ಜಪಾನ್​ನಲ್ಲಿ ಮಾರುತಿ ಕಾರುಗಳಿಗೆ ಹೆಚ್ಚಿದ ಬೇಡಿಕೆ; ಮೇಡ್ ಇನ್ ಇಂಡಿಯಾ ಜಿಮ್ನಿ, ಫ್ರಾಂಕ್ಸ್, ಇ-ವಿಟಾರಾ ಕಾರುಗಳ ರಫ್ತು 1 ಲಕ್ಷಕ್ಕಿಂತ ಹೆಚ್ಚು

ಭಾರತದಲ್ಲಿ ತಯಾರಾದ ಕಾರುಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದೆ., ಮಾರುತಿ ಸುಜುಕಿ ಕಂಪನಿಯ ಜಿಮ್ನಿ, ಫ್ರಾಂಕ್ಸ್ ಮತ್ತು ಇ-ವಿಟಾರಾ ಕಾರುಗಳು ಜಪಾನ್‌ಗೆ ರಫ್ತು ಆಗಿರುವ ಒಟ್ಟು ಸಂಖ್ಯೆ 1 ಲಕ್ಷ ಮೈಲಿಗಲ್ಲು ದಾಟಿದೆ. ಅಸ್ಪರ್ಧಾತ್ಮಕ ಜಪಾನ್ ವಾಹನ ಮಾರುಕಟ್ಟೆಯಲ್ಲಿ ಭಾರತದಲ್ಲಿ ತಯಾರಾದ ಕಾರುಗಳು ಯಶಸ್ಸು ಕಂಡಿರುವುದು ಗಮನಾರ್ಹ ಸಂಗತಿ ಎನಿಸಿದೆ.

ಜಪಾನ್​ನಲ್ಲಿ ಮಾರುತಿ ಕಾರುಗಳಿಗೆ ಹೆಚ್ಚಿದ ಬೇಡಿಕೆ; ಮೇಡ್ ಇನ್ ಇಂಡಿಯಾ ಜಿಮ್ನಿ, ಫ್ರಾಂಕ್ಸ್, ಇ-ವಿಟಾರಾ ಕಾರುಗಳ ರಫ್ತು 1 ಲಕ್ಷಕ್ಕಿಂತ ಹೆಚ್ಚು
ಮಾರುತಿ ಸುಜುಕಿ ಇ-ವಿಟಾರಾ
Image Credit source: PTI

Updated on: Sep 14, 2026 | 12:41 PM

ನವದೆಹಲಿ, ಸೆಪ್ಟೆಂಬರ್ 14: ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿಯ (Maruti Suzuki) ಮೇಡ್ ಇನ್ ಇಂಡಿಯಾ ಕಾರುಗಳು ಜಪಾನ್ ದೇಶಕ್ಕೆ ಭರ್ಜರಿಯಾಗಿ ರಫ್ತಾಗುತ್ತಿವೆ. ಭಾರತದಲ್ಲೇ ಸಿದ್ಧಪಡಿಸಿದ ತನ್ನ ಮೂರು ಪ್ರಮುಖ ಮಾಡೆಲ್‌ಗಳಾದ ‘ಜಿಮ್ನಿ’ (Jimny 5-door), ‘ಫ್ರಾಂಕ್ಸ್’ ಮತ್ತು ಕಂಪನಿಯ ಚೊಚ್ಚಲ ಎಲೆಕ್ಟ್ರಿಕ್ ವಾಹನ ‘ಇ-ವಿಟಾರಾ’ ಕಾರುಗಳು ಜಪಾನ್‌ಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ರಫ್ತಾಗಿವೆ.

ಮಾರುತಿ ಸುಜುಕಿಗೆ ಭಾರತದ ನಂತರ ಅತಿದೊಡ್ಡ ಮಾರುಕಟ್ಟೆ ಜಪಾನ್ ಆಗಿದೆ. ಮಾರುತಿ ಸುಜುಕಿಯ ಮಾತೃ ಸಂಸ್ಥೆಯಾದ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಜಪಾನ್ ಮೂಲದ್ದಾಗಿದೆ. ಹೀಗಾಗಿ, ಜಪಾನ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳು ನುಗ್ಗಲು ಸಾಧ್ಯವಾಗಿದೆ.

ಮಾರುತಿ ಸುಜುಕಿ 2024 ರ ಆಗಸ್ಟ್‌ನಲ್ಲಿ ಫ್ರಾಂಕ್ಸ್ ಕಾರನ್ನು (Maruti Suzuki Fronx) ಮತ್ತು 2024 ರ ಡಿಸೆಂಬರ್‌ನಲ್ಲಿ ಜಿಮ್ನಿ 5-ಡೋರ್ ಕಾರನ್ನು ಜಪಾನ್‌ಗೆ ರಫ್ತು ಮಾಡಲು ಪ್ರಾರಂಭಿಸಿತು. ಬಳಿಕ 2025 ರ ಸೆಪ್ಟೆಂಬರ್‌ನಲ್ಲಿ ತನ್ನ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನವಾದ (BEV) ‘ಇ-ವಿಟಾರಾ’ (Suzuki eVitara) ಅನ್ನು ರಫ್ತು ಪಟ್ಟಿಗೆ ಸೇರ್ಪಡೆಗೊಳಿಸಿತು.

ಇದನ್ನೂ ಓದಿ: ಉಕ್ಕಿನ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಾಣ: ಜಿಂದಾಲ್ ಸ್ಟೀಲ್ ಹೊಸ ಗಿನ್ನೆಸ್ ದಾಖಲೆ

ಭಾರತದಲ್ಲೇ ಪ್ರತ್ಯೇಕ ತಯಾರಿಕೆ: ಜಿಮ್ನಿ 5-ಡೋರ್ ಮತ್ತು ಇ-ವಿಟಾರಾ ಕಾರುಗಳನ್ನು ಜಾಗತಿಕ ಮಾರುಕಟ್ಟೆಗಾಗಿ ಪ್ರತ್ಯೇಕವಾಗಿ ಭಾರತದಲ್ಲೇ ತಯಾರಿಸಲಾಗುತ್ತಿದ್ದು, ಇದು ಸುಜುಕಿಯ ಜಾಗತಿಕ ತಯಾರಿಕಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ.

ಜಪಾನ್‌ಗೆ ಹೆಚ್ಚಿದ ಭಾರತೀಯ ಕಾರುಗಳ ಪಾಲು: ಜಪಾನ್‌ನ ಕಾರು ಆಮದಿನಲ್ಲಿ ಸುಜುಕಿ ಸಂಸ್ಥೆಯು ಮುಂಚೂಣಿಯಲ್ಲಿದ್ದು, ಕಳೆದ ಹಣಕಾಸು ವರ್ಷದಲ್ಲಿ ಸುಜುಕಿ ಜಪಾನ್‌ಗೆ ಆಮದು ಮಾಡಿಕೊಂಡ ಬಹುತೇಕ (ಶೇಕಡಾ 100 ರಷ್ಟು) ವಾಹನಗಳು ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯಿಂದ ತಯಾರಿಸಲ್ಪಟ್ಟಿದ್ದಾಗಿವೆ.

ತಯಾರಿಕಾ ಶ್ರೇಷ್ಠತೆಗೆ ಸಾಕ್ಷಿ: ಈ ಕುರಿತು ಮಾತನಾಡಿದ ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಾಕೆಉಚಿ (Hisashi Takeuchi), “ತಂತ್ರಜ್ಞಾನ ಮತ್ತು ಗುಣಮಟ್ಟದಲ್ಲಿ ವಿಶ್ವದ ಅತ್ಯಂತ ಕಠಿಣ ಹಾಗೂ ಮುಂದುವರಿದ ಜಪಾನ್ ಮಾರುಕಟ್ಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಭಾರತ ನಿರ್ಮಿತ ಕಾರುಗಳು ಮಾರಾಟವಾಗಿರುವುದು ಭಾರತದ ತಯಾರಿಕಾ ಶ್ರೇಷ್ಠತೆಗೆ ಸಿಕ್ಕ ದೊಡ್ಡ ಪ್ರಮಾಣಪತ್ರವಾಗಿದೆ” ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಎಐ ಕೈಮೀರುವ ಮುನ್ನ ವೇಗಕ್ಕೆ ಬ್ರೇಕ್ ಹಾಕಬೇಕು ಎಂದ ಆಂಥ್ರೋಪಿಕ್ ಸಿಇಒ; ಹೌದೆಂದ ಸ್ಯಾಮ್ ಆಲ್ಟ್​ಮನ್, ಇಲಾನ್ ಮಸ್ಕ್

ಜಪಾನಿಗರನ್ನು ಸೆಳೆದಿರುವುದು ಸಣ್ಣ ಸಂಗತಿಯಲ್ಲ

ಜಪಾನ್ ಮಾರುಕಟ್ಟೆಯಲ್ಲಿ ಅತಿದೊಡ್ಡ ಪಾಲು ಟೊಯೋಟಾದ್ದು. ನಂತರ ಸುಜುಕಿ, ಹೊಂಡಾ, ನಿಸ್ಸಾನ್ ಮತ್ತಿತರ ಕಂಪನಿಗಳು ಬರುತ್ತವೆ. ಸುಜುಕಿಯ ಮಿನಿಕಾರುಗಳು (Kei cars) ಜಪಾನ್​ನಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಮಧ್ಯಮ ಮಟ್ಟದ ಫ್ರಾಂಕ್ಸ್, ಜಿಮ್ನಿ, ವಿಟಾರಾ ಕಾರುಗಳನ್ನು ಭಾರತದಿಂದ ಆಮದು ಮಾಡಿಕೊಂಡು ಜಪಾನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಸ್ಥಳೀಯ ನಿರ್ಮಿತ ಕಾರುಗಳಿಗೆ ಪ್ರಾಶಸ್ತ್ಯ ಕೊಡುವ ಜಪಾನಿಗರು ಆಮದಿತ ಕಾರುಗಳನ್ನು ಖರೀದಿಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ.

ಭಾರತದಲ್ಲಿ ಕಾರುಗಳನ್ನು ತಯಾರಿಸುವ ಉದ್ದೇಶದಿಂದ ಆರಂಭವಾದ ಸುಜುಕಿ ಸಂಸ್ಥೆಯ ಪಯಣವು, ಇಂದು ಭಾರತದಲ್ಲಿ ತಯಾರಾದ ಕಾರುಗಳು ಜಪಾನ್ ಗ್ರಾಹಕರನ್ನೇ ಆಕರ್ಷಿಸುವ ಹಂತಕ್ಕೆ ತಲುಪುವ ಮೂಲಕ ಭಾರತ-ಜಪಾನ್ ನಡುವಿನ ಕೈಗಾರಿಕಾ ಸಹಭಾಗಿತ್ವಕ್ಕೆ ಹೊಸ ಎತ್ತರವನ್ನು ತಂದುಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us