ಹೊಸ ಹಣಕಾಸು ವರ್ಷ (Financial Year) ಇಂದಿನಿಂದ (2023 ಏಪ್ರಿಲ್ 1) ಅಸ್ತಿತ್ವಕ್ಕೆ ಬಂದಿದ್ದು ಆದಾಯ ತೆರಿಗೆಗೆ (Income Tax) ಸಂಬಂಧಿಸಿ ಹೊಸ ನಿಯಮಗಳೂ ಅಸ್ತಿತ್ವಕ್ಕೆ ಬಂದಿವೆ. ಫೆಬ್ರುವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್ನಲ್ಲಿ ಉಲ್ಲೇಖಿಸಿದ್ದ ಆದಾಯ ತೆರಿಗೆ ಸಂಬಂಧಿತ ನೂತನ ನಿಯಮಗಳು ಇಂದಿನಿಂದ ಅನ್ವಯವಾಗಲಿದೆ. ಆದಾಯ ತೆರಿಗೆ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಕೇಂದ್ರ ಸರ್ಕಾರ ಮಾಡಿದ್ದು, ಅದನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ, ಹಳೆಯ ತೆರಿಗೆ ವ್ಯವಸ್ಥೆಯಲ್ಲಿನ ಸ್ಲ್ಯಾಬ್ಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಹೊಸ ತೆರಿಗೆ ವ್ಯವಸ್ಥೆಯಡಿ ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಆದಾಯ ತೆರಿಗೆಯ ಇಂದಿನಿಂದ ಅಸ್ತಿತ್ವಕ್ಕೆ ಬಂದ ಪರಿಷ್ಕೃತ ನಿಯಮಗಳು ಯಾವುವೆಲ್ಲ ಎಂಬ ವಿವರ ಇಲ್ಲಿದೆ.
ಹೊಸ ಆದಾಯ ತೆರಿಗೆ ವ್ಯವಸ್ಥೆಯೇ ಡಿಫಾಲ್ಟ್ ಆದಾಯ ತೆರಿಗೆ ಪದ್ಧತಿಯಾಗಿ ಆಯ್ಕೆಯಾಗಲಿದೆ. ಹಿಂದಿನ ಆದಾಯ ತೆರಿಗೆ ವ್ಯವಸ್ಥೆಯನ್ನು ಆಯ್ದುಕೊಳ್ಳುವ ಅವಕಾಶವೂ ತೆರಿಗೆದಾರರಿಗೆ ಇದೆ. ಹೊಸ ವ್ಯವಸ್ಥೆಯಡಿ ಸುಮಾರು 15.5 ಲಕ್ಷ ರೂ. ವಾರ್ಷಿಕ ಆದಾಯಕ್ಕೆ ಸ್ಟಾಂಡರ್ಡ್ ಡಿಡಕ್ಷನ್ 52,500 ಆಗಿರಲಿದೆ.
ಹಿಂದಿನ ತೆರಿಗೆ ಪದ್ಧತಿಯಲ್ಲಿ ನೀಡಲಾಗುತ್ತಿದ್ದ 50,000 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್ನಲ್ಲಿ ಬದಲಾವಣೆ ಮಾಡಲಾಗಿಲ್ಲ. ಪಿಂಚಣಿದಾರರಿಗೆ ಹೊಸ ತೆರಿಗೆ ಪದ್ಧತಿಗೆ ಸ್ಟಾಂಡರ್ಡ್ ಡಿಡಕ್ಷನ್ ಅನ್ನು ವಿಸ್ತರಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಬದಲಾಗಿ ಇಂದಿನಿಂದ 7 ಲಕ್ಷ ರೂ. ಆಗಿರಲಿದೆ. 7 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ತೆರಿಗೆ ಉಳಿತಾಯಕ್ಕಾಗಿ ಯಾವುದೇ ಹೂಡಿಕೆ ಮಾಡುವ ಅಗತ್ಯ ಇರುವುದಿಲ್ಲ. 7 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ದೊರೆಯಲಿದೆ.
ಸರ್ಕಾರೇತರ ಉದ್ಯೋಗಿಗಳಿಗೆ ನಿರ್ದಿಷ್ಟ ಮೊತ್ತದವರೆಗೆ ಲೀವ್ ಎನ್‌ಕ್ಯಾಶ್‌ಮೆಂಟ್ ವಿನಾಯಿತಿ ನೀಡಲಾಗುತ್ತದೆ. ಈ ಮಿತಿಯನ್ನು 25 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
ಡೆಬ್ಟ್ ಮ್ಯೂಚುವಲ್ ಫಂಡ್ಗಳಲ್ಲಿ ಮಾಡುವ ಹೂಡಿಕೆಗಳ ಮೂಲಕ ಗಳಿಸುವ ಅಲ್ಪಾವಧಿ ಬಂಡವಾಳಕ್ಕೆ ಸಿಗುತ್ತಿದ್ದ ತೆರಿಗೆ ವಿನಾಯಿತಿ (LTCG Tax Benefit) ಇನ್ನು ಸಿಗಲಾರದು.
ಇಂದಿನಿಂದ ಮಾರುಕಟ್ಟೆ ಸಂಬಂಧಿತ ಡಿಬೆಂಚರ್ಗಳನ್ನು (Market Linked Debentures) ಅಲ್ಪಾವಧಿ ಹಣಕಾಸು ಸ್ವತ್ತು ಎಂದು ಪರಿಗಣಿಸಲಾಗುತ್ತದೆ. ಇದು, ಮ್ಯೂಚುವಲ್ ಫಂಡ್ ಕ್ಷೇತ್ರದ ಮೇಲೆ ಸ್ವಲ್ಪ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾರ್ಷಿಕ 5 ಲಕ್ಷ ರೂ.ಗಿಂತ ಹೆಚ್ಚಿನ ಪ್ರೀಮಿಯಂ ಹೊಂದಿರುವ ಜೀವ ವಿಮಾ ಕಂತುಗಳಿಂದ ಬರುವ ಆದಾಯವು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯು 15 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗೆ ವಿಸ್ತರಣೆಯಾಗಿದೆ. ಮಾಸಿಕ ಆದಾಯ ಯೋಜನೆಯ ಅತ್ಯಧಿಕ ಠೇವಣಿ ಮಿತಿ ಏಕ ಖಾತೆಗಳಿಗೆ 4.5 ಲಕ್ಷ ರೂ.ಗಳಿಂದ 9 ಲಕ್ಷ ರೂ.ಗೆ ಮತ್ತು ಜಂಟಿ ಖಾತೆಗಳಿಗೆ 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗೆ ವಿಸ್ತರಣೆಯಾಗಿದೆ.
ಭೌತಿಕ ಚಿನ್ನವನ್ನು ಇ-ಚಿನ್ನವನ್ನಾಗಿ ಪರಿವರ್ತಿಸಿಕೊಂಡರೆ ಅದಕ್ಕೆ ಬಂಡವಾಳ ಗಳಿಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೊಷಿಸಿದ್ದರು. ಅದು ಇಂದಿನಿಂದ ಜಾರಿಗೆ ಬಂದಿದೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ