
ನವದೆಹಲಿ, ಅಕ್ಟೋಬರ್ 2: ಬಹುತೇಕ ಎಲ್ಲಾ ಭಾರತೀಯ ರೂಪಾಯಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ಕಾಣುವುದು ಪ್ರತಿಯೊಬ್ಬರಿಗೂ ತೀರಾ ಸಾಮಾನ್ಯ. ಕುತೂಹಲದ ಸಂಗತಿ ಎಂದರೆ, ಕರೆನ್ಸಿ ನೋಟುಗಳ ಮೇಲೆ ಗಾಂಧಿ ಭಾವಚಿತ್ರ ಮುದ್ರಿಸುವ ಕೆಲಸ ಕಳೆದ ನಾಲ್ಕೈದು ದಶಕಗಳ ಹಿಂದಿನಿಂದು ಆಗುತ್ತಿದೆಯಷ್ಟೇ. ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಗಾಂಧೀಜಿಯವರ ಚಿತ್ರದ ನೋಟುಗಳ ಮೇಲೆ ಬರಲಿಲ್ಲ ಎಂಬುದು ಸತ್ಯ. ಗಾಂಧಿಜಿ ಅವರ ಜನ್ಮಶತಾಬ್ದಿ ಆಚರಣೆಯ ವೇಳೆ ಗೌರವಾರ್ಥವಾಗಿ 1969ರಲ್ಲಿ ಗಾಂಧಿಜಿ ಭಾವಚಿತ್ರ ಇರುವ ನೋಟುಗಳನ್ನು ಮೊದಲ ಬಾರಿಗೆ ಮುದ್ರಿಸಲಾಗಿತ್ತು. ಆ ಬಳಿಕ ಸತತವಾಗಿ ಗಾಂಧಿ ನೋಟುಗಳ ಮುದ್ರಣ ಆರಂಭವಾಗಲು ಇನ್ನೂ ಕೆಲ ದಶಕಗಳು ಬೇಕಾಯಿತು.
ಆರಂಭದ ಕಲ್ಪನೆಯಿಂದ ಹಿಡಿದು ಪ್ರಸ್ತುತ ಜಾರಿಯಲ್ಲಿರುವ ‘ಮಹಾತ್ಮ ಗಾಂಧಿ ಸರಣಿ’ವರೆಗಿನ ನೋಟುಗಳ ಹಾದಿಯ ಪ್ರಮುಖ ಇತಿಹಾಸ ಇಲ್ಲಿದೆ:
1947 ರಲ್ಲಿ ಭಾರತ ಸ್ವತಂತ್ರಗೊಂಡಾಗ ಬ್ರಿಟಿಷರ ಜಾರ್ಜ್ VI ಅವರ ಚಿತ್ರವಿದ್ದ ನೋಟುಗಳ ಬದಲು ಗಾಂಧೀಜಿಯವರ ಚಿತ್ರ ತರಲು ಆರಂಭದಲ್ಲಿ ಯೋಚಿಸಲಾಗಿತ್ತು. ಆದರೆ, ಅಂತಿಮವಾಗಿ ಸರ್ವಸಮ್ಮತಿಯಿಂದ ಸಾರನಾಥದ ‘ಅಶೋಕ ಸ್ತಂಭ’ದ ಸಿಂಹ ಲಾಂಛನವನ್ನು ಭಾರತೀಯ ನೋಟುಗಳ ವಾಟರ್‌ಮಾರ್ಕ್ ಹಾಗೂ ಮುಖಪುಟಕ್ಕೆ ಆಯ್ಕೆ ಮಾಡಲಾಯಿತು. 1950 ರಿಂದ 1980 ರ ದಶಕದವರೆಗೆ ಭಾರತದ ವೈವಿಧ್ಯತೆ, ಕೃಷಿ, ಕೈಗಾರಿಕೆ, ಅಣೆಕಟ್ಟು (ಹಿರಾಕುಡ್), ತಂತ್ರಜ್ಞಾನ (ಆರ್ಯಭಟ ಉಪಗ್ರಹ) ಹಾಗೂ ಕಲೆ-ಸಂಸ್ಕೃತಿಯ ಚಿತ್ರಗಳು ನೋಟುಗಳ ಹಿಂಭಾಗದಲ್ಲಿ ಪ್ರಮುಖವಾಗಿ ಮೂಡಿಬಂದಿದ್ದವು.
ಇದನ್ನೂ ಓದಿ: ಎಂಡಿಆರ್ ಕ್ರಮ ಜಾರಿಗೆ ಮುನ್ನವೇ ಸೆಪ್ಟೆಂಬರ್ನಲ್ಲಿ ಯುಪಿಐ ವಹಿವಾಟು ಇಳಿಮುಖ; ಆರ್‌ಬಿಐ ದತ್ತಾಂಶ
ಮಹಾತ್ಮ ಗಾಂಧೀಜಿಯವರ 100 ನೇ ಜನ್ಮದಿನೋತ್ಸವದ (ಶತಮಾನೋತ್ಸವ) ಸವಿನೆನಪಿಗಾಗಿ ರಿಸರ್ವ್ ಬ್ಯಾಂಕ್ (RBI) 1969 ರಲ್ಲಿ ವಿಶೇಷ ಸರಣಿಯ ನೋಟುಗಳನ್ನು ಬಿಡುಗಡೆ ಮಾಡಿತು. ಇದರಲ್ಲಿ ಗಾಂಧೀಜಿಯವರು ಸೇವಾಗ್ರಾಮ ಆಶ್ರಮದ ಹಿನ್ನೆಲೆಯಲ್ಲಿ ಕುಳಿತಿರುವ ಚಿತ್ರವನ್ನು ಮುದ್ರಿಸಲಾಗಿತ್ತು.
ದೇಶದ ಆರ್ಥಿಕತೆ ಬೆಳೆದಂತೆ ಮತ್ತು ಹೆಚ್ಚಿನ ಮೌಲ್ಯದ ನೋಟುಗಳ ಅಗತ್ಯ ಎದುರಾದಾಗ, ಅಕ್ಟೋಬರ್ 1987 ರಲ್ಲಿ ಆರ್‌ಬಿಐ ಪ್ರಥಮ ಬಾರಿಗೆ ₹500 ಮುಖಬೆಲೆಯ ಹೊಸ ನೋಟನ್ನು ಪರಿಚಯಿಸಿತು. ಈ ನೋಟಿನ ಬಲಬದಿಯಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಯಿತು.
ನೋಟುಗಳ ನಕಲಿಗೆ ತಡೆ ಹಾಗೂ ಭದ್ರತಾ ವೈಶಿಷ್ಟ್ಯಗಳನ್ನು (Security Features) ಅಳವಡಿಸುವ ಉದ್ದೇಶದಿಂದ ಆರ್‌ಬಿಐ 1996 ರಲ್ಲಿ ‘ಮಹಾತ್ಮ ಗಾಂಧಿ ಸರಣಿ’ಯ (Mahatma Gandhi Series) ನೋಟುಗಳನ್ನು ಅಧಿಕೃತವಾಗಿ ಜಾರಿಗೆ ತಂದಿತು. ₹10, ₹20, ₹50, ₹100, ₹500 ಮತ್ತು ₹1000 ಮುಖಬೆಲೆಯ ಎಲ್ಲಾ ನೋಟುಗಳ ಮೇಲೂ ಗಾಂಧೀಜಿಯವರ ಚಿತ್ರವನ್ನು ಕಡ್ಡಾಯ ಪ್ರಮುಖ ಭಾಗವಾಗಿ ಸೇರಿಸಲಾಯಿತು. 2016 ರಲ್ಲಿ ತಂದ ‘ನೂತನ ಮಹಾತ್ಮ ಗಾಂಧಿ ಸರಣಿ’ಯಲ್ಲೂ ಇದು ಮುಂದುವರಿದಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟ ಹೆಚ್ಚಾದರೂ ಕಚ್ಚಾ ತೈಲ ಬೆಲೆ ಇಳಿಯುತ್ತಿಲ್ಲವ್ಯಾಕೆ? ಇಲ್ಲಿವೆ ಕಾರಣಗಳು
ನೋಟುಗಳ ಮೇಲೆ ಕಾಣಿಸುವ ಗಾಂಧೀಜಿಯವರ ಮಂದಹಾಸದ ಚಿತ್ರವು ಕಲ್ಪಿತ ರೇಖಾಚಿತ್ರವಲ್ಲ. ಅದು 1946 ರಲ್ಲಿ ದೆಹಲಿಯ ವೈಸ್‌ರಾಯ್ ಹೌಸ್‌ನಲ್ಲಿ (ಇಂದಿನ ರಾಷ್ಟ್ರಪತಿ ಭವನ) ಬ್ರಿಟಿಷ್ ರಾಜಕಾರಣಿ ಲಾರ್ಡ್ ಪೆಥಿಕ್-ಲಾರೆನ್ಸ್ ಅವರೊಂದಿಗೆ ಗಾಂಧೀಜಿ ನಿಂತಿದ್ದಾಗ ತೆಗೆದ ನೈಜ ಛಾಯಾಚಿತ್ರದ ಕ್ರಾಪ್ ಮಾಡಿದ (Cut-out) ಚಿತ್ರವಾಗಿದೆ.
ಗಾಂಧೀಜಿಯವರು ಸಾರ್ವತ್ರಿಕವಾಗಿ ಸ್ವೀಕೃತವಾದ ರಾಷ್ಟ್ರೀಯ ಸಂಕೇತವಾಗಿರುವುದರಿಂದ ಮತ್ತು ದೇಶದ ವೈವಿಧ್ಯತೆಯನ್ನು ಐಕ್ಯತೆಯಿಂದ ಪ್ರತಿನಿಧಿಸುವುದರಿಂದ ಅವರ ಭಾವಚಿತ್ರವನ್ನು ಭಾರತೀಯ ಚಲಾವಣೆಯ ಪ್ರಮುಖ ಮುಖವಾಗಿ ಮುಂದುವರಿಸಿಕೊಂಡು ಬರಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ