
ಬೆಂಗಳೂರು, ಮೇ 08, 2026: ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಇಂಡಿಯಾ ಎಐ ಮಿಷನ್ (IndiaAI Mission) ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಜಂಟಿಯಾಗಿ ‘AB PM-JAY ಆಟೋ-ಅಡ್ಜುಡಿಕೇಶನ್ ಹ್ಯಾಕಥಾನ್ ಶೋಕೇಸ್ 2026’ ಅನ್ನು (Auto Adjudication Hackathon Showcase) ಆಯೋಜಿಸಿವೆ. ಬೆಂಗಳೂರಿನ ಐಐಎಸ್ಸಿ ಕ್ಯಾಂಪಸ್ನಲ್ಲಿರುವ ರಾಮ ರಾವ್ ಆಡಿಟೋರಿಯಂನಲ್ಲಿ ನಡೆಯುತ್ತಿರುವ ಈ ಎರಡು ದಿನದ ಕಾರ್ಯಕ್ರಮದ ಪ್ರಮುಖ ಉದ್ದೇಶ ಆರೋಗ್ಯ ವಿಮೆಯ ಕ್ಲೈಮ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸುವುದಾಗಿದೆ.
ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದ ಸಂಶೋಧಕರು ಮತ್ತು ನವೋದ್ಯಮಗಳು ವೈದ್ಯಕೀಯ ದಾಖಲೆಗಳ ವಿಶ್ಲೇಷಣೆ, ರೇಡಿಯಾಲಜಿ ಆಧಾರಿತ ಕಾಯಿಲೆ ಪತ್ತೆ ಮತ್ತು ಡೀಪ್ಫೇಕ್ಗಳನ್ನು (Deepfakes) ಗುರುತಿಸಲು AI ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರದರ್ಶಿಸಿದರು. ಈ ಮೂರು ಸಮಸ್ಯೆಗಳಿಗೆ ಎಐ ಪರಿಹಾರಗಳನ್ನು ಹುಡುಕಲು ನಡೆಸಲಾದ ಹ್ಯಾಕಥಾನ್‌ನಲ್ಲಿ ವಿಜೇತರಾದ ತಂಡಗಳು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದವು.
ಇದನ್ನೂ ಓದಿ: ಗೂಗಲ್ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ
ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿದಿನ ಸುಮಾರು 50,000 ಕ್ಲೈಮ್‌ಗಳು ಸಲ್ಲಿಕೆಯಾಗುತ್ತಿವೆ. ಇವುಗಳನ್ನು ಮನುಷ್ಯರೇ ಮ್ಯಾನುಯಲ್ ಆಗಿ ಪರಿಶೀಲಿಸುವುದಕ್ಕೆ ಹೆಚ್ಚಿನ ಸಮಯ ತಗುಲುತ್ತಿದೆ. AI ಬಳಕೆಯಿಂದ ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿ (Auto-Adjudication) ಮತ್ತು ಅತ್ಯಂತ ವೇಗವಾಗಿ ನಡೆಯಲಿದೆ.
AI ತಂತ್ರಜ್ಞಾನವು ಕ್ಲೈಮ್‌ಗಳಲ್ಲಿ ನಡೆಯಬಹುದಾದ ವಂಚನೆಗಳನ್ನು ಪತ್ತೆ ಹಚ್ಚಲು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸಹಾಯ ಮಾಡುತ್ತದೆ. ಇದರಿಂದ ರೋಗಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹಣ ಪಾವತಿಯಾಗುವ ಸಮಯ ಉಳಿತಾಯವಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಅಧಿಕಾರಿಗಳು, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆಯನ್ನು ನೀಡಲು ಭಾರತ ಬದ್ಧವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವು ಭಾರತದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವತ್ತ ಮಹತ್ವದ ಹೆಜ್ಜೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ