆರೋಪವಾಗಿದೆ. ವಿಶೇಷವಾಗಿ 2025ರ ಏಪ್ರಿಲ್ನಲ್ಲಿ ಸುದರ್ಶನ್ ಅವರನ್ನು ‘ವಿಎಸ್ ಟ್ರಸ್ಟ್’ (VS Trust) ಮೂಲಕ ಟಿವಿಎಸ್ ಮೋಟಾರ್ ಕಂಪನಿಯ ಪ್ರಮುಖ ಫಲಾನುಭವಿ ಮಾಲೀಕರನ್ನಾಗಿ (Significant Beneficial Owner) ಘೋಷಿಸಿದ್ದು ಕುಟುಂಬದೊಳಗಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತ್ತು.
ಇದನ್ನೂ ಓದಿ: ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್
ಎರಡು ಬಣಗಳ ವಾದ-ಪ್ರತಿವಾದ
ಈ ಕೌಟುಂಬಿಕ ಬಿಕ್ಕಟ್ಟು ಕುಟುಂಬವನ್ನು ಸ್ಪಷ್ಟವಾಗಿ ಎರಡು ಬಣಗಳನ್ನಾಗಿ ವಿಭಜಿಸಿದೆ:
- ತಂದೆ ಮತ್ತು ಮಗನ ವಾದ: ವೇಣು ಶ್ರೀನಿವಾಸನ್ ಅವರ ಪ್ರಕಾರ, 2024ರ ಮಾರ್ಚ್ನಲ್ಲಿ ಕುಟುಂಬದ ನಾಲ್ವರೂ ಸಹಿ ಹಾಕಿರುವ ತಿಳುವಳಿಕೆ ಪತ್ರದ (MoU) ಮೂಲಕ ಆಸ್ತಿ ಹಂಚಿಕೆ ಈಗಾಗಲೇ ಪೂರ್ಣಗೊಂಡಿದೆ. ಪುತ್ರ ಸುದರ್ಶನ್ ಅವರಿಗೆ ಟಿವಿಎಸ್ ಮೋಟಾರ್ ಕಂಪನಿಯ ಜವಾಬ್ದಾರಿ ನೀಡಲಾಗಿದ್ದು, ಪುತ್ರಿ ಲಕ್ಷ್ಮೀ ಅವರಿಗೆ ಸುಂದರಂ-ಕ್ಲೇಟನ್ ಸಂಸ್ಥೆಯ ಆಡಳಿತವನ್ನು ವಹಿಸಲಾಗಿದೆ. ಹೀಗಾಗಿ ಹಂಚಿಕೆ ನ್ಯಾಯಸಮ್ಮತವಾಗಿದೆ ಎಂಬುದು ಅವರ ನಿಲುವು.
- ತಾಯಿ ಮತ್ತು ಮಗಳ ಪ್ರತಿವಾದ: 2024ರ ಒಪ್ಪಂದವು ಕೇವಲ ಬ್ರ್ಯಾಂಡ್ ಬಳಕೆ, ಟ್ರೇಡ್ಮಾರ್ಕ್ ಮತ್ತು ಸ್ಪರ್ಧಾತ್ಮಕವಲ್ಲದ ನಿಯಮಗಳಿಗೆ (Non-compete) ಮಾತ್ರ ಸೀಮಿತವಾಗಿತ್ತೇ ಹೊರತು, ಆಸ್ತಿಗಳ ಮೌಲ್ಯಮಾಪನ ಮಾಡಿ ಆರ್ಥಿಕ ಹಂಚಿಕೆ ಮಾಡುವ ಒಪ್ಪಂದವಾಗಿರಲಿಲ್ಲ ಎಂದು ಲಕ್ಷ್ಮೀ ವೇಣು ಮತ್ತು ಮಲ್ಲಿಕಾ ಶ್ರೀನಿವಾಸನ್ ವಾದಿಸಿದ್ದಾರೆ. ಕೇವಲ ಕಂಪನಿಯ ಆಡಳಿತದ ಜವಾಬ್ದಾರಿ ನೀಡುವುದರಿಂದ ಮಾಲೀಕತ್ವದ ಹಕ್ಕು ಬರುವುದಿಲ್ಲ ಎಂಬುದು ಲಕ್ಷ್ಮೀ ಅವರ ಸ್ಪಷ್ಟ ನುಡಿ.
“ಪ್ರಗತಿಪರ ಭಾರತದಲ್ಲಿ ಪಿತೃಪ್ರಧಾನತೆಗೆ ಜಾಗವಿಲ್ಲ”
2005ರಲ್ಲಿ ತಿದ್ದುಪಡಿಯಾದ 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರರಿಗೆ ಇರುವಷ್ಟೇ ಸಮಾನ ಹಕ್ಕು ಪುತ್ರಿಯರಿಗೂ ಇದೆ ಎಂದು ಲಕ್ಷ್ಮೀ ಪ್ರತಿಪಾದಿಸಿದ್ದಾರೆ. “ಪ್ರಗತಿಪರ ಭಾರತದಲ್ಲಿ ಮತ್ತು ಕಾನೂನಿನ ಮುಂದೆ ಪಿತೃಪ್ರಧಾನ ಧೋರಣೆಗೆ ಯಾವುದೇ ಜಾಗವಿಲ್ಲ. ಏಕಪಕ್ಷೀಯ ನಿರ್ಧಾರಗಳ ಮೂಲಕ ಹೆಣ್ಣುಮಕ್ಕಳ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ,” ಎಂದು ಅವರು ತಮ್ಮ ಪ್ರಕಟಣೆಯಲ್ಲಿ ಖಾರವಾಗಿ ಹೇಳಿದ್ದಾರೆ.
ಮತ್ತೊಂದೆಡೆ, ಮಗಳ ಪರವಾಗಿ ನಿಂತಿರುವ ತಾಯಿ ಮಲ್ಲಿಕಾ ಶ್ರೀನಿವಾಸನ್, “ಒಬ್ಬ ತಾಯಿಯಾಗಿ ನನಗೆ ಮಗ ಮತ್ತು ಮಗಳು ಇಬ್ಬರೂ ಎಲ್ಲಾ ರೀತಿಯಲ್ಲೂ ಸಮಾನರು. ಸುದರ್ಶನ್ಗೆ ಇರುವಷ್ಟೇ ನ್ಯಾಯಸಮ್ಮತ ಪಾಲು ಲಕ್ಷ್ಮೀಗೂ ಕುಟುಂಬದ ಆಸ್ತಿಯಲ್ಲಿ ಸಿಗಬೇಕು,” ಎಂದು ಭಾವನಾತ್ಮಕವಾಗಿ ಮತ್ತು ದೃಢವಾಗಿ ಪ್ರತಿಕ್ರಿಯಿಸಿದ್ದಾರೆ.
ಟಾಫೆಯ ಆಸ್ತಿ ಯಾರದ್ದು?
ವೇಣು ಶ್ರೀನಿವಾಸನ್ ಅವರ ಪತ್ನಿ ಮಲ್ಲಿಕಾ ಶ್ರೀನಿವಾಸನ್ ಅವರು ಟಾಫೆ (TAFE) ಕಂಪನಿಯ ಛೇರ್ಮನ್ ಆಗಿದ್ದಾರೆ. ಅವರ ಮಗಳು ಲಕ್ಷ್ಮೀ ವೇಣು ಅವರು ವೈಸ್ ಛೇರ್ಮನ್ ಆಗಿದ್ದಾರೆ. ಆದರೆ, ಭಾರತದ ಅಗ್ರಮಾನ್ಯ ಟ್ರ್ಯಾಕ್ಟರ್ ತಯಾರಕರಾದ ಟಾಫೆ ಕಂಪನಿಯು ಟಿವಿಎಸ್ ಗ್ರೂಪ್ಗೆ ಸೇರಿದ್ದಲ್ಲ. ಇದು ಮಲ್ಲಿಕಾ ಶ್ರೀನಿವಾಸನ್ ಅವರ ತಂದೆಯ ಕಡೆಯ ವ್ಯವಹಾರ. ಲಕ್ಷ್ಮೀ ವೇಣು ಈಗ ಕೋರುತ್ತಿರುವ ಆಸ್ತಿ ಹಂಚಿಕೆಗೂ ಟಾಫೆಗೂ ಸಂಬಂಧ ಇಲ್ಲ.
ಇದನ್ನೂ ಓದಿ: ಇನ್ನೂ ಓದು ಮುಗಿಯದಿದ್ದರೂ 2 ಕೋಟಿ ರೂ ಸಂಬಳದ ಕೆಲಸ ಗಿಟ್ಟಿಸಿದ ಧರ್ಮತೇಜ ರೆಡ್ಡಿ
ಟಿವಿಎಸ್ ಗ್ರೂಪ್ನ ಸಂಸ್ಥಾಪಕರು, ಹಾಗು ನಂತರದ ವಾರಸುದಾರರು
ಟಿವಿಎಸ್ ಕಂಪನಿಯನ್ನು ಮೂಲತಃ ಕಟ್ಟಿದವರು ಟಿವಿ ಸುಂದರಂ ಅಯ್ಯಂಗಾರ್. ಇವರಿಗೆ ಐವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಮಕ್ಕಳು. ಹಿರಿಯ ಮಗ ಟಿಎಸ್ ದೊರೈಸ್ವಾಮಿ ಸಣ್ಣ ವಯಸ್ಸಲ್ಲೇ ಮೃತಪಟ್ಟರು. ಟಿವಿಎಸ್ ಬ್ಯುಸಿನೆಸ್ ಸಾಮ್ರಾಜ್ಯ ವಿಸ್ತರಿಸುತ್ತಾ ಹೋಯಿತು. 50 ಕಂಪನಿಗಳು ಟವಿಎಸ್ ಗ್ರೂಪ್ ಅಡಿಯಲ್ಲಿ ಬರುತ್ತವೆ.
ಸುಂದರಮ್ ಅವರು ನಾಲ್ವರು ಗಂಡು ಮಕ್ಕಳಿಗೆ ತಮ್ಮ ಉದ್ಯಮಗಳನ್ನು ಹಂಚಿದರು. ಟಿಎಸ್ ರಾಜಂ, ಟಿಎಸ್ ಕೃಷ್ಣ, ಟಿಎಸ್ ಸಂತಾನಂ ಮತ್ತು ಟಿಎಸ್ ಶ್ರೀನಿವಾಸನ್ ಅವರು ತಮ್ಮ ಪಾಲಿಗೆ ಬಂದ ವ್ಯವಹಾರಗಳನ್ನು ಬೆಳೆಸುತ್ತಾ ಹೋಗಿದ್ದಾರೆ. ಈಗ ಟಿಎಸ್ ಶ್ರೀನಿವಾಸನ್ ಅವರ ಕುಟುಂಬದಲ್ಲಿ ಆಸ್ತಿ ವ್ಯಾಜ್ಯ ಬಂದಿರುವುದು. ಟಿಎಸ್ ಶ್ರೀನಿವಾಸನ್ ಅವರಿಗೆ ಮೂವರು ಮಕ್ಕಳಿದ್ದಾರೆ. ವೇಣು ಶ್ರೀನಿವಾಸನ್, ಗೋಪಾಲ್ ಶ್ರೀನಿವಾಸನ್ ಮತ್ತು ಶೀಲಾ. ಈ ಮೂವರಿಗೂ ಕೂಡ ವಿವಿಧ ಬ್ಯುಸಿನೆಸ್ಗಳನ್ನು ತಂದೆ ಹಂಚಿದ್ದಾರೆ. ಮೂವರೂ ಕೂಡ ಪ್ರತ್ಯೇಕವಾಗಿ ತಮ್ಮ ಉದ್ಯಮಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ವೇಣು ಶ್ರೀನಿವಾಸನ್ ಅವರ ಮಗಳು ಸಮಾನ ಆಸ್ತಿ ಹಂಚಿಕೆಗೆ ಒತ್ತಾಯಿಸುತ್ತಿದ್ದಾರೆ.
ಮುಂದೇನು? ಸೌಹಾರ್ದಯುತ ಇತ್ಯರ್ಥದ ಆಶಯ
ಈಗಾಗಲೇ ಎರಡೂ ಕಡೆಯವರು ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈ ನ್ಯಾಯಾಲಯಗಳಲ್ಲಿ ‘ಕೇವಿಯಟ್’ (Caveat) ಅರ್ಜಿಗಳನ್ನು ಸಲ್ಲಿಸಿರುವುದರಿಂದ ಕಾನೂನು ಸಮರದ ಛಾಯೆ ದಟ್ಟವಾಗಿದೆ. ಆದಾಗ್ಯೂ, ಕುಟುಂಬದ ಘನತೆ ಮತ್ತು ಎಲ್ಲಾ ಪಾಲುದಾರರ ಹಿತಾಸಕ್ತಿಯನ್ನು ಕಾಪಾಡಿಕೊಂಡು, ಪಾರದರ್ಶಕ ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ತಾವು ಇನ್ನೂ ಆಶಾವಾದಿಗಳಾಗಿರುವುದಾಗಿ ಲಕ್ಷ್ಮೀ ಮತ್ತು ಮಲ್ಲಿಕಾ ತಿಳಿಸಿದ್ದಾರೆ. ಕಾರ್ಪೊರೇಟ್ ವಲಯದಲ್ಲಿ ಈ ಐತಿಹಾಸಿಕ ಕುಟುಂಬದ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




