
ನವದೆಹಲಿ: ಚ್ಯಾಟ್ಜಿಪಿಟಿ ಎಂಬ ಕೃತಕಬುದ್ಧಿಮತ್ತೆ ಮಾಯಾಜಾಲದ ರೂವಾರಿ ಓಪನ್ಎಐ ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ (OpenAI CEO Sam Altman) ಮೊನ್ನೆ ಭಾರತ ಭೇಟಿ ಮಾಡಿದ್ದು ಹಲವರಿಗೆ ಗೊತ್ತಿರಬಹುದು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೂ ಅಲ್ಲದೇ ಭಾರತದ ವಿವಿಧ ಕಂಪನಿಗಳ ಸಿಇಒಗಳ ಜೊತೆಗೆ ಸಂವಾದದಲ್ಲೂ ಭಾಗಿಯಾಗಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಗೂಗಲ್ ಇತ್ಯಾದಿ ದಿಗ್ಗಜ ಸಂಸ್ಥೆಗಳನ್ನೂ ತಲೆಕೆಡಿಸಿಕೊಳ್ಳುವಂತೆ ಮಾಡಿರುವ ಓಪನ್ಎಐ ಬಹಳ ಆಳಕ್ಕೆ ಜಿಗಿದಿರುವಂತೆ ಭಾಸವಾಗುತ್ತಿದೆ. ಓಪನ್ಎಐ ಸಂಸ್ಥೆ ಮಾಡಿರುವ ಸಾಧನೆಯನ್ನು ಭಾರತದ ಕಂಪನಿಯೊಂದು ಮಾಡಲು ಸಾಧ್ಯವಾ ಎಂಬ ಪ್ರಶ್ನೆಯೊಂದಕ್ಕೆ ಸ್ಯಾಮ್ ಆಲ್ಟ್ಮ್ಯಾನ್ ‘ಹೋಪ್ಲೆಸ್’ ಎಂದು ಉತ್ತರಿಸಿದರೆಂದು ಮೊನ್ನೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸಂವಾದ ಹೇಗಿತ್ತು, ಭಾರತೀಯ ಸಿಇಒಗಳ ಪ್ರತಿಕ್ರಿಯೆ ಹೇಗಿತ್ತು, ಸ್ಯಾಮ್ ಅಂತಿಮವಾಗಿ ಕೊಟ್ಟ ಸ್ಪಷ್ಟನೆ, ಎಲ್ಲವೂ ಕುತೂಹಲ ಮೂಡಿಸುವಂತಿದೆ….
ದಿ ಎಕನಾಮಿಟ್ ಟೈಮ್ಸ್ ಪತ್ರಿಕೆ ಆಯೋಜಿಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ಸ್ಯಾಮ್ ಆಲ್ಟ್ಮ್ಯಾನ್ ಹಾಗೂ ವಿವಿಧ ಭಾರತೀಯ ಸಿಇಒಗಳು ಪಾಲ್ಗೊಂಡಿದ್ದರು. ಈ ವೇಳೆ ಗೂಗಲ್ ಇಂಡಿಯಾದ ಮಾಜಿ ಮುಖ್ಯಸ್ಥ ಹಾಗೂ ಹೂಡಿಕೆದಾರರೂ ಆದ ರಾಜನ್ ಆನಂದನ್ ಒಂದು ಪ್ರಶ್ನೆ ಹಾಕಿದರು:
‘ಓಪನ್ಎಐ ಅಭಿವೃದ್ಧಿಪಡಿಸಿದ ಎಐ ಮಾದರಿ ರೀತಿಯಲ್ಲಿ ಭಾರತದ ಸ್ಟಾರ್ಟಪ್ಗಳಿಂದ ಸಾಧ್ಯವಾಗಬಹುದಾ?’ ಎಂದು ಕೇಳಿದರು.
ಇದನ್ನೂ ಓದಿ: ಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5
ಇದಕ್ಕೆ ಸ್ಯಾಮ್ ಆಲ್ಟ್ಮ್ಯಾನ್ ಒಂದು ಪದದ ಉತ್ತರ ‘ಹೋಪ್ಲೆಸ್’ ಎಂದಾಗಿತ್ತು. ‘ಎಐ ಮಾದರಿಗಳ ತಯಾರಿಕೆಯಲ್ಲಿ ನಮ್ಮ ಜೊತೆ ಸ್ಪರ್ಧೆಗೆ ಇಳಿಯುವುದು ನಿಮ್ಮ ಪಾಲಿಗೆ ಹೋಪ್ಲೆಸ್ ಎಂದು ಹೇಳಬಯಸುತ್ತೇನೆ. ನೀವು ಈ ನಿಟ್ಟಿನಲ್ಲಿ ಪ್ರಯತ್ನಿಸಲೇಬಾರದು. ನೀವು ಪ್ರಯತ್ನಿಸಿದರೆ ಅದರ ಜವಾಬ್ದಾರಿ ನಿಮ್ಮದೇ… ಎರಡೂ ದೃಷ್ಟಿಕೋನವನ್ನು ನಾನು ಬೆಂಬಲಿಸುತ್ತೇನೆ. ಆದರೆ, ನಿಮಗೆ ಯಶಸ್ಸಿನ ಸಾಧ್ಯತೆ ಬಹಳ ಕಡಿಮೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ’ ಎಂದು ಓಪನ್ಎಐ ಸಿಇಒ ಅಭಿಪ್ರಾಯಪಟ್ಟರು.
ಟ್ವಿಟ್ಟರ್ನಲ್ಲಿ ಈ ವಿಚಾರ ಮುನ್ನೆಲೆಗೆ ತಂದ ರಾಜನ್ ಆನಂದನ್, ‘ಭಾರತದ ವ್ಯಾವಹಾರಿಯನ್ನು ಯಾವತ್ತೂ ಕಡಿಮೆ ಅಂದಾಜು ಮಾಡಬಾರದು ಎಂಬುದಕ್ಕೆ 5,000 ವರ್ಷಗಳ ಭಾರತೀಯ ಉದ್ಯಮ ನಮಗೆ ತೋರಿಸಿಕೊಟ್ಟಿದೆ. ನಾವು ಪ್ರಯತ್ನಿಸುವ ಉದ್ದೇಶದಲ್ಲಿದ್ದೇವೆ’ ಎಂದು ಸ್ಯಾಮ್ ಆಲ್ಟ್ಮ್ಯಾನ್ಗೆ ಸವಾಲು ಹಾಕಿದರು.
ಟೆಕ್ ಮಹೀಂದ್ರ ಕಂಪನಿಯ ಸಿಇಒ ಸಿ.ಪಿ. ಗುರ್ನಾನಿ ಕೂಡ ಟ್ವಿಟ್ಟರ್ ವೇದಿಕೆಯಲ್ಲಿ ಈ ಬಗ್ಗೆ ಸ್ಪಂದಿಸಿ, ಸ್ಯಾಮ್ ಆಲ್ಟ್ಮ್ಯಾನ್ಗೆ ಚಾಲೆಂಜ್ ಅಕ್ಸೆಪ್ಟೆಡ್ ಎಂದು ಸವಾಲು ಹಾಕಿದ್ದಾರೆ.
ಇದೇ ವೇಳೆ, ಟ್ವಿಟ್ಟರ್ನಲ್ಲಿ ಭಾರತೀಯ ಕಂಪನಿಗಳ ಸಿಇಒಗಳು ಭಾರತದಲ್ಲಿ ಸ್ವಂತವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಧನಗಳನ್ನು ರೂಪಿಸುವ ಬಗ್ಗೆ ಸವಾಲು ಹಾಕುತ್ತಿರುವಂತೆಯೇ ಸ್ಯಾಮ್ ಆಲ್ಟ್ಮ್ಯಾನ್ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ….
‘10 ಮಿಲಿಯನ್ ಡಾಲರ್ (ಸುಮಾರು 82 ಕೋಟಿ ರೂ) ಹಣದಲ್ಲಿ ನಮಗೆ ಸರಿಸಮಾನವಾಗಿ ಎಐ ಸಾಧನಗಳನ್ನು ತಯಾರಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಆದರೂ ತಾವು ಪ್ರಯತ್ನಿಸಿ ಎಂದು ನಾನು ಹೇಳಿದೆ. ನನ್ನ ಪ್ರಕಾರ ಅಗ ಕೇಳಿದ ಪ್ರಶ್ನೆಯೇ ತಪ್ಪಾಗಿತ್ತು…
‘ಈ ಹಿಂದೆ ಎಂದೂ ಮಾಡದ ಯಾವ ಕಾರ್ಯವನ್ನು ಒಂದು ಸ್ಟಾರ್ಟಪ್ ಮಾಡಿ ಈ ವಿಶ್ವಕ್ಕೆ ಹೊಸದೊಂದನ್ನು ಕೊಡಬಹುದು ಎಂಬುದು ಸರಿಯಾದ ಪ್ರಶ್ನೆ ಆಗಿರುತ್ತಿತ್ತು. ಭಾರತೀಯ ಸ್ಟಾರ್ಟಪ್ಗಳು ಈ ಕೆಲಸವನ್ನು ಮಾಡುವಷ್ಟು ಸಾಮರ್ಥ್ಯ ಹೊಂದಿರುವುದರಲ್ಲಿ ನನಗೆ ಅನುಮಾನ ಇಲ್ಲ….’ ಎಂದು ಸ್ಯಾಮ್ ಆಲ್ಟ್ಮ್ಯಾನ್ ಟ್ವೀಟ್ಗಳ ಮೂಲಕ ಉತ್ತರಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಟೆಕ್ ಮಹೀಂದ್ರ ಸಿಇಒ ಸಿ.ಪಿ. ಗುರ್ನಾನಿ, ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಕ್ಕೆ ಸ್ಯಾಮ್ಗೆ ಧನ್ಯವಾದ ಹೇಳಿ, ಎಐ ವಾರ್ ಅಂತ್ಯಗೊಳಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ