ಮುಂಬೈ, ಆಗಸ್ಟ್ 21: ಮುಕೇಶ್ ಅಂಬಾನಿ ಮಾಲಿಕತ್ವದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ (Jio financial services) ಆಗಸ್ಟ್ 21ರಂದು ಷೇರುಪೇಟೆಗಳಲ್ಲಿ ಲಿಸ್ಟ್ ಆಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 262 ರೂಗಳ ಆರಂಭಿಕ ಷೇರುಬೆಲೆ ಪಡೆದರೆ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 265 ರೂ ಬೆಲೆಗೆ ಲಿಸ್ಟ್ ಆಗಿದೆ. ಇಂದು ಬೆಳಗ್ಗೆ ಷೇರುವಿನಿಮಯ ಮಾರುಕಟ್ಟೆ ತೆರೆಯುವ ಮುನ್ನ ನಡೆದ ಸ್ಪೆಷಲ್ ಸೆಷನ್ನಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಕಂಪನಿಯ ಷೇರು ಬೆಲೆ 261.85 ರೂ ಆಗುವ ಸೂಚಕ ಇತ್ತು. ಬಿಎಸ್ಇನಲ್ಲಿ ತುಸು ಹೆಚ್ಚಿನ ದರದಲ್ಲೇ ಲಿಸ್ಟ್ ಆಗಿದೆ.
ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ) ಆಗಿದೆ. ಎನ್ಬಿಎಫ್ಸಿ ಮಾರುಕಟ್ಟೆ ಮಾತ್ರವಲ್ಲ, ಸಾಲ, ಇನ್ಷೂರೆನ್ಸ್, ಡಿಜಿಟಲ್ ಪೇಮೆಂಟ್, ಅಸೆಟ್ ಮ್ಯಾನೇಜ್ಮೆಂಟ್ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯಾಚರಿಸಲಿದೆ.
ಷೇರುಪೇಟೆಯಲ್ಲಿ ಲಿಸ್ಟ್ ಆದ ಬಳಿಕ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಒಟ್ಟು ಷೇರುಸಂಪತ್ತು 1.66 ಲಕ್ಷ ಕೋಟಿ ರೂ ಆಗಿದೆ. ಎನ್ಬಿಎಫ್ಸಿ ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್ ಬಿಟ್ಟರೆ ಜೆಎಫ್ಎಸ್ ಮಾತ್ರವೇ ಅತಿಹೆಚ್ಚು ಷೇರುಸಂಪತ್ತು ಹೊಂದಿರುವುದು. ಬಜಾಜ್ ಫೈನಾನ್ಸ್ ಸಂಸ್ಥೆ 4.15 ಲಕ್ಷ ಕೋಟಿ ರೂ ಮೊತ್ತದ ಷೇರುಸಂಪತ್ತು ಹೊಂದಿದೆ. ಇನ್ನು, ಬಜಾಬ್ ಫಿನ್ಸರ್ವ್ ಸಂಸ್ಥೆ 2.32 ಲಕ್ಷ ಕೋಟಿ ರೂ ಷೇರುಸಂಪತ್ತು ಹೊಂದಿದೆಯಾದರೂ ಅದು ಎನ್ಬಿಎಫ್ಸಿ ಅಲ್ಲ.
ಇದನ್ನೂ ಓದಿ: ಪ್ರೋಸಸಿಂಗ್ ಶುಲ್ಕ ಇಲ್ಲ; ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದವರಿಗೆ ಯೂನಿಯನ್ ಬ್ಯಾಂಕ್ ಭರ್ಜರಿ ಆಫರ್
ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರುಗಳನ್ನು ಮುಂದಿನ 10 ಸೆಷನ್ ಕಾಲ ಟ್ರೇಡ್ ಟು ಟ್ರೇಡ್ ಸೆಗ್ಮೆಂಟ್ನಲ್ಲಿ ಇರಿಸಲಾಗಿದೆ. ಅಂದರೆ, ಈ 10 ಸೆಷನ್ವರೆಗೂ ಷೇರು ವಹಿವಾಟಿಗೆ ನಿರ್ಬಂಧಗಳು ಅನ್ವಯ ಆಗುತ್ತವೆ. ಅನಗತ್ಯ ಬೆಲೆ ವ್ಯತ್ಯಯ ತಡೆಯಲು ಈ ರೀತಿ ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು, ಗ್ರೇ ಮಾರ್ಕೆಟ್ನಲ್ಲಿ ಜೆಎಫ್ಎಸ್ ಷೇರಿಗೆ ಒಳ್ಳೆಯ ಬೇಡಿಕೆ ಇರುವುದು ಕಂಡುಬಂದಿದೆ. ಪ್ರೀಮಿಯಮ್ಗಿಂತ 50 ರೂ ಹೆಚ್ಚು ಬೆಲೆ ಇದರಲ್ಲಿ ಇರುವುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರುಬೆಲೆ ಸುಲಭವಾಗಿ 300 ರೂ ದಾಟಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ