
ನವದೆಹಲಿ, ಡಿಸೆಂಬರ್ 11: ಪ್ಯಾನ್, ಆಧಾರ್, ಯುಪಿಐ ಮೂಲಕ ಹಣಕಾಸು ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಗಣನೀಯವಾಗಿ ಸುಧಾರಣೆ ತಂದ ಭಾರತ ಇದೀಗ ಅಂಥಹುದೇ ಒಂದು ಹೊಸ ಪ್ರಯೋಗ ಮಾಡುತ್ತಿದೆ. ಭೌತಿಕ ವಿಳಾಸದ ಸಂಕೀರ್ಣತೆ ಮತ್ತು ಗೊಂದಲವನ್ನು ನೀಗಿಸಿ, ಅಡ್ರೆಸ್ ಸಿಸ್ಟಂ ಅನ್ನು ಸರಳಗೊಳಿಸುವ ಧ್ರುವ ಎನ್ನುವ ಫ್ರೇಮ್ವರ್ಕ್ ರೂಪಿಸಲಾಗುತ್ತಿದೆ. ಧ್ರುವ ಎಂದರೆ ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯೂನಿಕ್ ವರ್ಚುವಲ್ ಅಡ್ರೆಸ್ (DHRUVA- Digital Hub for Reference and Unique Virtual Address). ಅಂಚೆ ಇಲಾಖೆ ಇಂಥದ್ದೊಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಧ್ರುವ ಫ್ರೇಮ್ವರ್ಕ್ನಲ್ಲಿ ಈ ದೇಶದ ಪ್ರತಿಯೊಂದು ಜಾಗಕ್ಕೂ ಡಿಜಿಪಿನ್ (Digipin) ಸೃಷ್ಟಿಸಲು ಆಗುತ್ತದೆ. ಅಂಚೆ ಇಲಾಖೆ ರೂಪಿಸಿರುವ ಡಿಜಿಪಿನ್ ಎಂಬುದು ಓಪನ್ ಸೋರ್ಸ್ ಲೊಕೇಶನ್ ಪಿನ್ ಸಿಸ್ಟಂ ಆಗಿದೆ. ಪ್ರತೀ 12 ಚದರ ಮೀಟರ್ನ ಜಾಗವನ್ನು ಒಂದು ಬ್ಲಾಕ್ ಆಗಿ ವಿಭಜಿಸಿ, ಅದಕ್ಕೆ ಪ್ರತ್ಯೇಕವಾದ ಡಿಜಿಪಿನ್ ಕೊಡಲಾಗುತ್ತದೆ. ಈ ಡಿಜಿಪಿನ್ ಎಂಬುದು 10 ಆಲ್ಫನ್ಯೂಮರಿಕ್ ಸಂಖ್ಯೆಯದ್ದಾಗಿರುತ್ತದೆ.
ಇದನ್ನೂ ಓದಿ: ಅಮೆರಿಕದ ಪಕ್ಕದ ದೇಶದಿಂದಲೂ ಭಾರತದ ಮೇಲೆ ಶೇ. 50 ಟ್ಯಾರಿಫ್; ಏನಿದರ ಪರಿಣಾಮ?
ಈ ಡಿಜಿಪಿನ್ ಕೊಟ್ಟರೆ ಸಾಕು ವಿಳಾಸದ ನಕ್ಷೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದೊಂದು ರೀತಿಯಲ್ಲಿ ಗೂಗಲ್ ಮ್ಯಾಪ್ನಲ್ಲಿ ಲೊಕೇಶನ್ ಕಳುಹಿಸಿದಂತೆ. ಗೂಗಲ್ ಮ್ಯಾಪ್ನಲ್ಲಿ ಲೊಕೇಶನ್ ಅನ್ನು ವಿವಿಧ ಕೋಆರ್ಡಿನೇಟ್ಗಳಿಂದ ಗುರುತಿಸಲಾಗುತ್ತದೆ. ಡಿಜಿಪಿನ್ನಲ್ಲೂ ಬಹುತೇಕ ಅಂಥದ್ದೇ ತಂತ್ರಜ್ಞಾನ ಬಳಸಲಾಗುತ್ತದೆ.
ಯುಪಿಐನಲ್ಲಿ ನೀವು ಬ್ಯಾಂಕ್ ಅಕೌಂಟ್ಗಳನ್ನು ಲಿಂಕ್ ಮಾಡಿರುತ್ತೀರಿ. ನಿಮ್ಮ ಮೊಬೈಲ್ ನಂಬರ್ ಅಥವಾ ನಿಮ್ಮ ಯುಪಿಐ ವಿಳಾಸ ಕೊಟ್ಟರೂ ಸಾಕು ಹಣವು ನಿರ್ದಿಷ್ಟ ಬ್ಯಾಂಕ್ ಅಕೌಂಟ್ಗೆ ಹೋಗಿ ಬೀಳುತ್ತದೆ. ಅದೇ ರೀತಿಯ ಒಂದು ವ್ಯವಸ್ಥೆಯನ್ನು ಧ್ರುವ ಸಿಸ್ಟಂನಲ್ಲಿ ಮಾಡಲಾಗಿದೆ.
ಇದನ್ನೂ ಓದಿ: ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಪ್ರಾಕ್ಸಿ ವಿಳಾಸ ಅಥವಾ ಲೇಬಲ್ ಜನರೇಟ್ ಮಾಡಬಹುದು. ಈ ಪ್ರಾಕ್ಸಿ ವಿಳಾಸಕ್ಕೆ ಆ ವ್ಯಕ್ತಿಯು ತಮ್ಮ ವಿಳಾಸದ ಡಿಜಿಪಿನ್ ಅನ್ನು ಜೋಡಿಸಬಹುದು. ಭೌತಿಕ ವಿಳಾಸದ ಮಾಹಿತಿಯನ್ನೂ ಅದಕ್ಕೆ ಸೇರಿಸಬಹುದು. ನೀವು ನಿಮ್ಮ ಭೌತಿಕ ವಿಳಾಸ ನೀಡಬೇಕಾದಾಗ ಈ ಪ್ರಾಕ್ಸಿ ಅಡ್ರೆಸ್ ಅಥವಾ ಲೇಬಲ್ ನೀಡಿದರೂ ಸಾಕು.
ಧ್ರುವ
ಈ ರೀತಿಯ ಡಿಜಿಟಲ್ ಅಡ್ರೆಸ್ ಸಿಸ್ಟಂ ಬರುವುದರಿಂದ ಬಹಳಷ್ಟು ಭೌತಿಕ ವಿಳಾಸ ಗೊಂದಲಗಳು ನಿವಾರಣೆ ಆಗುತ್ತವೆ. ಡೆಲಿವರಿ ಏಜೆಂಟ್ಗಳು, ಕ್ಯಾಬ್ ಚಾಲಕರು, ಪೋಸ್ಟ್ ಮ್ಯಾನ್ಗಳು ಇತ್ಯಾದಿ ಡೆಲಿವರಿ ಸರ್ವಿಸ್ ಕೆಲಸದವರಿಗೆ ಅನುಕೂಲವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ