ಯುಪಿಐ ಪಾವತಿಗಳಿಗೆ ಎಂಡಿಆರ್; ಶೇಕಡವಾರು ಶುಲ್ಕ, ಫ್ಲ್ಯಾಟ್ ಶುಲ್ಕ; ಸಣ್ಣ ವರ್ತಕರೆಂದರೆ ಯಾರು? ಹಲವು ಅನುಮಾನಗಳಿಗೆ ಉತ್ತರ

ಯುಪಿಐ (UPI) ಪಾವತಿಗಳಲ್ಲಿ ದೊಡ್ಡ ಮೊತ್ತದ ವಹಿವಾಟುಗಳಿಗೆ ನೂತನ ಶುಲ್ಕ ನಿಯಮ 2026ರ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ರೈಲ್ವೆ, ಟೆಲಿಕಾಂ ಸೇರಿದಂತೆ ಕೆಲವು ನಿರ್ದಿಷ್ಟ ವಲಯಗಳಲ್ಲಿ ₹2,000 ಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇ. 0.4 ರ ಎಂಡಿಆರ್ (MDR) ಬದಲಿಗೆ ಫ್ಲ್ಯಾಟ್ ₹5 ಶುಲ್ಕ ವಿಧಿಸಲಾಗುತ್ತದೆ. ಈ ಯಾವುದೇ ಪೇಮೆಂಟ್​ನಲ್ಲಿ ಗ್ರಾಹಕರಿಗೆ ಎಂಡಿಆರ್ ಶುಲ್ಕ ಇರುವುದಿಲ್ಲ. ಇದರ ಹೊರೆ ಏನಿದ್ದರೂ ವ್ಯಾಪಾರಿಗಳಿಗೆ ಮಾತ್ರ.

ಯುಪಿಐ ಪಾವತಿಗಳಿಗೆ ಎಂಡಿಆರ್; ಶೇಕಡವಾರು ಶುಲ್ಕ, ಫ್ಲ್ಯಾಟ್ ಶುಲ್ಕ; ಸಣ್ಣ ವರ್ತಕರೆಂದರೆ ಯಾರು? ಹಲವು ಅನುಮಾನಗಳಿಗೆ ಉತ್ತರ
ಯುಪಿಐ
Image Credit source: Getty Images

Updated on: Oct 06, 2026 | 11:27 AM

ಬೆಂಗಳೂರು, ಅಕ್ಟೋಬರ್ 6: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತನ್ನ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಅಕ್ಟೋಬರ್ 15ರಿಂದ ಪ್ರಮುಖ ಬದಲಾವಣೆ ತರುತ್ತಿದೆ. ಕೆಲ ನಿರ್ದಿಷ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುತ್ತಿದೆ. ಸಣ್ಣ ವ್ಯಾಪಾರಿಗಳಿಗೆ ಎಂಡಿಆರ್ ಇರುವುದಿಲ್ಲ, ಅಗತ್ಯ ಸೇವೆಗಳಿಗೆ ಪಡೆಯುವ ಪಾವತಿಗಳಿಗೆ ಕಡಿಮೆ ಎಂಡಿಆರ್ ಶುಲ್ಕ (Flat Fee), ಸೆಕ್ಯೂರಿಟೀಸ್ ಮಾರುಕಟ್ಟೆಯಲ್ಲಿ ಆಗುವ ಪೇಮೆಂಟ್​ಗೆ ಕಡಿಮೆ ಶುಲ್ಕ ಹೀಗೆ ವಿವಿಧ ಶುಲ್ಕ ನಿಯಮಗಳು ಜಾರಿಯಲ್ಲಿರುತ್ತವೆ. ಈ ನಿಟ್ಟಿನಲ್ಲಿ ಕೆಲ ಗೊಂದಲಗಳಿಗೆ ಉತ್ತರ ಇಲ್ಲಿದೆ.

ವ್ಯಕ್ತಿಗತ ಪೇಮೆಂಟ್​ಗೆ ಎಂಡಿಆರ್ ಇರುವುದಿಲ್ಲ…

ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಯುಪಿಐ ಪೇಮೆಂಟ್​ಗಳಿಗೆ ಎಂಡಿಆರ್ ಶುಲ್ಕ ಇರುವುದಿಲ್ಲ. ಯಾವುದೇ ವ್ಯಾಪಾರಿಗೆ ಪೇಮೆಂಟ್ ಮಾಡುವ ಯಾವುದೇ ವ್ಯಕ್ತಿಗೂ ಎಂಡಿಆರ್ ಶುಲ್ಕ ಇರುವುದಿಲ್ಲ. ಆದರೆ, ದೊಡ್ಡ ವರ್ತಕರು ಮಾತ್ರ ತಾವು ಸ್ವೀಕರಿಸುವ ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಭರಿಸಬೇಕಾಗುತ್ತದೆ.

ಶೇ. 0.4 ಮತ್ತು 300 ರೂ ಎಂಡಿಆರ್ ಶುಲ್ಕ

ಎರಡು ಸಾವಿರ ರೂಗಿಂತ ಹೆಚ್ಚಿನ ಮೊತ್ತದ ಯುಪಿಐ ಪೇಮೆಂಟ್​​ಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಪೇಮೆಂಟ್ 75,000 ರೂಗಿಂತ ಹೆಚ್ಚಿದ್ದರೆ ಶೇ 0.4 ಬದಲು 300 ರೂ ಫ್ಲ್ಯಾಟ್ ಫೀ ಜಾರಿಗೆ ಬರುತ್ತದೆ. 1,00,000 ರೂ ಪೇಮೆಂಟ್​ಗೂ 300 ರೂ ಮಾತ್ರವೇ ಫೀ ಇರುತ್ತದೆ. ಇನ್ನೂ ಹೆಚ್ಚಿನ ಪೇಮೆಂಟ್​ಗೂ 300 ರೂ ಮಾತ್ರವೇ ಶುಲ್ಕ ಇರುತ್ತದೆ. ಎಂಡಿಆರ್ ಶುಲ್ಕ ನಿಯಮದಲ್ಲೂ ಕೆಲ ವಿನಾಯಿತಿಗಳಿವೆ. ಸಣ್ಣ ವರ್ತಕರಿಗೆ ಎಂಡಿಆರ್ ಶುಲ್ಕ ಇರುವುದಿಲ್ಲ. ದೊಡ್ಡ ವರ್ತಕರಿಗೆ ಮಾತ್ರವೇ ಈ ಶುಲ್ಕ ಹಾಕಲಾಗುತ್ತದೆ.

ಇದನ್ನೂ ಓದಿ: ಆಧಾರ್​ನಲ್ಲಿ ಹೆಸರು ತಿದ್ದುಪಡಿಗೆ ಹೊಸ ನಿಯಮಗಳು; ಯಾವ್ಯಾವ ಬದಲಾವಣೆಗೆ ಯಾವ ದಾಖಲೆಗಳು ಬೇಕು, ವಿವರ ಇಲ್ಲಿದೆ…

ಸಣ್ಣ ವರ್ತಕರು, ದೊಡ್ಡ ವರ್ತಕರು ಯಾರು?

ಒಂದು ತಿಂಗಳಲ್ಲಿ ಒಂದು ಲಕ್ಷ ರೂವರೆಗೆ ಯುಪಿಐ ಪೇಮೆಂಟ್ ಸ್ವೀಕರಿಸುವ ವ್ಯಾಪಾರಿಗಳು ಸಣ್ಣ ವರ್ತಕರೆನಿಸುತ್ತಾರೆ. ಅದಕ್ಕೂ ಮೇಲ್ಪಟ್ಟ ಪೇಮೆಂಟ್ ಪಡೆಯುವವರು ದೊಡ್ಡ ವರ್ತಕರಾಗುತ್ತಾರೆ. ಬ್ಯಾಂಕುಗಳು ಈ ವರ್ಗೀಕರಣ ಮಾಡುತ್ತವೆ. ದೊಡ್ಡ ವರ್ತಕರು 2,000 ರೂಗಿಂತ ಹೆಚ್ಚಿನ ಯುಪಿಐ ಪೇಮೆಂಟ್ ಸ್ವೀಕರಿಸಿದರೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ತೆರಬೇಕಾಗುತ್ತದೆ. 10,000 ರೂ ಪೇಮೆಂಟ್​ಗೆ ಶೇ. 0.4 ಎಂದರೆ 40 ರೂ ಎಂಡಿಆರ್ ಶುಲ್ಕ ಅನ್ವಯ ಆಗುತ್ತದೆ.

ಯುಟಿಲಿಟಿ ಪೇಮೆಂಟ್​ಗಳಿಗೆ 5 ರೂ ಫ್ಲ್ಯಾಟ್ ಶುಲ್ಕ

ರೈಲ್ವೆ ಟಿಕೆಟ್, ಶಿಕ್ಷಣ ಇನ್ಷೂರೆನ್ಸ್, ಪೆಟ್ರೋಲ್, ಗ್ಯಾಸ್, ನೀರಿನ ಬಿಲ್, ವಿದ್ಯುತ್ ಬಿಲ್ ಇತ್ಯಾದಿ ಪೇಮೆಂಟ್ ಸ್ವೀಕರಿಸುವ ಕಾರ್ಪೊರೇಶನ್ ಸಂಸ್ಥೆಗಳಿಗೆ 2,000 ರೂ ಪೇಮೆಂಟ್​ಗೆ ಶೇ. 0.4 ಎಂಡಿಆರ್ ಬದಲು 5 ರೂ ಫ್ಲ್ಯಾಟ್ ಫೀ ವಿಧಿಸಲಾಗುತ್ತದೆ. 25,000 ರೂ ಯುಟಿಲಿಟಿ ಪೇಮೆಂಟ್​ಗೂ 5 ರೂ ಮಾತ್ರವೇ ಎಂಡಿಆರ್ ಇರುತ್ತದೆ.

ಮ್ಯೂಚುವಲ್ ಫಂಡ್ ಇತ್ಯಾದಿ ಕ್ಯಾಪಿಟಲ್ ಮಾರ್ಕೆಟ್​ಗೆ ಶೇ. 0.02 ಎಂಡಿಆರ್

ಮ್ಯೂಚುವಲ್ ಫಂಡ್ ಹಾಗೂ ಇತರೆ ಸೆಕ್ಯೂರಿಟೀಸ್​ಗಳಿಗೆ ಸಿಗುವ 2,000 ರೂ ಮೇಲ್ಪಟ್ಟ ಯುಪಿಐ ಪೇಮೆಂಟ್​ಗೆ ಶೇ 0.02 ಎಂಡಿಆರ್ ನಿಗದಿ ಮಾಡಲಾಗಿದೆ. ಇಲ್ಲಿಯೂ ಗರಿಷ್ಠ 300 ರೂ ಎಂದು ಮಿತಿಗೊಳಿಸಲಾಗಿದೆ. 10,000 ರೂ ಪೇಮೆಂಟ್​ಗೆ ಶೇ. 0.02 ಎಂದರೆ, 2 ರೂ ಎಂಡಿಆರ್ ಶುಲ್ಕ ಬೀಳುತ್ತದೆ.

ಇದನ್ನೂ ಓದಿ: ಫಾಸ್ಟ್‌ಟ್ಯಾಗ್ ಯುಗ ಹೋಯ್ತು; MLFF ವ್ಯವಸ್ಥೆ ಬರುತ್ತಿದೆ; ಹೆದ್ದಾರಿ ಟೋಲ್ ಕಲೆಕ್ಷನ್ ಸಿಸ್ಟಂನಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಿ

ಮೇಲೆ ತಿಳಿಸಿದ ಯಾವುದೇ ಪ್ರಸಂಗಗಳಲ್ಲೂ ಗ್ರಾಹಕರಿಗೆ ಎಂಡಿಆರ್ ಶುಲ್ಕ ಹಾಕಬಾರದು ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಇವೆಲ್ಲವೂ ವ್ಯಾಪಾರಿಗಳಿಗೆ ವಿಧಿಸುವ ಶುಲ್ಕ. ಕ್ರೆಡಿಟ್ ಕಾರ್ಡ್ ಪೇಮೆಂಟ್​ಗಳಲ್ಲಿ ಈ ಮೊದಲಿಂದಲೂ ಈ ಎಂಡಿಆರ್ ಶುಲ್ಕ ವ್ಯವಸ್ಥೆ ಇದೆ. ಈಗ ಯುಪಿಐಗೂ ತರಲಾಗಿದೆ. ಅದೂ ಸೀಮಿತ ಮಟ್ಟದಲ್ಲಿ ಮಾತ್ರ. ಕೆಲ ವರ್ತಕರು ಈ ಎಂಡಿಆರ್ ಶುಲ್ಕವನ್ನು ಗ್ರಾಹಕರ ಮೇಲೆ ನೇರವಾಗಿಯೋ, ಪರೋಕ್ಷವಾಗಿಯೋ ವರ್ಗಾಯಿಸುವ ಉದಾಹರಣೆ ಬಹಳಷ್ಟು ಕಂಡು ಬರುತ್ತವೆ. ಇಂಥ ಪ್ರಕರಣಗಳ ಬಗ್ಗೆ ನಿಗಾ ಇರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us