ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟ ಹೆಚ್ಚಾದರೂ ಕಚ್ಚಾ ತೈಲ ಬೆಲೆ ಇಳಿಯುತ್ತಿಲ್ಲವ್ಯಾಕೆ? ಇಲ್ಲಿವೆ ಕಾರಣಗಳು
ಹಾರ್ಮುಜ್ ಜಲಸಂಧಿಯಲ್ಲಿ ಕಚ್ಚಾ ತೈಲ ಸಾಗಣೆ ಯುದ್ಧಪೂರ್ವ ಮಟ್ಟಕ್ಕೆ ಮರಳಿದ್ದರೂ, ತೈಲ ಬೆಲೆ ಪ್ರತಿ ಬ್ಯಾರಲ್‌ಗೆ $90-$100 ರ ಆಸುಪಾಸಿನಲ್ಲಿದೆ. ಸಂಸ್ಕರಿಸಿದ ಇಂಧನದ ಕೊರತೆ, ಹೆಚ್ಚಿದ ವಿಮೆ-ಸಾಗಣೆ ವೆಚ್ಚಗಳು ಮತ್ತು ಮಾರುಕಟ್ಟೆ ಭಾವನೆಗಳು ಬೆಲೆ ಇಳಿಕೆಗೆ ಅಡ್ಡಿಯಾಗಿವೆ. ಇದರಿಂದ ಭಾರತದ ಆಮದು ವೆಚ್ಚವೂ ಹೆಚ್ಚಿದ್ದು, ಸಾರ್ವಜನಿಕರಿಗೆ ತಕ್ಷಣವೇ ಬೆಲೆ ಇಳಿಕೆಯ ಲಾಭ ಸಿಗುವುದು ಕಷ್ಟ.

ನವದೆಹಲಿ, ಅಕ್ಟೋಬರ್ 2: ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ ಈ ಮೊದಲಿದ್ದ ಟ್ರಾಫಿಕ್ ಸ್ಥಿತಿಗೆ ಮರಳಿದೆ ಎನ್ನುವ ಖುಷಿಯ ಸುದ್ದಿ ಇದೆ. ಯುದ್ಧಕ್ಕೂ ಮುಂಚೆ ಈ ಮಾರ್ಗದಲ್ಲಿ ಇದ್ದಷ್ಟು ತೈಲ ನೌಕೆಗಳ ಸಾಗಣೆ ಸಂಖ್ಯೆ ಈಗ ಇದೆ ಎಂದು ವರದಿಗಳು ಹೇಳುತ್ತಿವೆ. ಕಪ್ಲರ್ (Kpler) ದತ್ತಾಂಶದ ಪ್ರಕಾರ, ದಿನಕ್ಕೆ ಸರಾಸರಿ 13.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಸಾಗಣೆಯಾಗುತ್ತಿದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ತೈಲ ಬೆಲೆಯು ಪ್ರತಿ ಬ್ಯಾರಲ್‌ಗೆ $90 ರಿಂದ $100 ರ ಆಸುಪಾಸಿನಲ್ಲೇ ಉಳಿಯುವ ಸಾಧ್ಯತೆಯಿದೆ. ತೈಲ ಪೂರೈಕೆ ಚೇತರಿಸಿಕೊಂಡರೂ ಬೆಲೆ ಇಳಿಕೆಯಾಗದಿರಲು ಕಾರಣಗಳು ಕುತೂಹಲಕಾರಿಯಾಗಿವೆ.
ಸಂಸ್ಕರಿಸಿದ ಇಂಧನದ ಕೊರತೆ
ಕಚ್ಚಾ ತೈಲದ ಸಾಗಣೆ ಸುಧಾರಿಸಿದ್ದರೂ, ಸಂಸ್ಕರಿಸಿದ ಇಂಧನಗಳ (Refined Fuel- ಪೆಟ್ರೋಲ್, ಡೀಸಲ್ ಇತ್ಯಾದಿ) ಪೂರೈಕೆಯು ಯುದ್ಧಪೂರ್ವ ಮಟ್ಟಕ್ಕಿಂತ ತೀರಾ ಕಡಿಮೆಯಿದೆ. ಕಚ್ಚಾ ತೈಲ ಲಭ್ಯವಿದ್ದರೂ, ಗ್ರಾಹಕರು ಬಳಸುವ ಅಂತಿಮ ಇಂಧನದ ಪೂರೈಕೆಯಲ್ಲಿ ವ್ಯತ್ಯಾಸವಿರುವುದು ಬೆಲೆಗಳ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: ಕಡಿಮೆ ಓಡಿದ ಕಾರ್ ಅಥವಾ ಸರಿಯಾದ ಸರ್ವಿಸ್? ಬಳಸಿದ ಕಾರು ಖರೀದಿಸುವಾಗ ಏನು ಗಮನಿಸಬೇಕು?
ದಾಳಿ ಭಯ ಮತ್ತು ವಿಮೆ/ಸಾರಿಗೆ ವೆಚ್ಚ
ಯುದ್ಧ ಭೀತಿಯ ಕಾರಣದಿಂದಾಗಿ ಪರ್ಯಾಯ ಮಾರ್ಗಗಳು ಮತ್ತು ಹಡಗಿನಿಂದ ಹಡಗಿಗೆ (Ship-to-ship) ತೈಲ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದಾಗಿ ಹಡಗುಗಳ ವಿಮೆ (Insurance) ಹಾಗೂ ಸಾರಿಗೆ ವೆಚ್ಚಗಳು (Freight costs) ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ.
ಮಾರುಕಟ್ಟೆಯ ಭಾವನೆಗಳು
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್ ಅವರ ಪ್ರಕಾರ, ತೈಲ ಬೆಲೆಯನ್ನು ಕೇವಲ ಭೌತಿಕ ಪೂರೈಕೆ ಮಾತ್ರ ನಿರ್ಧರಿಸುವುದಿಲ್ಲ. ಜಾಗತಿಕ ರಾಜಕೀಯ ಉದ್ವಿಗ್ನತೆ, ಯುದ್ಧದ ವರದಿಗಳು ಮಾರುಕಟ್ಟೆಯ ಭಾವನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಯಾವುದಾದರೂ ಒಂದು ದಾಳಿ ಸುದ್ದಿ ಬಂದರೆ ತೈಲ ಬೆಲೆ ಹೆಚ್ಚಿಬಿಡುತ್ತದೆ.
ಇದನ್ನೂ ಓದಿ: ಎಂಡಿಆರ್ ಕ್ರಮ ಜಾರಿಗೆ ಮುನ್ನವೇ ಸೆಪ್ಟೆಂಬರ್ನಲ್ಲಿ ಯುಪಿಐ ವಹಿವಾಟು ಇಳಿಮುಖ; ಆರ್ಬಿಐ ದತ್ತಾಂಶ
ಭಾರತದ ಮೇಲಿನ ಪರಿಣಾಮ
ಭಾರತಕ್ಕೆ ಕಚ್ಚಾ ತೈಲ ಆಮದು ವೆಚ್ಚವು ಪ್ರಸ್ತುತ ಬ್ರೆಂಟ್ (Brent) ಕಚ್ಚಾ ತೈಲದ ಮೂಲ ಬೆಲೆಗಿಂತ ಹೆಚ್ಚಾಗಿದೆ. ಹಾರ್ಮುಜ್ ಬದಲಿಗೆ ದೂರದ ದೇಶಗಳಿಂದ ತೈಲ ತರಿಸಿಕೊಳ್ಳುವುದು ಹಾಗೂ ಹೆಚ್ಚಿನ ಸಾರಿಗೆ/ವಿಮಾ ವೆಚ್ಚಗಳಿಂದಾಗಿ ಭಾರತದಲ್ಲಿ ತೈಲ ಸಂಗ್ರಹಣಾ ವೆಚ್ಚ ಸದ್ಯಕ್ಕೆ ಹೆಚ್ಚೇ ಇರಲಿದೆ.
ಕಚ್ಚಾ ತೈಲದ ಹರಿವು ಸುಧಾರಿಸಿರುವುದು ಸಮಾಧಾನಕರ ವಿಷಯವಾದರೂ, ಹಡಗು ಸಾಗಣೆ ವೆಚ್ಚ ಕಡಿಮೆಯಾಗಿ, ಸಂಸ್ಕರಣಾಗಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುವವರೆಗೆ ಸಾರ್ವಜನಿಕರಿಗೆ ತಕ್ಷಣವೇ ಬೆಲೆ ಇಳಿಕೆಯ ಲಾಭ ಸಿಗುವುದು ಕಷ್ಟಕರವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




