
ಸಿಂಗಾಪುರ್, ಏಪ್ರಿಲ್ 16: ಖ್ಯಾತ ಹೂಡಿಕೆದಾರ ಮತ್ತು ‘ಎಮರ್ಜಿಂಗ್ ಮಾರ್ಕೆಟ್ಸ್’ (ಉದಯೋನ್ಮುಖ ಮಾರುಕಟ್ಟೆ) ಕ್ಷೇತ್ರದ ಪಿತಾಮಹ ಎಂದು ಕರೆಯಲ್ಪಡುವ ಮಾರ್ಕ್ ಮೋಬಿಯಸ್ (89) ಅವರು ಏಪ್ರಿಲ್ 15, ಬುಧವಾರದಂದು ಸಿಂಗಾಪುರದಲ್ಲಿ ನಿಧನರಾಗಿದ್ದಾರೆ. ಅವರ ನಿಧನವನ್ನು ಅವರ ಹೂಡಿಕೆ ಸಂಸ್ಥೆಯಾದ ‘ಮೋಬಿಯಸ್ ಇನ್ವೆಸ್ಟ್‌ಮೆಂಟ್ಸ್’ ಅಧಿಕೃತವಾಗಿ ದೃಢಪಡಿಸಿದೆ. ಭಾರತದ ಮಾರುಕಟ್ಟೆ ಮತ್ತು ಆರ್ಥಿಕತೆಯ ಸಾಮರ್ಥ್ಯದ ಬಗ್ಗೆ ಅತಿಹೆಚ್ಚು ನಂಬಿಕೆ ಇರಿಸಿದ ಕೆಲ ಜಾಗತಿಕ ಹೂಡಿಕೆದಾರರಲ್ಲಿ ಮೋಬಿಯಸ್ (Mark Mobius) ಕೂಡ ಒಬ್ಬರು.
ಸಾಮಾನ್ಯವಾಗಿ ಹೂಡಿಕೆದಾರರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹಣ ಹೂಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಮೋಬಿಯಸ್ ಅವರು ಸಾಹಸಿಯಂತೆ ಈ ದೇಶಗಳಿಗೆ ಭೇಟಿ ನೀಡುತ್ತಿದ್ದರು. ಹೆಚ್ಚಿನವರ ಕಣ್ಣಿಗೆ ಬೀಳದೇ ಇರುತ್ತಿದ್ದ ಮಾರುಕಟ್ಟೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದರು.
ಸಿನಿಮಾ ಪಾತ್ರ ‘ಇಂಡಿಯಾನಾ ಜೋನ್ಸ್’ನಂತೆ ಇವರು ಏಷ್ಯಾ, ಆಫ್ರಿಕಾ, ಪೂರ್ವ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ 100ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಮಾರುಕಟ್ಟೆಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದರು. ಇದರಿಂದಾಗಿ ಇವರನ್ನು ಉದಯೋನ್ಮುಖ ಮಾರುಕಟ್ಟೆಗಳ ಇಂಡಿಯಾನಾ ಜೋನ್ಸ್ ಎಂದು ಬಣ್ಣಿಸಲಾಗುತ್ತಿತ್ತು.
ಇದನ್ನೂ ಓದಿ: ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್ಲೈನ್ನಲ್ಲಿ ತಕರಾರು
1997ರ ಏಷ್ಯನ್ ಆರ್ಥಿಕ ಬಿಕ್ಕಟ್ಟು ಮತ್ತು 1998ರ ರಷ್ಯಾದ ಮಾರುಕಟ್ಟೆ ಕುಸಿತದ ಸಮಯದಲ್ಲಿ ಅವರು ತೋರಿದ ಧೈರ್ಯ ಮತ್ತು ಹೂಡಿಕೆಯ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದವು.
2009ರ ‘ಬುಲ್ ಮಾರ್ಕೆಟ್’ ಆರಂಭವನ್ನು ಅವರು ಮೊದಲೇ ನಿಖರವಾಗಿ ಅಂದಾಜಿಸಿದ್ದರು. ಅಲ್ಲದೆ, ಆಫ್ರಿಕಾ ಖಂಡದ ಆರ್ಥಿಕ ಸಾಮರ್ಥ್ಯವನ್ನು ಗುರುತಿಸಿದ ಆರಂಭಿಕ ಹೂಡಿಕೆದಾರರಲ್ಲಿ ಇವರು ಪ್ರಮುಖರು.
ಮಾರ್ಕ್ ಮೋಬಿಯಸ್ ಅವರು ಅಮೆರಿಕದ ಪ್ರತಿಷ್ಠಿತ MIT ಸಂಸ್ಥೆಯಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಸುಮಾರು ಮೂರು ದಶಕಗಳ ಕಾಲ ‘ಟೆಂಪಲ್ಟನ್ ಎಮರ್ಜಿಂಗ್ ಮಾರ್ಕೆಟ್ಸ್ ಗ್ರೂಪ್’ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೂಡಿಕೆಗೆ ಸಂಬಂಧಿಸಿದಂತೆ ‘ದ ಇನ್ವೆಸ್ಟರ್ಸ್ ಗೈಡ್ ಟು ಎಮರ್ಜಿಂಗ್ ಮಾರ್ಕೆಟ್ಸ್’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ
ಮಾರ್ಕ್ ಮೋಬಿಯಸ್ ಅವರು ಮದುವೆಯಾಗಿರಲಿಲ್ಲ. ತಮ್ಮನ್ನು ತಾವು “ಪೂರ್ಣಾವಧಿ ಅಲೆಮಾರಿ” (Full-time nomad) ಎಂದು ಕರೆದುಕೊಳ್ಳುತ್ತಿದ್ದ ಅವರು, ನಿರಂತರ ಪ್ರಯಾಣ ಮತ್ತು ಹೊಸ ಸವಾಲುಗಳನ್ನು ಎದುರಿಸುವುದರಲ್ಲೇ ನೆಮ್ಮದಿ ಕಂಡುಕೊಂಡಿದ್ದರು.
ಅವರ ನಿಧನದ ನಂತರ, ಜಾನ್ ನಿನಿಯಾ ಮತ್ತು ಎರಿಕ್ ಎನ್ಗುಯೆನ್ ಅವರು ಮೋಬಿಯಸ್ ಇನ್ವೆಸ್ಟ್‌ಮೆಂಟ್ಸ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಸಂಸ್ಥೆಯ ಹೂಡಿಕೆ ಕಾರ್ಯತಂತ್ರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ