
ನವದೆಹಲಿ, ಏಪ್ರಿಲ್ 13: ಇಲ್ಲಿಗೆ ಸಮೀಪದ ನೋಯ್ಡಾದಲ್ಲಿ ಆರಂಭವಾದ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರ ಪ್ರತಿಭಟನೆಯು (garment workers protest) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಹಿಂಸಾರೂಪ ಪಡೆದಿದೆ. ನೋಯ್ಡಾದ ಸೆಕ್ಟರ್ 60 ಮತ್ತು ಫೇಸ್-2ನಲ್ಲಿ ಕಲ್ಲುತೂರಾಟ, ಗಲಾಟೆ ಇತ್ಯಾದಿ ಹಿಂಸಾಚಾರಗಳು ನಡೆದಿರುವುದು ವರದಿಯಾಗಿದೆ. ಸಾಕಷ್ಟು ಕಡೆ ಆಸ್ತಿಪಾಸ್ತಿ ಹಾನಿಯಾಗಿದೆ, ವಾಹನಗಳನ್ನು ಸುಟ್ಟಿರುವ ಘಟನೆಗಳೂ ಬೆಳಕಿಗ ಬಂದಿವೆ. ಕೈಗಾರಿಕಾ ಸ್ಥಳಗಳಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ, ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ.
ಗಾರ್ಮೆಂಟ್ಸ್ ಮತ್ತು ಫ್ಯಾಕ್ಟರಿ ಕಾರ್ಮಿಕರು ಪ್ರಮುಖವಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ವೇತನ ಕೇವಲ 11,000ದಿಂದ 13,000 ರೂ ಇದೆ. ಇದನ್ನು 18,000 – 20,000 ರೂಗೆ ಏರಿಸಬೇಕು ಎಂಬುದು ಇವರ ಪ್ರಮುಖ ಒತ್ತಾಯ.
ಇದನ್ನೂ ಓದಿ: ನವ ಭಾರತದ ನಾಯಕತ್ವ ಈಗ ಮಹಿಳೆಯರ ಕೈಗೆ: ಸರ್ವಪಕ್ಷಗಳ ಸಹಕಾರದೊಂದಿಗೆ ಇತಿಹಾಸ ಬರೆಯಲು ದೇಶ ಸಿದ್ಧ: ಪ್ರಧಾನಿ ಮೋದಿ ಜೈಕಾರ
ಪಕ್ಕದ ಹರ್ಯಾಣದಲ್ಲಿ ಅಲ್ಲಿಯ ಸರ್ಕಾರವು ಗಾರ್ಮೆಂಟ್ಸ್ ಉದ್ಯಮದಲ್ಲಿ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಿಸಿತ್ತು. ದಿನಗೂಲಿಯನ್ನು 580-750 ರೂಗೆ ಏರಿಸಿತ್ತು. ಆದರೆ, ನೋಯ್ಡಾದಲ್ಲಿ ದಿನಗೂಲಿ ಕೇವಲ 350-435 ರೂ ಇದೆ. ಹರ್ಯಾಣ ಸರ್ಕಾರ ತೆಗೆದುಕೊಂಡ ನಿರ್ಧಾರ ರೀತಿಯಲ್ಲೇ ತಮ್ಮ ವೇತನವನ್ನೂ ಏರಿಸಬೇಕೆಂದು ಗಾರ್ಮೆಂಟ್ಸ್ ವರ್ಕರ್ಸ್ ಪ್ರತಿಭಟನೆ ಶುರುವಿಟ್ಟಿದ್ದಾರೆ.
ಕೆಲಸದಲ್ಲಿ ದಿನಕ್ಕೆ 10-12 ಗಂಟೆಯ ಶಿಫ್ಟ್ನಲ್ಲಿ ಕೆಲಸ ಮಾಡುವಂತೆ ಕಡ್ಡಾಯಪಡಿಸಲಾಗುತ್ತಿದೆ ಎಂದು ಗಾರ್ಮೆಂಟ್ಸ್ ಕಾರ್ಮಿಕರು ಆರೋಪಿಸುತ್ತಿದ್ದಾರೆ. ದಿನಕ್ಕೆ ಎಂಟು ಗಂಟೆಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವುದಿದ್ದರೆ ಅದಕ್ಕೆ ಸೂಕ್ತ ಪರಿಹಾರ, ಭತ್ಯೆ ಕೊಡಬೇಕು, ಮತ್ತು ಕಾರ್ಮಿಕರ ಸಮ್ಮತಿ ಇರಬೇಕು ಎಂಬುದು ಇವರ ಬೇಡಿಕೆ.
ಇದನ್ನೂ ಓದಿ: ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ
ಗಾರ್ಮೆಂಟ್ಸ್ ಕಾರ್ಮಿಕರಿಗೆ ಬೋನಸ್, ವೀಕಾಫ್ ಇತ್ಯಾದಿ ಸೌಲಭ್ಯಗಳನ್ನು ಕೊಡಬೇಕು. ಸರಿಯಾದ ಸಮಯಕ್ಕೆ ಸಂಬಳ ನೀಡಬೇಕು. ಸ್ಯಾಲರಿ ಸ್ಲಿಪ್ಗಳನ್ನು ಕೊಡಬೇಕು. ದೂರು ಆಲಿಸುವ ವ್ಯವಸ್ಥೆ ಮಾಡಬೇಕು ಎಂಬುದು ಈ ಪ್ರತಿಭಟನಾಕಾರರ ಇತರ ಕೆಲ ಬೇಡಿಕೆಗಳಾಗಿವೆ.
ನೋಯ್ಡಾ ನಗರದಲ್ಲಿ ಸಾಕಷ್ಟು ಕೈಗಾರಿಕೆಗಳು, ಉದ್ಯಮಗಳು ನೆಲಸಿವೆ. ಇದು ಉತ್ತರಪ್ರದೇಶ ರಾಜ್ಯದ ವ್ಯಾಪ್ತಿಗೆ ಬರುವಂತಹ ಪ್ರದೇಶ. ಉತ್ತರಪ್ರದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುವ ಪ್ರದೇಶವೂ ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ