Tax Saving Planning: 2022-23ರ ಹಣಕಾಸು ವರ್ಷಕ್ಕೆ ತೆರಿಗೆ ಉಳಿತಾಯ ಯೋಜನೆ ರೂಪಿಸುವುದು ಹೇಗೆ?

| Updated By: Srinivas Mata

Updated on: Apr 11, 2022 | 3:07 PM

2022-23ನೇ ಸಾಲಿನ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದಂತೆ ಹೇಗೆ ಯೋಜನೆ ರೂಪಿಸಬಹುದು ಎಂಬ ಬಗ್ಗೆ ವಿವರಣೆ ಇಲ್ಲಿದೆ.

Tax Saving Planning: 2022-23ರ ಹಣಕಾಸು ವರ್ಷಕ್ಕೆ ತೆರಿಗೆ ಉಳಿತಾಯ ಯೋಜನೆ ರೂಪಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ತೆರಿಗೆ ಯೋಜನೆಯು (Tax Planning) ಆರ್ಥಿಕ ಶಿಸ್ತಿನ ಭಾಗ ಆಗಿದೆ. ಆರ್ಥಿಕ ವರ್ಷದ ಆರಂಭದಲ್ಲಿ ಅದನ್ನು ಸರಿಯಾಗಿ ಮಾಡಬೇಕು. ಇದರಿಂದ ಮಾನಸಿಕ ಶಾಂತಿ ಖಾತ್ರಿ ಆಗುತ್ತದೆ ಮತ್ತು ವರ್ಷದ ಕೊನೆಯಲ್ಲಿ ಅಸಮರ್ಪಕ ತೆರಿಗೆ-ಉಳಿತಾಯ ಮತ್ತು ಒತ್ತಡಕ್ಕೆ ಕಾರಣವಾಗುವ ಅಂತಿಮ ಕ್ಷಣದ ತೊಂದರೆಗಳಿಂದ ನಿಮ್ಮನ್ನು ಉಳಿಸುತ್ತದೆ. ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ರಿಯಾಯಿತಿಗಳನ್ನು ಅನುಮತಿಸುವ ಕೆಲವು ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಸರ್ಕಾರವು ತೆರಿಗೆದಾರರನ್ನು ಪ್ರೋತ್ಸಾಹಿಸುತ್ತದೆ. ಪ್ರತಿ ಹಣಕಾಸು ವರ್ಷದಲ್ಲಿ ತಮ್ಮ ತೆರಿಗೆ ಪಾವತಿಯನ್ನು ಕಡಿತಗೊಳಿಸಲು ವ್ಯಕ್ತಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಕಡ್ಡಾಯ ಅಲ್ಲದಿದ್ದರೂ ಎರಡು ಪ್ರಯೋಜನಗಳನ್ನು ಒದಗಿಸುವ ಈ ಸೌಲಭ್ಯವನ್ನು ಬಳಸುವುದು ಸೂಕ್ತವಾಗಿದೆ – ಕಡಿಮೆ ತೆರಿಗೆಗಳು ಮತ್ತು ದೀರ್ಘಾವಧಿಯ ಹೂಡಿಕೆಗಳು.

2022-23ರ ಹೊಸ ಹಣಕಾಸು ವರ್ಷವನ್ನು ಪ್ರವೇಶಿಸುವಾಗ ತೆರಿಗೆ ಯೋಜನೆಯನ್ನು ಹೇಗೆ ಮುಂದುವರಿಸಬೇಕು ಎಂಬುದು ಇಲ್ಲಿದೆ:

ಮೊದಲನೆಯದು- ನಿಮ್ಮ ತೆರಿಗೆ ಸ್ಲ್ಯಾಬ್ ಅನ್ನು ಲೆಕ್ಕಾಚಾರ ಮಾಡಿ
ನಿಮ್ಮ ಆದಾಯದೊಂದಿಗೆ ಯಾವ ತೆರಿಗೆ ಸ್ಲ್ಯಾಬ್‌ಗೆ ಬರುತ್ತೀರಿ ಎಂಬುದನ್ನು ಲೆಕ್ಕಾಚಾರ ಮಾಡಿ. ವ್ಯಕ್ತಿಗಳ ಸ್ಲ್ಯಾಬ್‌ಗಳ ಮೇಲೆ ತೆರಿಗೆಗಳನ್ನು ವಿಧಿಸಲಾಗುತ್ತದೆ. ಅಂದರೆ ಆದಾಯದ ವಿವಿಧ ಹಂತಗಳಲ್ಲಿ ತೆರಿಗೆ ದರಗಳು ವಿಭಿನ್ನವಾಗಿವೆ. ನಿಮ್ಮ ತೆರಿಗೆಗೆ ಒಳಪಡುವ ಆದಾಯದ ನಂತರದ ಕಡಿತಗಳು ರೂ. 5 ಲಕ್ಷದವರೆಗೆ ಇದ್ದರೆ ಯಾವುದೇ ತೆರಿಗೆಗಳನ್ನು ಪಾವತಿಸುವ ಅಗತ್ಯವಿಲ್ಲ. ಆದರೆ ಇದನ್ನು ಮೀರಿ, ನೀವು ಅನ್ವಯವಾಗುವ ಸೆಸ್‌ನೊಂದಿಗೆ ಶೇ 5ರಿಂದ ಶೇ 30ರ ವರೆಗಿನ ತೆರಿಗೆಗಳನ್ನು ಪಾವತಿಸಲು ಹೊಣೆಗಾರರಾಗಿರುತ್ತೀರಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆದಾಯದ ಹೆಚ್ಚಳದೊಂದಿಗೆ ತೆರಿಗೆ ದರಗಳು ಏರುತ್ತವೆ.

ನಿಮ್ಮ ತೆರಿಗೆ ಎಷ್ಟು ಕಟ್ಟಬೇಕಾಗುತ್ತದೆ ಮೊದಲೇ ಲೆಕ್ಕ ಹಾಕಿ
ನಿಮ್ಮ ತೆರಿಗೆ ಸ್ಲ್ಯಾಬ್ ಅನ್ನು ಒಮ್ಮೆ ನೀವು ತಿಳಿದಿದ್ದರೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಪಾವತಿಸುವ ತೆರಿಗೆಗಳ ಬಗ್ಗೆ ನಿಮಗೆ ನ್ಯಾಯಯುತವಾದ ಅಂದಾಜು ಇರುತ್ತದೆ. ಉದಾಹರಣೆಗೆ, ನಿಮ್ಮ ತೆರಿಗೆಯ ಆದಾಯವು ವರ್ಷಕ್ಕೆ ರೂ. 5 ಲಕ್ಷ, ನಿಮ್ಮ ತೆರಿಗೆ ಪಾವತಿಸಬೇಕಾದ ಮೊತ್ತವು ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಯಲ್ಲಿ 12,500 ರೂಪಾಯಿ. ಇದಲ್ಲದೆ, ನಿಮ್ಮ ಆದಾಯವು ರೂ. 5 ಲಕ್ಷ ಮತ್ತು ರೂ. 7.5 ಲಕ್ಷದ ಮಧ್ಯ ಇದ್ದರೆ, ನೀವು ಹೆಚ್ಚುವರಿ ರೂ. 25,000 ತೆರಿಗೆಯಾಗಿ ಒಟ್ಟು ರೂ. 37,500 ನೀಡಬೇಕಾಗುತ್ತದೆ. ಮತ್ತು ನಿಮ್ಮ ತೆರಿಗೆಯ ಗಳಿಕೆಯು ರೂ. 7.5 ಲಕ್ಷ ಮತ್ತು ರೂ. 10 ಲಕ್ಷ ಮಧ್ಯೆ ಇದ್ದರೆ ರೂ. 62,500 (ಹಳೆಯ ಪದ್ಧತಿಯಲ್ಲಿ) ಮತ್ತು ರೂ. 75,500 (ಹೊಸ ಪದ್ಧತಿ) ಆದಾಯ ತೆರಿಗೆ ಇರುತ್ತದೆ.

ಆದ್ದರಿಂದ, ನಿಮ್ಮ ಆದಾಯ ಮತ್ತು ಭವಿಷ್ಯದ ಬೆಳವಣಿಗೆ ಆಧಾರದ ಮೇಲೆ ತೆರಿಗೆ-ಉಳಿತಾಯ ಅಗತ್ಯವನ್ನು ಮೌಲ್ಯಮಾಪನ ಮಾಡಿ. ಹೊಸ ಹಣಕಾಸು ವರ್ಷದಲ್ಲಿ ತೆರಿಗೆ ಉಳಿಸುವ ಉಪಕ್ರಮಗಳಿಗೆ ಮಾರ್ಗಸೂಚಿಯನ್ನು ಹಾಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಪ್ರಸ್ತುತ ತೆರಿಗೆ ಉಳಿತಾಯ ಹೂಡಿಕೆಗಳನ್ನು ನೋಡಿ
ಹೊಸ ತೆರಿಗೆ-ಉಳಿತಾಯ ಸಾಧನಗಳಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ಅಸ್ತಿತ್ವದಲ್ಲಿರುವ ತೆರಿಗೆ-ಉಳಿತಾಯ ಹೂಡಿಕೆಗಳನ್ನು ಶೀಘ್ರವಾಗಿ ನೋಡಿ. ನಿಮ್ಮ ಹೂಡಿಕೆಗಳನ್ನು ಹೆಚ್ಚಿಸುವ ಮೂಲಕ ತೆರಿಗೆಗಳಲ್ಲಿ ಮತ್ತಷ್ಟು ಕಡಿತದ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ವಿವಿಧ ಆದಾಯ-ತೆರಿಗೆ ಸೆಕ್ಷನ್​ಗಳ ಅಡಿಯಲ್ಲಿ ಲಭ್ಯವಿರುವ ಗರಿಷ್ಠ ಅನುಮತಿಸುವ ಮಿತಿಯನ್ನು ನೀಡಿದರೆ ಒಂದು ಹಂತವನ್ನು ಮೀರಿ ತೆರಿಗೆ ಪಾವತಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಪರಿಗಣಿಸಬೇಕಾಗಿದೆ. ಆದಾಯ ತೆರಿಗೆಯನ್ನು ಕಡಿಮೆ ಮಾಡಲು ಸೆಕ್ಷನ್ 80C (ಗರಿಷ್ಠ ಹೂಡಿಕೆ ರೂ. 1.5 ಲಕ್ಷ), 80CCD (NPS ನಲ್ಲಿ ಹೂಡಿಕೆ ಮಾಡುವ ಮೂಲಕ ರೂ. 50,000 ಹೆಚ್ಚುವರಿ ಕಡಿತ) ಮತ್ತು 80D (ಮೆಡಿಕಲ್ ಇನ್ಷೂರೆನ್ಸ್ ಅಡಿಯಲ್ಲಿ ರೂ. 1 ಲಕ್ಷಕ್ಕೆ ಗರಿಷ್ಠ ಕಡಿತವನ್ನು ಅನುಮತಿಸಲಾಗಿದೆ) ನಂತಹದ್ದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಲಭ್ಯವಿರುವ ತೆರಿಗೆ ಉಳಿತಾಯ ಮಾರ್ಗಗಳನ್ನು ಮೌಲ್ಯಮಾಪನ ಮಾಡಿ
ಗರಿಷ್ಠ ಅನುಮತಿ ತೆರಿಗೆ ಹೂಡಿಕೆ ಮಿತಿ ರೂ. 2 ಲಕ್ಷ, ಮತ್ತು ಕೆಲವು ಸಂದರ್ಭಗಳಲ್ಲಿ ಇದು ರೂ. 2.5 ಲಕ್ಷ. ಆದ್ದರಿಂದ ನಿಮ್ಮ ಅನುಮತಿಸುವ ಮಿತಿಯನ್ನು ಖಾಲಿ ಮಾಡಿದರೂ ಮತ್ತು ಅದನ್ನು ಮೀರಿ ಹೋದರೂ ತೆರಿಗೆ ಉಳಿತಾಯ ಹೂಡಿಕೆಗಳಲ್ಲಿನ ನಿಮ್ಮ ಹೆಚ್ಚುವರಿ ಹೂಡಿಕೆಯು ತೆರಿಗೆ ರಿಯಾಯಿತಿಗೆ ಅರ್ಹತೆ ಪಡೆಯುವುದಿಲ್ಲ. ನೀವು ಆರಿಸಿಕೊಳ್ಳಬಹುದಾದ ಟಾಪ್ ಐದು ತೆರಿಗೆ-ಉಳಿತಾಯ ಇನ್​ಸ್ಟ್ರುಮೆಂಟ್​ಗಳು ಇಲ್ಲಿವೆ:

1) ಸಾರ್ವಜನಿಕ ಭವಿಷ್ಯ ನಿಧಿ (PPF): ಇದು ಸೆಕ್ಷನ್ 80C ಅಡಿಯಲ್ಲಿ ಬರುತ್ತದೆ ಮತ್ತು 1.5 ಲಕ್ಷ ರೂಪಾಯಿಗಳ ಅನುಮತಿಸುವ ಹೂಡಿಕೆ ಮಿತಿಯನ್ನು ಹೊಂದಿದೆ. ನೀವು ಪಿಪಿಎಫ್​ನಲ್ಲಿ ವರ್ಷವಿಡೀ ವಿವಿಧ ಹಂತಗಳಲ್ಲಿ ಹೂಡಿಕೆ ಮಾಡಬಹುದು ಅಥವಾ ಒಂದು ಬಾರಿ ಹೂಡಿಕೆ ಮಾಡುವ ಮೂಲಕ ಹೂಡಿಕೆ ಮಾಡಬಹುದು. ಪಿಪಿಎಫ್​ ಯೋಜನೆಯು 15 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತದೆ. ಪಿಪಿಎಫ್​ ಮೂಲಕ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ.

2) ಟ್ಯಾಕ್ಸ್ ಸೇವಿಂಗ್ಸ್ ಮ್ಯೂಚುವಲ್ ಫಂಡ್‌ಗಳು: ಸಾಮಾನ್ಯವಾಗಿ ಈಕ್ವಿಟಿ-ಲಿಂಕ್ಡ್ ಉಳಿತಾಯ ಯೋಜನೆಗಳು ಅಥವಾ ELSS ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆ-ಸಂಬಂಧಿತ ಹೂಡಿಕೆಗಳು ಆದಾಯ-ತೆರಿಗೆ ಸೆಕ್ಷನ್ 80C ಅಡಿಯಲ್ಲಿ ಅರ್ಹತೆ ಪಡೆಯುತ್ತವೆ. ELSS ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತದೆ. ನೀವು ಮಾಸಿಕ SIP ಅಥವಾ ಒಟ್ಟು ಮೊತ್ತದ ವಿಧಾನದ ಮೂಲಕ ELSSನಲ್ಲಿ ಹೂಡಿಕೆ ಮಾಡಬಹುದು. ಯೂನಿಟ್‌ಗಳನ್ನು ರಿಡೀಮ್ ಮಾಡಿದಾಗ ಗಳಿಸಿದ ಆದಾಯವು ತೆರಿಗೆಗೆ ಒಳಪಟ್ಟಿರುತ್ತದೆ ಮತ್ತು ರೂ. 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಲಾಭಗಳ ಮೇಲೆ ಶೇ 10ರ ದೀರ್ಘಾವಧಿ ಲಾಭ ತೆರಿಗೆಯ (LTCG) ವ್ಯಾಪ್ತಿಗೆ ಬರುತ್ತದೆ.

3) ಎನ್​ಪಿಎಸ್​ (NPS): ಸೆಕ್ಷನ್ 80CCD ಅಡಿಯಲ್ಲಿ ಎನ್​ಪಿಎಸ್​ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ರೂ. 2 ಲಕ್ಷವರೆಗೆ ತೆರಿಗೆ ಕಡಿತವನ್ನು- ಸೆಕ್ಷನ್ ಸಿಸಿಡಿ (1) ಅಡಿಯಲ್ಲಿ ರೂ. 1.5 ಲಕ್ಷ ಮತ್ತು ಹೆಚ್ಚುವರಿ ರೂ. 50,000 ಸೆಕ್ಷನ್ CCD (1B) ಅಡಿಯಲ್ಲಿ ಪಡೆಯಬಹುದು.

4) ವಿಮೆ: ಆರೋಗ್ಯ ಮತ್ತು ಲೈಫ್​ ಇನ್ಷೂರೆನ್ಸ್​ಗಾಗಿ ಪಾವತಿಸಿದ ಪ್ರೀಮಿಯಂ ಅನ್ನು ತೆರಿಗೆ ಕಡಿತಕ್ಕೆ ಬಳಸಬಹುದು. ಆದರೆ ನಿಮ್ಮ ಜೀವ ವಿಮಾ ಪಾಲಿಸಿಯನ್ನು ನಿಲ್ಲಿಸಬೇಡಿ ಅಥವಾ ತೆರಿಗೆ ಉಳಿಸುವ ಗುರಿಗಳನ್ನು ಪೂರ್ತಿಗೊಳಿಸಲು ಹೊಸದನ್ನು ತೆಗೆದುಕೊಳ್ಳಬೇಡಿ. ವಿಮೆಯನ್ನು ಖರೀದಿಸುವ ಕಲ್ಪನೆಯು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆಯನ್ನು ಒದಗಿಸುವುದು. ಆದ್ದರಿಂದ ನಿಮ್ಮ ವಿಮಾ ಖರೀದಿಯು ಕುಟುಂಬದ ಆರೋಗ್ಯ ಅಗತ್ಯಗಳನ್ನು ಆಧರಿಸಿರಬೇಕು.

5) ಟ್ಯಾಕ್ಸ್ ಸೇವಿಂಗ್ಸ್​ ಎಫ್‌ಡಿಗಳು: ನೀವು ಹೆಚ್ಚಿನ ಅಪಾಯ ಇಲ್ಲದ ಹೂಡಿಕೆಗಳನ್ನು ಬಯಸಿದಲ್ಲಿ ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡಿ. ಇದು ಎಫ್​ಡಿ ಬಡ್ಡಿ ದರದೊಂದಿಗೆ ಐದು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತದೆ. ತೆರಿಗೆ ಉಳಿಸುವ ಎಫ್​ಡಿಗಳಲ್ಲಿನ ಹೂಡಿಕೆಯು ಸೆಕ್ಷನ್ 80C ಅಡಿಯಲ್ಲಿ ಕಡಿತವನ್ನು ಪಡೆಯಲು ಸಹಾಯ ಮಾಡುತ್ತದೆ. ಅನ್ವಯವಾಗುವ ತೆರಿಗೆ ಸ್ಲ್ಯಾಬ್ ಪ್ರಕಾರ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಹೆಚ್ಚುವರಿಯಾಗಿ, ಗಳಿಸಿದ ಬಡ್ಡಿಯು ಒಂದು ಆರ್ಥಿಕ ವರ್ಷದಲ್ಲಿ ರೂ. 40,000ಗಿಂತ ಹೆಚ್ಚಿದ್ದರೆ ಬ್ಯಾಂಕ್‌ಗಳು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸುತ್ತವೆ.

ವರ್ಷದಾದ್ಯಂತ ನಿಮ್ಮ ತೆರಿಗೆ ಹೂಡಿಕೆಗಳನ್ನು ಹಂಚಿ
ಮೊದಲ ಎರಡು ತ್ರೈಮಾಸಿಕಗಳಲ್ಲಿ ಗಮನಾರ್ಹ ಕೊಡುಗೆಗಳೊಂದಿಗೆ ವರ್ಷವಿಡೀ ತೆರಿಗೆ ಉಳಿತಾಯ ಇನ್​ಸ್ಟ್ರುಮೆಂಟ್​ಗಳಲ್ಲಿ ನಿಮ್ಮ ಹೂಡಿಕೆಗಳನ್ನು ಹಂಚಲು ಸಲಹೆ ನೀಡಲಾಗುತ್ತದೆ. ಎನ್​ಪಿಎಸ್​ ಮತ್ತು ಇಪಿಎಫ್ ನಿಮ್ಮ ಮಾಸಿಕ ಹೂಡಿಕೆಗಳನ್ನು ನೋಡಿಕೊಳ್ಳಬಹುದು. ಇದರ ಜೊತೆಗೆ ತೆರಿಗೆ ಉಳಿಸುವ ಹೂಡಿಕೆ ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್​ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್) ಪರಿಗಣಿಸಬಹುದು. ಆದರೆ ಪಿಪಿಎಫ್​ನಲ್ಲಿ ನೀವು ಪ್ರತಿ ತಿಂಗಳು ಪಾವತಿ ಮಾಡಬಹುದು. ಇಂಥ ಕ್ರಮಬದ್ಧವಾದ ಧೋರಣೆಯಿಂದ ಹಣಕಾಸು ವರ್ಷದ ಕೊನೆ ತ್ರೈಮಾಸಿಕದಲ್ಲಿ ಹೊರೆಯಾಗುವುದು ತಪ್ಪಿಸಬಹುದು.

ತೆರಿಗೆ ಯೋಜನೆಯು ನಿಮ್ಮ ಹೂಡಿಕೆಯನ್ನು ಟ್ರ್ಯಾಕ್‌ನಲ್ಲಿ ಇರಿಸುತ್ತದೆ ಮತ್ತು ತೆರಿಗೆ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಆದರೆ ಬಹುತೇಕರು ತೆರಿಗೆ ಉಳಿತಾಯವನ್ನು ತಮ್ಮ ಹೂಡಿಕೆ ಗುರಿಯನ್ನಾಗಿ ಮಾಡುವ ತಪ್ಪನ್ನು ಮಾಡುತ್ತಾರೆ. ಹೂಡಿಕೆಯ ಗುರಿಯು ನಿಮ್ಮ ಹಣಕಾಸಿನ ಗುರಿ, ಅಪಾಯದ ಪ್ರೊಫೈಲ್ ಮತ್ತು ಆದಾಯವನ್ನು ಆಧರಿಸಿರಬೇಕು. ಮತ್ತು ನಿಮ್ಮ ಹೂಡಿಕೆಯು ತೆರಿಗೆ-ಉಳಿತಾಯ ಗುರಿಯನ್ನು ಪೂರೈಸಲು ಸಹಾಯ ಮಾಡಿದರೆ ಅದು ಹೆಚ್ಚುವರಿ ಪ್ರಯೋಜನವಾಗಿದೆ. ತೆರಿಗೆ ಉಳಿಸುವ ಇನ್​ಸ್ಟ್ರುಮೆಂಟ್​ಗಳಲ್ಲಿ ಹೂಡಿಕೆ ಮಾಡಲು ನಿಮ್ಮ ಮೇಲೆ ಯಾವುದೇ ಒತ್ತಾಯವಿಲ್ಲ. ಇದು ದೀರ್ಘಾವಧಿಯ ಬೆಳವಣಿಗೆಯನ್ನು ಸೃಷ್ಟಿಸಲು ಸಹಾಯ ಮಾಡುವ ತೆರಿಗೆ ರಿಯಾಯಿತಿಗಳಾಗಿವೆ.

ಇದನ್ನೂ ಓದಿ: ITR Filing: 2021-22ರ ಹಣಕಾಸು ವರ್ಷದ ವಿವಿಧ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಫಾರ್ಮ್ ಅಧಿಸೂಚನೆ