
ನವದೆಹಲಿ, ಜುಲೈ 18: ದೇಶದಲ್ಲಿ ಅತಿಹೆಚ್ಚು ಮಂದಿಗೆ ಕೆಲಸ ನೀಡುವ ಸಂಸ್ಥೆಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಇದೀಗ ತನ್ನ ಹೊಸ ಬೆಂಚ್ ಪಾಲಿಸಿ (TCS new bench policy) ಮೂಲಕ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಟಿಸಿಎಸ್ 35 ದಿನಗಳ ಬೆಂಚ್ ಮಿತಿ ಡೆಡ್ಲೈನ್ ದಾಟಿರುವುದು ಚಳಿ ತಂದಿದೆ. ಶೇ. 15-18ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ (layoff fear) ಭೀತಿಯಲ್ಲಿದ್ದಾರೆ ಎನ್ನುವಂತಹ ಸುದ್ದಿ ಇದೆ. ಅಂದರೆ, 30,000 ಕ್ಕೂ ಅಧಿಕ ಟಿಸಿಎಸ್ ಉದ್ಯೋಗಿಗಳಿಗೆ ಕೆಲಸ ಹೋಗುತ್ತಾ?
ಐಟಿ ಕಂಪನಿಗಳಲ್ಲಿ ವಿವಿಧ ರೀತಿಯ ಪ್ರಾಜೆಕ್ಟ್ಗಳು ಬರುತ್ತಿರುತ್ತವೆ. ಕೆಲ ಉದ್ಯೋಗಿಗಳಿಗೆ ಪ್ರಾಜೆಕ್ಟ್ಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದೇ ಹೋಗಬಹುದು. ಖಾಲಿ ಇರುವ ಅಂಥವರನ್ನು ಬೆಂಚ್ ಸಿಟ್ಟಿಂಗ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಉದ್ಯೋಗಿಗಳು ಆಂತರಿಕವಾಗಿ ಕೆಲಸ ಇಲ್ಲದೇ ಖಾಲಿ ಇರಲು ಹಲವು ಕಾರಣಗಳಿರಬಹುದು. ಅವರಿಗೆ ಸೂಕ್ತವಾದ ಪ್ರಾಜೆಕ್ಟ್ ಸಿಗದೇ ಹೋಗಿರಬಹುದು. ಪ್ರಾಜೆಕ್ಟ್ಗೆ ಸೂಕ್ತವಾದ ಕೌಶಲ್ಯ ಇಲ್ಲದೇ ಇರಬಹುದು. ಹೀಗೆ ನಾನಾ ಕಾರಣಗಳಿರಬಹುದು. ಈ ರೀತಿ ಸಾಕಷ್ಟು ದಿನ ಒಂದು ಉದ್ಯೋಗಿ ಬೆಂಚ್ನಲ್ಲಿ ಇದ್ದರೆ ಅವರನ್ನು ಉದ್ಯೋಗದಿಂದ ತೆಗೆದುಹಾಕುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ 35ಕ್ಕೂ ಹೆಚ್ಚು ದಿನ ಬೆಂಚ್ ಟೈಮ್ ಇಲ್ಲ; ಇದರಿಂದ ಅನುಕೂಲವೇನು?
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಜೂನ್ 12ರಂದು ಹೊಸ ಬೆಂಚ್ ಪಾಲಿಸಿ ತಂದಿದೆ. ಉದ್ಯೋಗಿಗಳ ಬೆಂಚ್ ಅವಧಿ 35 ದಿನ ಮೀರುವಂತಿಲ್ಲ ಎನ್ನುವುದು ಈ ಪಾಲಿಸಿಯ ಮುಖ್ಯಾಂಶ. ಅಂದರೆ ವರ್ಷದಲ್ಲಿ 225 ಬಿಲ್ಲಿಂಗ್ ದಿನಗಳಾದರೂ ಉದ್ಯೋಗಿ ಕೆಲಸ ಮಾಡಿರಬೇಕು ಎನ್ನುತ್ತದೆ ಈ ಟಿಸಿಎಸ್ ಪಾಲಿಸಿ. 2026ರ ಜೂನ್ 11ರವರೆಗೂ ಕಾಲಾವಕಾಶ ಇರಬಹುದು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಟಿಸಿಎಸ್ ಉದ್ಯೋಗಿಗಳು ಅಳಲು ತೋಡಿಕೊಳ್ಳುತ್ತಿದ್ಧಾರೆ.
ಟಿಸಿಎಸ್ನ ಹಲವು ಉದ್ಯೋಗಿಗಳು ರೆಡ್ಡಿಟ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಆತಂಕ ತೋರ್ಪಡಿಸಲು ಆರಂಭಿಸಿದ್ದಾರೆ. ಕೆಲವರ ಪ್ರಕಾರ ಟಿಸಿಎಸ್ನಲ್ಲಿ ಯಾವುದೇ ದಿನವಾದರೂ ಶೇ. 15ರಿಂದ 18ರಷ್ಟು ಉದ್ಯೋಗಿಗಳು ಬೆಂಚ್ನಲ್ಲಿ ಇರುತ್ತಾರೆ. ಅಂದರೆ ಬಹಳ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳು 35 ದಿನಗಳ ಬೆಂಚ್ ಮಿತಿಗೆ ಬರದೇ ಹೋಗಿರಬಹುದು.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಶೇ 10ರಷ್ಟು ಕತ್ತರಿ ಹಾಕಿದರೂ ಅದು 60,000ಕ್ಕೂ ಅಧಿಕ ಮಂದಿಗೆ ಕೆಲಸ ಹೋದಂತೆ.
ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಕಾದಿದೆಯಾ ಸಂಕಷ್ಟ? ಟಿಸಿಎಸ್, ಇನ್ಫೋಸಿಸ್ ಕಂಪನಿಗಳ ಬ್ಯುಸಿನೆಸ್ ಇಳಿಮುಖ?
ಐಟಿ ಕಂಪನಿಗಳಲ್ಲಿ ಪ್ರಾಜೆಕ್ಟ್ಗಳು ಸಿಗದೇ ಬೆಂಚ್ನಲ್ಲಿ ಕೂತವರನ್ನು ತುಚ್ಛವಾಗಿ ನೋಡಲಾಗುತ್ತದೆ ಎನ್ನುವ ಆರೋಪ ಇದೆ. ತಮ್ಮ ಕೌಶಲ್ಯಕ್ಕೆ ತಕ್ಕುದಾದ ಪ್ರಾಜೆಕ್ಟ್ಗಳು ಸಿಕ್ಕಿರೋದಿಲ್ಲ ಎಂದು ಹಲವರು ಹೇಳುತ್ತಾರೆ. ಬೆಂಚ್ನಲ್ಲಿದ್ದಾಗ ಯಾವುದಾದರೂ ಸ್ಕಿಲ್ ಅನ್ನು ಕಲಿತಾಗ, ಬೇರೆಯೇ ಸ್ಕಿಲ್ ಬೇಡುವ ಪ್ರಾಜೆಕ್ಟ್ಗಳಿಗೆ ಹಾಕುತ್ತಾರೆ. ಆಗ ಕ್ಲೈಂಟ್ಗಳು ತಮ್ಮನ್ನು ತಿರಸ್ಕರಿಸಬಹುದು. ಅಥವಾ ತಮಗೆ ಹೋಗಲು ಸಾಧ್ಯವೇ ಇಲ್ಲದಂತಹ ನಗರ ಅಥವಾ ದೇಶಗಳಿಗೆ ಹೋಗಿ ಕೆಲಸ ಮಾಡಬೇಕೆಂದು ಹೇಳಬಹುದು. ಹೀಗೆ ಬೇರೆ ಬೇರೆ ಕಾರಣಕ್ಕೆ ಪ್ರಾಜೆಕ್ಟ್ ಕೈತಪ್ಪುತ್ತವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಐಟಿ ಉದ್ಯೋಗಿಗಳು ಅಲವತ್ತುಕೊಳ್ಳುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ