ನವದೆಹಲಿ, ಸೆಪ್ಟೆಂಬರ್ 4: ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಪ್ರತ್ಯೇಕಗೊಂಡಿರುವ ಜಿಯೋ ಫೈನಾನ್ಷಿಯಲ್ ಸರ್ವಿಸಸ್ (JFS- Jio Financial Services) ಷೇರುಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಬಿಎಸ್ಇ ಮತ್ತು ಎನ್ಎಸ್ಇಯ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಎಲ್ಲಾ ಸೂಚ್ಯಂಕಗಳಿಂದ ಜೆಎಫ್ಎಸ್ ಷೇರನ್ನು ಹೊರತೆಗೆಯಲಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ. ಇದೀಗ ಎರಡೂ ಷೇರುವಿನಿಮಯ ಕೇಂದ್ರಗಳಲ್ಲಿ ಜಿಯೋ ಷೇರಿಗೆ ವಹಿವಾಟು ಮಿತಿ (Circuit Limit) ಬದಲಿಸಲಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಜೆಎಫ್ಎಸ್ನ ಪ್ರೈಸ್ ಬ್ಯಾಂಡ್ ಅನ್ನು ಶೇ. 5ರಿಂದ ಶೇ. 20ಕ್ಕೆ ಹೆಚ್ಚಿಸಿದೆ. ಹಾಗೆಯೇ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಕೂಡ ಜೆಎಫ್ಎಸ್ನ ಪ್ರೈಸ್ ಬ್ಯಾಂಡ್ ಅನ್ನು ಶೇ. 20ಕ್ಕೆ ಹೆಚ್ಚಿಸಿದೆ. ಜೆಎಫ್ಎಸ್ ಸೇರಿದಂತೆ 10 ಕಂಪನಿಗಳ ಷೇರುಗಳ ಸರ್ಕ್ಯುಟ್ ಲಿಮಿಟ್ ಅನ್ನು ಬಿಎಸ್ಇ ಬದಲಾಯಿಸಿದೆ.
ಒಂದು ಷೇರು ಒಮ್ಮೆಗೇ ದೊಡ್ಡ ಮಟ್ಟದಲ್ಲಿ ಏರಿಳಿತ ಕಾಣುವುದನ್ನು ತಪ್ಪಿಸಲು ಸ್ಟಾಕ್ ಎಕ್ಸ್ಚೇಂಜ್ಗಳು ಕೈಗೊಳ್ಳುವ ಕ್ರಮ. ಈಗ ಒಂದು ಷೇರಿನ ಸರ್ಕ್ಯುಟ್ ಲಿಮಿಟ್ ಶೇ. 5 ಎಂದು ನಿಗದಿ ಮಾಡಲಾಗಿದೆ ಎಂದಿಟ್ಟುಕೊಳ್ಳಿ. ಈ ಷೇರುಬೆಲೆ ಒಂದು ದಿನದಲ್ಲಿ ಶೇ. 5ಕ್ಕಿಂತ ಹೆಚ್ಚಾಗುವಂತಿಲ್ಲ, ಅಥವಾ ಇಳಿಕೆಯಾಗುವಂತಿಲ್ಲ.
ಇದನ್ನೂ ಓದಿ: ಅಮೆರಿಕದ ಏವಾ ಫಾರ್ಮಾ ಕಂಪನಿಯ ಮಾತ್ರೆ ತಯಾರಕಾ ಘಟಕ ಖರೀದಿಸಿದ ಬೆಂಗಳೂರಿನ ಬಯೋಕಾನ್
ಹೂಡಿಕೆದಾರರ ಹಿತ ಕಾಪಾಡಲು ಇಂಥ ಕ್ರಮಗಳನ್ನು ಅನುಸರಿಸಲಾಗುತ್ತದೆ. ಒಂದು ಷೇರು ಸರ್ಕ್ಯುಟ್ ಲಿಮಿಟ್ನ ಹತ್ತಿರಕ್ಕೆ ಹೋದರೆ ಹೂಡಿಕೆದಾರರು ತಮ್ಮಲಿರುವ ಷೇರುಗಳನ್ನು ಮಾರಲೋ ಅಥವಾ ಹೊಸ ಷೇರುಗಳನ್ನು ಖರೀದಿಸಲೋ ಮುಂದಾಗಬಹುದು.
ಜಿಯೋ ಫೈನಾನ್ಷಿಯಲ್ ಸರ್ವಿಸಸ್ನ ಷೇರುಬೆಲೆ ಎನ್ಎಸ್ಇ ಮತ್ತು ಬಿಎಸ್ಇಗಳಲ್ಲಿ ಕುಸಿಯುತ್ತಿರುವುದು ಕೆಲವರಿಗೆ ಅಚ್ಚರಿ ಮೂಡಿಸಿರಬಹುದು. ರಿಲಾಯನ್ಸ್ ಇಂಡಸ್ಟ್ರೀಸ್ನ ಅಂಗ ಸಂಸ್ಥೆಯಾದ್ದರಿಂದ ಜೆಎಫ್ಎಸ್ ಅನ್ನು ಸ್ಟಾಕ್ ಎಕ್ಸ್ಚೇಂಜ್ಗಳ ವಿವಿಧ ಸೂಚ್ಯಂಕಗಳಲ್ಲಿ ಒಳಗೊಳ್ಳಲಾಗಿತ್ತು. ಇದರಿಂದಾಗಿ ಎಲ್ಲಾ ಇಂಡೆಕ್ಸ್ ಫಂಡ್ಗಳೂ ಜೆಎಫ್ಎಸ್ ಮೇಲೆ ಹೂಡಿಕೆ ಮಾಡಿದವು. ಆದರೆ, ಯಾವಾಗ ಜೆಎಫ್ಎಸ್ ಅನ್ನು ವಿವಿಧ ಇಂಡೆಕ್ಸ್ಗಳಿಂದ ಹೊರತೆಗೆಯಬೇಕೆಂದು ನಿರ್ಧರಿಸಲಾಯಿತೋ ಆಗ ಇಂಡೆಕ್ಸ್ ಫಂಡ್ಗಳು ಜೆಎಫ್ಎಸ್ ಮೇಲಿನ ಹೂಡಿಕೆಯನ್ನು ಹಿಂಪಡೆಯುವುದು ಅನಿವಾರ್ಯವಾಯಿತು.
ಇದರಿಂದಾಗಿ ಜೆಎಫ್ಎಸ್ ಷೇರುಬೆಲೆ ಪ್ರತೀ ದಿನ ಶೇ. 5ರಷ್ಟು ಇಳಿಕೆಯಾಯಿತು. ಶೇ. 5ರಷ್ಟು ಇಳಿಕೆ ಯಾಕೆಂದರೆ ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಇದರ ಸರ್ಕ್ಯುಟ್ ಲಿಮಿಟ್ ಅನ್ನು ಶೇ. 5ಕ್ಕೆ ನಿಗದಿ ಮಾಡಲಾಗಿತ್ತು.
ಇದನ್ನೂ ಓದಿ: ಸಿಂಗಾಪುರದ ನೂತನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಭಾರತದ ಆರ್ಥಿಕ ಬಲಾಬಲದ ಬಗ್ಗೆ ಹೇಳಿದ ಕುತೂಹಲಕಾರಿ ಸಂಗತಿಗಳು
ಬಿಎಸ್ಇನ ಇಂಡೆಕ್ಸ್ ಫಂಡ್ಗಳು ಈಗಾಗಲೇ ಎಲ್ಲಾ ಜೆಎಫ್ಎಸ್ ಷೇರುಗಳನ್ನು ಬಿಕರಿ ಮಾಡಿವೆ. ಎನ್ಎಸ್ಇನಲ್ಲಿ 10 ಕೋಟಿ ಷೇರುಗಳನ್ನು ಇವತ್ತು ಅಥವಾ ನಾಳೆಯೊಳಗೆ ಮಾರುವ ಸಾಧ್ಯತೆ ಇದೆ.
ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಆಗಸ್ಟ್ 21ರಂದು 265 ರೂ ಬೆಲೆಯೊಂದಿಗೆ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿತ್ತು. ಆಗಸ್ಟ್ 25ರಷ್ಟರಲ್ಲಿ ಅದರ ಷೇರುಬೆಲೆ 214.50 ರುಪಾಯಿಗೆ ಕುಸಿದಿತು. ಆ ಬಳಿಕ ಎನ್ಎಸ್ಇ ಮತ್ತು ಬಿಎಸ್ಇ ಎರಡೂ ಕಡೆ ಜೆಎಫ್ಎಸ್ ಷೇರಿಗೆ ಬೇಡಿಕೆ ಬಂದಿದೆ. ಈಗ ಸರ್ಕ್ಯುಟ್ ಲಿಮಿಟ್ ಅನ್ನು ಶೇ. 20ರಷ್ಟು ಹೆಚ್ಚಿಸಿರುವುದು ಜೆಎಫ್ಎಸ್ ಷೇರು ಖರೀದಿಸುವವರಿಗೆ ಒಳ್ಳೆಯ ಅನುಕೂಲ ಮಾಡಿಕೊಟ್ಟಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Mon, 4 September 23