ಅಮೆರಿಕದ ಪಕ್ಕದ ದೇಶದಿಂದಲೂ ಭಾರತದ ಮೇಲೆ ಶೇ. 50 ಟ್ಯಾರಿಫ್; ಏನಿದರ ಪರಿಣಾಮ?
Mexico 50pc tariffs on India: ಭಾರತ, ಚೀನಾ ಹಾಗು ಇತರ ಕೆಲ ಏಷ್ಯನ್ ದೇಶಗಳ ಮೇಲೆ ಮೆಕ್ಸಿಕೋದ ಟ್ಯಾರಿಫ್ ಶೇ. 50ಕ್ಕೆ ಏರಿಕೆ ಆಗಿದೆ. ಮೆಕ್ಸಿಕೋದ ಜೊತೆ ಟ್ರೇಡ್ ಡೀಲ್ ಮಾಡಿಕೊಳ್ಳದ ದೇಶಗಳ ಮೇಲೆ ಟ್ಯಾರಿಫ್ ಹೆಚ್ಚಿಸಲು ಆ ದೇಶದ ಸಂಸತ್ತು ಅನುಮತಿಸಿದೆ. ಕಳೆದ ವರ್ಷ ಭಾರತ ಮತ್ತು ಮೆಕ್ಸಿಕೋದ ಒಟ್ಟು ವ್ಯಾಪಾರ ವಹಿವಾಟು ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಈಗ ಟ್ಯಾರಿಫ್ ತಡೆ ಬಂದಿದೆ.

ನವದೆಹಲಿ, ಡಿಸೆಂಬರ್ 11: ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕಿದೆ. ಈ ಗಾಯದ ಮೇಲೆ ಬರೆ ಎಂಬಂತೆ ಅಮೆರಿಕದ ಪಕ್ಕದ ದೇಶವೊಂದೂ ಕೂಡ ಭಾರತದ ಮೇಲೆ ಶೇ. 50 ಟ್ಯಾರಿಫ್ ಹಾಕಲು ನಿರ್ಧರಿಸಿದೆ. ಭಾರತ, ಚೀನಾ ಹಾಗೂ ಏಷ್ಯಾದ ಇತರ ದೇಶಗಳ ಹೆಚ್ಚಿನ ಸರಕುಗಳ ಆಮದು ಮೇಲೆ ಶೇ. 50ರಷ್ಟು ಸುಂಕ ವಿಧಿಸುವ ಕ್ರಮಕ್ಕೆ ಮೆಕ್ಸಿಕೋದ ಸಂಸತ್ತು (Mexico Senate) ಅನುಮೋದನೆ ಕೊಟ್ಟಿದೆ.
ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಏಷ್ಯನ್ ದೇಶಗಳ ಮೇಲೆ ಟ್ಯಾರಿಫ್ ಹಾಕಲಾಗುತ್ತಿದೆ. 2026ರ ಜನವರಿ 1ರಿಂದ ಹೊಸ ಸುಂಕ ದರಗಳು ಜಾರಿಗೆ ಬರಲಿವೆ. ಆಟೊಮೊಬೈಲ್ ಭಾಗಗಳು, ಜವಳಿ, ಪ್ಲಾಸ್ಟಿಕ್, ಉಕ್ಕು ಇತ್ಯಾದಿ ಹಲವು ಉತ್ಪನ್ನಗಳ ಆಮದು ಮೇಲೆ ಮೆಕ್ಸಿಕೋ ಟ್ಯಾರಿಫ್ ಹಾಕುತ್ತದೆ. ಭಾರತ, ಚೀನಾ, ಥಾಯ್ಲೆಂಡ್, ಇಂಡೋನೇಷ್ಯಾ, ಸೌತ್ ಕೊರಿಯಾ ಮೊದಲಾದ ದೇಶಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ.
ಇದನ್ನೂ ಓದಿ: ಅಮೆರಿಕದ ಬಡ್ಡಿದರ ಇಳಿಕೆ; ಚಿನ್ನ, ಬೆಳ್ಳಿ ಬೆಲೆಗಳು ಮೇಲೇರುತ್ವಾ?
ಭಾರತದ ಮೇಲೆಷ್ಟು ಪರಿಣಾಮ?
ಭಾರತವು ಟ್ರೇಡ್ ಸರ್ಪ್ಲಸ್ ಹೊಂದಿರುವ ದೇಶಗಳಲ್ಲಿ ಮೆಕ್ಸಿಕೋ ಒಂದು. ಅಂದರೆ, ಮೆಕ್ಸಿಕೋದಿಂದ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ ರಫ್ತು ಮಾಡುವುದು ಹೆಚ್ಚು. ಕಳೆದ ವರ್ಷ (2024) ಭಾರತ ಹಾಗೂ ಮೆಕ್ಸಿಕೋ ನಡುವಿನ ಒಟ್ಟು ವ್ಯಾಪಾರ ವಹಿವಟು 11.7 ಬಿಲಿಯನ್ ಡಾಲರ್ ಆಗಿತ್ತು. ಇದು ಗರಿಷ್ಠ ವ್ಯಾಪಾರ ಎನಿಸಿದೆ. ಇದರಲ್ಲಿ ಭಾರತ 8.9 ಬಿಲಿಯನ್ ಡಾಲರ್ ರಫ್ತು ಮಾಡಿದರೆ, 2.8 ಬಿಲಿಯನ್ ಡಾಲರ್ ಆಮದು ಮಾಡಿಕೊಂಡಿದೆ.
ಮೆಕ್ಸಿಕೋಗೆ ಭಾರತದಿಂದ ಕಾರು, ವಾಹನ ಬಿಡಿಭಾಗಗಳನ್ನು ಹೆಚ್ಚಾಗಿ ರಫ್ತಾಗುತ್ತದೆ. ಮೆಕ್ಸಿಕೋ ಶೇ. 50ರಷ್ಟು ಟ್ಯಾರಿಫ್ ವಿಧಿಸುವುದರಿಂದ ಭಾರತದ ರಫ್ತಿಗೆ ತುಸು ಹೊಡೆತ ಬೀಳಲಿದೆ. ಅದರಲ್ಲೂ ಆಟೊಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಹಿನ್ನಡೆಯಾಗಬಹುದು.
ಇದನ್ನೂ ಓದಿ: ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು
ಟ್ರಂಪ್ರನ್ನು ತಣಿಸಲು ಯತ್ನಿಸುತ್ತಿದೆಯಾ ಮೆಕ್ಸಿಕೋ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೋ ವಿರುದ್ಧ ಬಾರಿ ಬಾರಿ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ. ಟ್ರಂಪ್ ಅವರ ಕೋಪ ತಗ್ಗಿಸಲು ಮೆಕ್ಸಿಕೋ ಭಾರತ, ಚೀನಾ ಮತ್ತಿತರ ದೇಶಗಳ ಮೇಲೆ ಟ್ಯಾರಿಫ್ ಕ್ರಮ ಕೈಗೊಂಡಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಮತ್ತೊಂದು ವಾದವೆಂದರೆ, ಮೆಕ್ಸಿಕೋ ತನ್ನ ಸ್ಥಳೀಯ ಉದ್ಯಮಕ್ಕೆ ಉತ್ತೇಜನ ಕೊಡಲು ಟ್ಯಾರಿಫ್ ಅಸ್ತ್ರ ಬಳಸುತ್ತಿರಬಹುದು. ಒಟ್ಟಾರೆ, ಮೆಕ್ಸಿಕೋದ ಶೇ. 50 ಟ್ಯಾರಿಫ್ ಕ್ರಮದಿಂದ ಭಾರತ, ಚೀನಾ, ಇಂಡೋನೇಷ್ಯಾದಂತಹ ದೇಶಗಳಿಗೆ ಪರಿಣಾಮಗಳಂತೂ ಆಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




