LIC: ಅದಾನಿ ಸಮೂಹ ಷೇರು ಮೌಲ್ಯ ಕುಸಿತ; ಎಲ್​​ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ

ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತವಾಗಿರುವುದು ಭಾರತೀಯ ಜೀವ ವಿಮಾ ನಿಗಮ ಎಲ್​​ಐಸಿಗೂ ದೊಡ್ಡ ಹೊಡೆತ ನೀಡಿದೆ. ಪರಿಣಾಮವಾಗಿ ಎರಡೇ ದಿನಗಳಲ್ಲಿ ಎಲ್​​ಐಸಿ 18,647 ಕೋಟಿ ರೂ. ಕಳೆದುಕೊಂಡಿದೆ.

LIC: ಅದಾನಿ ಸಮೂಹ ಷೇರು ಮೌಲ್ಯ ಕುಸಿತ; ಎಲ್​​ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ
ಎಲ್​​ಐಸಿ
Follow us
Ganapathi Sharma
|

Updated on:Jan 28, 2023 | 10:47 AM

ಮುಂಬೈ: ಅಮೆರಿಕದ ಸಂಶೋಧನಾ ಸಂಸ್ಥೆಯ ವರದಿ ಪರಿಣಾಮವಾಗಿ ಅದಾನಿ ಸಮೂಹದ (Adani Group) ಷೇರು ಮೌಲ್ಯಗಳಲ್ಲಿ ಭಾರೀ ಕುಸಿತವಾಗಿರುವುದು ಭಾರತೀಯ ಜೀವ ವಿಮಾ ನಿಗಮ ಎಲ್​​ಐಸಿಗೂ (LIC) ದೊಡ್ಡ ಹೊಡೆತ ನೀಡಿದೆ. ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್​ಐಸಿ ಕೂಡ ಹಣ ಹೂಡಿರುವುದರಿಂದ ಆ ಕಂಪನಿಯ ಷೇರು ಮೌಲ್ಯದಲ್ಲಿ ಕುಸಿತವಾಗಿರುವುದರ ಹೊಡೆತ ಎಲ್​ಐಸಿ ಮೇಲೂ ಬಿದ್ದಿದೆ. ಪರಿಣಾಮವಾಗಿ ಎರಡೇ ದಿನಗಳಲ್ಲಿ ಎಲ್​​ಐಸಿ 18,647 ಕೋಟಿ ರೂ. ಕಳೆದುಕೊಂಡಿದೆ. ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್​ಐಸಿ ಹೂಡಿಕೆಯ ಮೌಲ್ಯ ಜನವರಿ 24ರ ವೇಳೆಗೆ 81,268 ಕೋಟಿ ರೂ. ಆಗಿತ್ತು. ಇದು ಜನವರಿ 27ಕ್ಕೆ 62,621 ಕೋಟಿ ರೂ.ಗೆ ಕುಸಿದಿದೆ.

ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್​ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್​​ಮಿಷನ್​ಗಳ ಶೇ 1ರಷ್ಟು ಷೇರು ಅನ್ನು ಎಲ್​ಐಸಿ ಹೊಂದಿದೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. ಇತ್ತೀಚೆಗೆ ಅಂಬುಜಾ ಸಿಮೆಂಟ್ಸ್​​ ಮತ್ತು ಎಸಿಸಿಯಲ್ಲೂ ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ. ಈ ಕಂಪನಿಗಳ ಷೇರುಗಳು ಕಳೆದ ಎರಡು ಟ್ರೇಡಿಂಗ್ ಸೆಷನ್​​ಗಳಲ್ಲಿ ಶೇ 27 ಹಾಗೂ ಶೇ 19ರ ನಡುವೆ ಕುಸಿದಿವೆ.

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್​ ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಅದಾನಿ ಸಮೂಹದ ಮೇಲೆ ಆರೋಪ ಮಾಡಿದ ಬೆನ್ನಲ್ಲೇ ಸಮೂಹದ ಷೇರುಗಳ ಮೌಲ್ಯದಲ್ಲಿ ಕುಸಿತ ಆರಂಭವಾಗಿತ್ತು.

ಮಿತಿಯಲ್ಲೇ ಸಾಲ ನೀಡಿದ್ದೇವೆ ಎಂದ ಎಸ್​ಬಿಐ

ಅದಾನಿ ಸಮೂಹ ಸಂಸ್ಥೆಗಳಿಗೆ ಸಾಲ ನೀಡಿರುವ ಎಸ್​​ಬಿಐ ಕೂಡ ಇತ್ತೀಚಿನ ಬೆಳವಣಿಗೆಯಿಂದಾಗಿ ನಷ್ಟದ ಭೀತಿಯಲ್ಲಿದೆ. ಎಸ್​​ಬಿಐ ಷೇರು ಮೌಲ್ಯದಲ್ಲಿಯೂ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಭಾರೀ ಕುಸಿತವಾಗಿದೆ. ಆದರೆ, ಆರ್​ಬಿಐ ಮಾನದಂಡದ ಪ್ರಕಾರ, ಇತಿಮಿತಿಯ ಒಳಗೇ ಅದಾನಿ ಸಮೂಹದ ಕಂಪನಿಗಳಿಗೆ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಯಾವುದೇ ಕಂಒನಿಗಳ ಸಮೂಹಕ್ಕೆ ಶೇ 25ಕ್ಕಿಂತ ಹೆಚ್ಚಿನ ಸಾಲ ನೀಡಲು ಆರ್​​ಬಿಐ ನಮಗೆ ಅನುಮತಿಸಿಲ್ಲ. ಆ ಮಿತಿಯ ಒಳಗೆಯೇ ನಾವು ಸಾಲ ನೀಡಿದ್ದೇವೆ ಎಂದು ಎಸ್​ಬಿಐ ಹೇಳಿದೆ.

ಎಸ್​​ಬಿಐ, ಎಲ್​ಐಸಿ ಷೇರು ಮೌಲ್ಯದಲ್ಲಿ ಕುಸಿತ

ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತವಾದ ಬೆನ್ನಲ್ಲೇ ಅದರ ಜತೆ ಸಂಬಂಧ ಹೊಂದಿರುವ ಎಲ್​ಐಸಿ ಹಾಗೂ ಎಸ್​ಬಿಐ ಷೇರು ಮೌಲ್ಯದಲ್ಲಿಯೂ ಕುಸಿತವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಎಸ್​ಬಿಐ ಷೇರು ಮೌಲ್ಯದಲ್ಲಿ ಶೇ 28.75ರಷ್ಟು ಕುಸಿತ ದಾಖಲಾಗಿತ್ತು. ಮತ್ತೊಂದೆಡೆ, ಎಲ್​ಐಸಿ ಷೇರು ಮೌಲ್ಯದಲ್ಲಿ ಶೇ 23.45ರಷ್ಟು ಕುಸಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Sat, 28 January 23