
ಮಾರುತಿ ಸುಜುಕಿಯ (Maruti Suzuki) ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ವ್ಯಾಗನ್‌ಆರ್ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಕಂಪನಿಯು ವ್ಯಾಗನ್‌ಆರ್‌ನ ನವೀಕರಿಸಿದ ಮಾದರಿಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದು, ಹೊಸ ಕಾರನ್ನು ಪರೀಕ್ಷೆ ನಡೆಸುತ್ತಿರುವುದು ಕಂಡುಬಂದಿದೆ. ಇದರಿಂದ ಹೊಸ ವ್ಯಾಗನ್‌ಆರ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆ ಮೂಡಿದೆ. ಈ ಕಾರಿನ ಎಂಜಿನ್ ಮತ್ತು ಮೈಲೇಜ್‌ನಲ್ಲಿ ಪ್ರಮುಖ ಬದಲಾವಣೆ ಕಂಡುಬರಲಿದೆ.
ಮಾರುತಿ ಸುಜುಕಿಯ ವ್ಯಾಗನ್‌ಆರ್ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ಟಾಲ್-ಬಾಯ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ. ಹೊಸ ಮಾದರಿಯ ಹೊರಾಂಗಣ ವಿನ್ಯಾಸದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಪ್ರಸ್ತುತ ಮಾದರಿಯಲ್ಲಿರುವ ಎತ್ತರದ ವಿನ್ಯಾಸ ಮತ್ತು ದೇಹದ ಆಕಾರವನ್ನು ಮುಂದುವರಿಸುವ ಸಾಧ್ಯತೆ ಇದೆ.
ಹೊಸ ವ್ಯಾಗನ್‌ಆರ್‌ನ ಮುಂಭಾಗ ಮತ್ತು ಹಿಂಭಾಗದ ವಿನ್ಯಾಸದಲ್ಲೂ ದೊಡ್ಡ ಬದಲಾವಣೆ ಕಾಣಿಸುವ ಸಾಧ್ಯತೆ ಕಡಿಮೆ. ಹೆಡ್‌ಲೈಟ್, ಗ್ರಿಲ್ ಹಾಗೂ ಹಿಂಭಾಗದಲ್ಲಿರುವ ಲಂಬ ವಿನ್ಯಾಸದ ಟೇಲ್‌ಲೈಟ್‌ಗಳ ವಿನ್ಯಾಸವು ಪ್ರಸ್ತುತ ಮಾದರಿಯನ್ನು ಹೋಲುವ ಸಾಧ್ಯತೆ ಇದೆ. ಆದರೆ ಕಾರಿನ ಒಳಭಾಗ ಮತ್ತು ತಾಂತ್ರಿಕ ವಿಭಾಗದಲ್ಲಿ ಕೆಲವು ಬದಲಾವಣೆಗಳು ಬರಬಹುದು ಎಂದು ವರದಿ ತಿಳಿಸಿದೆ.
ಹೊಸ ವ್ಯಾಗನ್‌ಆರ್‌ನಲ್ಲಿ ಪ್ರಮುಖ ಬದಲಾವಣೆ 1.2 ಲೀಟರ್ ಎಂಜಿನ್‌ನಲ್ಲಿ ಆಗುವ ಸಾಧ್ಯತೆ ಇದೆ. ಮಾರುತಿ ಸುಜುಕಿ ಈಗಿರುವ ನಾಲ್ಕು ಸಿಲಿಂಡರ್ 1.2 ಲೀಟರ್ ಎಂಜಿನ್ ಬದಲಿಗೆ ಹೊಸ ಝಡ್12ಇ ಮೂರು ಸಿಲಿಂಡರ್ ಎಂಜಿನ್ ನೀಡಬಹುದು ಎಂದು ವರದಿ ಹೇಳಿದೆ. ಇದೇ ರೀತಿಯ ಎಂಜಿನ್ ಅನ್ನು ಕಂಪನಿಯ ಹೊಸ ಸ್ವಿಫ್ಟ್, ಡಿಜೈರ್ ಮತ್ತು ಬಲೆನೊ ಮಾದರಿಗಳಲ್ಲೂ ಬಳಸಲಾಗಿದೆ.
ಹೊಸ ಝಡ್-ಸರಣಿಯ ಎಂಜಿನ್‌ನಲ್ಲಿ ಹಳೆಯ ಎಂಜಿನ್‌ಗೆ ಹೋಲಿಸಿದರೆ ಶಕ್ತಿಯಲ್ಲಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಇಂಧನ ದಕ್ಷತೆ ಮತ್ತು ಮೈಲೇಜ್ ಹೆಚ್ಚಾಗುವ ನಿರೀಕ್ಷೆ ಇದೆ. ಇದೇ ಎಂಜಿನ್ ವ್ಯಾಗನ್‌ಆರ್‌ನಲ್ಲಿ ಅಳವಡಿಸಿದರೆ ಕಾರಿನ ಮೈಲೇಜ್ ಮತ್ತಷ್ಟು ಸುಧಾರಿಸಬಹುದು. ಇಂಧನ ವೆಚ್ಚ ಕಡಿಮೆ ಮಾಡಿಕೊಳ್ಳಲು ಬಯಸುವ ಗ್ರಾಹಕರಿಗೆ ಇದು ಪ್ರಮುಖ ಆಕರ್ಷಣೆಯಾಗಬಹುದು.
ಪ್ರಸ್ತುತ ಮಾದರಿಯಂತೆ ಹೊಸ ವ್ಯಾಗನ್‌ಆರ್ ಕೂಡ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಗೇರ್‌ಬಾಕ್ಸ್ ವಿಚಾರದಲ್ಲೂ ಐದು ವೇಗದ ಮ್ಯಾನುಯಲ್ ಗೇರ್‌ಬಾಕ್ಸ್ ಮತ್ತು ಎಎಂಟಿ ಆಯ್ಕೆ ಮುಂದುವರಿಯಬಹುದು. ಅಂತೆಯೆ ಹೊಸ ಸಿಎನ್‌ಜಿ ವ್ಯಾಗನ್‌ಆರ್‌ನಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸದ್ಯದ ಕಾರುಗಳಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ಬೂಟ್ ಜಾಗದಲ್ಲಿ ಅಳವಡಿಸಲಾಗುತ್ತದೆ. ಆದರೆ ಹೊಸ ವ್ಯಾಗನ್‌ಆರ್‌ನಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ಕಾರಿನ ಕೆಳಭಾಗದಲ್ಲಿ ಅಳವಡಿಸುವ ಸಾಧ್ಯತೆ ಇದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವ್ಯಾಗನ್‌ಆರ್‌ನ ಆರಂಭಿಕ ಎಕ್ಸ್-ಶೋರೂಂ ಬೆಲೆ ₹4.99 ಲಕ್ಷದಿಂದ ಆರಂಭವಾಗಿ ₹7.24 ಲಕ್ಷದವರೆಗೆ ಇದೆ. ಹೊಸ ಮಾದರಿಯಲ್ಲಿ ಎಂಜಿನ್ ಮತ್ತು ಇತರ ವೈಶಿಷ್ಟ್ಯಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಬಹುದು. ಹೊಸ ವ್ಯಾಗನ್‌ಆರ್ ಅನ್ನು 2026ರ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ