LIC: ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಎಷ್ಟು? ಕೊನೆಗೂ ಸ್ಪಷ್ಟನೆ ನೀಡಿದ ಎಲ್​ಐಸಿ

ಅದಾನಿ ಸಮೂಹದ 30,127 ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿಸಲಾಗಿತ್ತು. ಇದರ ಮಾರುಕಟ್ಟೆ ಮೌಲ್ಯ ಜನವರಿ 27ರಂದು 56,142 ಕೋಟಿ ರೂ. ಆಗಿತ್ತು ಎಂದು ಎಲ್​ಐಸಿ ಪ್ರಕಟಣೆ ತಿಳಿಸಿದೆ. ಆದರೆ, ಜನವರಿ 27ರ ನಂತರ ಅದಾನಿ ಸಮೂಹದಲ್ಲಿ ಎಲ್​​ಐಸಿಯ ಎಷ್ಟು ಪಾಲು ಬಂಡವಾಳದ ಮೌಲ್ಯ ಎಷ್ಟಾಗಿದೆ ಎಂಬ ಲೆಕ್ಕಾಚಾರವನ್ನು ಎಲ್​ಐಸಿ ನೀಡಿಲ್ಲ ಎಂಬುದು ಗಮನಾರ್ಹ.

LIC: ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಎಷ್ಟು? ಕೊನೆಗೂ ಸ್ಪಷ್ಟನೆ ನೀಡಿದ ಎಲ್​ಐಸಿ
ಎಲ್​​ಐಸಿ

Updated on: Jan 31, 2023 | 11:02 AM

ನವದೆಹಲಿ: ಅದಾನಿ ಸಮೂಹದ (Adani Group) ಕಂಪನಿಗಳಲ್ಲಿ ಮಾಡಿರುವ ಹೂಡಿಕೆಯ ಬಗ್ಗೆ ಭಾರತೀಯ ಜೀವ ವಿಮಾ ನಿಗಮ (LIC) ಕೊನೆಗೂ ಮೌನ ಮುರಿದಿದೆ. ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಸಮೂಹದ ಮೇಲೆ ಮಾಡಿರುವ ಆರೋಪದ ಬಳಿಕ ಅದಾನಿ ಒಡೆತನದ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಇದರಿಂದಾಗಿ ಆ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಎಲ್​ಐಸಿಗೂ ಭಾರೀ ನಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಎಲ್​ಐಸಿ ಮೌನ ತಳೆದಿತ್ತು. ಈ ವಿಚಾರವಾಗಿ ಸೋಮವಾರ ಸ್ಪಷ್ಟನೆ ನೀಡಿರುವ ಎಲ್​ಐಸಿ, ತಾನು ನಿರ್ವಹಿಸುತ್ತಿರುವ ಒಟ್ಟು ಸ್ವತ್ತಿನ ಶೇ 1ಕ್ಕಿಂತಲೂ ಕಡಿಮೆ ಮೊತ್ತವನ್ನು ಮಾತ್ರ ಅದಾನಿ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿತ್ತು ಎಂದು ತಿಳಿಸಿದೆ.

ಅದಾನಿ ಸಮೂಹದ 30,127 ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿಸಲಾಗಿತ್ತು. ಇದರ ಮಾರುಕಟ್ಟೆ ಮೌಲ್ಯ ಜನವರಿ 27ರಂದು 56,142 ಕೋಟಿ ರೂ. ಆಗಿತ್ತು ಎಂದು ಎಲ್​ಐಸಿ ಪ್ರಕಟಣೆ ತಿಳಿಸಿದೆ. 2022ರ ಸೆಪ್ಟೆಂಬರ್ 30ರ ಲೆಕ್ಕಾಚಾರದ ಪ್ರಕಾರ, ಒಟ್ಟಾರೆಯಾಗಿ 41.66 ಲಕ್ಷ ಕೋಟಿ ಮೌಲ್ಯದ ಸಂಪತ್ತನ್ನು ಎಲ್​ಐಸಿ ನಿರ್ವಹಿಸುತ್ತಿದೆ. ಇದರಂತೆ ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಶೇ 0.975 ಆಗಿದೆ ಎಂದು ಎಲ್​ಐಸಿ ಪ್ರಕಟಣೆ ತಿಳಿಸಿದೆ.

ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್​ಐಸಿ ಹೊಂದಿರುವ ಡೆಬ್ಟ್ ಸೆಕ್ಯುರಿಟೀಸ್ ರೇಟಿಂಗ್, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಹೂಡಿಕೆ ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: LIC: ಅದಾನಿ ಸಮೂಹ ಷೇರು ಮೌಲ್ಯ ಕುಸಿತ; ಎಲ್​​ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ

ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ಮಾಡಿರುವ ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆ ತಿರುಚಿದ ಆರೋಪದ ನಂತರ ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಜನವರಿ 27ರ ನಂತರ ಈವರೆಗೆ ಒಟ್ಟಾರೆಯಾಗಿ ಅದಾನಿ ಸಮೂಹ ಕಂಪನಿಗಳು ಒಟ್ಟು 5.56 ಲಕ್ಷ ಕೋಟಿ ರೂ. ಸಂಪತ್ತನ್ನು ಕಳೆದುಕೊಂಡಿವೆ. ಜನವರಿ 27ರ ನಂತರ ಅದಾನಿ ಸಮೂಹದಲ್ಲಿ ಎಲ್​​ಐಸಿಯ ಎಷ್ಟು ಪಾಲು ಬಂಡವಾಳದ ಮೌಲ್ಯ ಎಷ್ಟಾಗಿದೆ ಎಂಬ ಲೆಕ್ಕಾಚಾರವನ್ನು ಎಲ್​ಐಸಿ ನೀಡಿಲ್ಲ ಎಂಬುದು ಗಮನಾರ್ಹ.

ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತವಾಗಿರುವುದು ಎಲ್​​ಐಸಿಗೂ ದೊಡ್ಡ ಹೊಡೆತ ನೀಡಿದೆ. ಎರಡೇ ದಿನಗಳಲ್ಲಿ ಎಲ್​​ಐಸಿ 18,647 ಕೋಟಿ ರೂ. ಕಳೆದುಕೊಂಡಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿದ್ದವು. ಆ ಬಳಿಕ ಪ್ರತಿಕ್ರಿಯಿಸಿದ್ದ ಎಲ್​ಐಸಿ, ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿರುವುದರಿಂದ ನಮಗೂ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿತ್ತು. ಆದರೆ, ಹೂಡಿಕೆಯ ಮೊತ್ತದ ವಿವರಕ್ಕೆ ಸಂಬಂಧಿಸಿ ಮೌನ ತಾಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Tue, 31 January 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us