RRR vs RC: ರಘುರಾಮ್ ರಾಜನ್ ಆರ್ಬಿಐ ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗಂಭೀರ ಆರೋಪ
Rajeev Chandrashekhar Criticizes Raghuram Rajan: ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು ಎಂದು ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದಾರೆ.
ಬೆಂಗಳೂರು: ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ (RBI Governor) ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು ಎಂದು ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrashekhar) ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಸಾಕಷ್ಟು ಟೀಕಾ ಪ್ರಹಾರ ನಡೆಸುವ ರಘುರಾಮ್ ರಾಜನ್ ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿವಾದಕ್ಕೆ ಒಳಗಾಗಿದ್ದರು. ಕಾಂಗ್ರೆಸ್ ಪಕ್ಷದ ಆರ್ಥಿಕ ನೀತಿ ಧೋರಣೆಗಳನ್ನು ರೂಪಿಸುವವರಲ್ಲಿ ರಘುರಾಮ್ ರಾಜನ್ ಕೂಡ ಒಬ್ಬರೆನ್ನಲಾಗಿದೆ. ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಯೂ ಇದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರ ಜೂನ್ 9ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಘುರಾಮ್ ರಾಜನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಅವರು ತಾನು ರಾಜಕಾರಣಿಯಾ ಅಲ್ಲವಾ ಎಂಬುದನ್ನು ನಿರ್ಧರಿಸಬೇಕು. ತಾನು ವಿಫಲ ರಾಜಕಾರಣಿಯೋ, ಅಥವಾ ವಿಫಲ ಆರ್ಥಿಕ ತಜ್ಞರೋ ನಿರ್ಧರಿಸಬೇಕು. ಅವರು ಆರ್ಬಿಐ ಗವರ್ನರ್ ಆಗಿದ್ದಾಗ ದೇಶದ ಇಡೀ ಬ್ಯಾಂಕಿಂಗ್ ಸಿಸ್ಟಂ ಮತ್ತು ಹಣಕಾಸು ವಲಯವನ್ನು ಹಾಳುಗೆಡವಿದ್ದರು’ ಎಂದು ಬೆಂಗಳೂರಿನಿಂದ ರಾಜ್ಯಸಭಾ ಸಂಸದರೂ ಆಗಿರುವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೂ ರಘುರಾಮ್ ರಾಜನ್ ಅಭಿಪ್ರಾಯಗಳಿಗೆ ಕಟುವಿರೋಧ ವ್ಯಕ್ತಪಡಿಸಿದುಂಟು. ರಘುರಾಮ್ ರಾಜನ್ ರಾಜಕಾರಣಿ ಆದ ಬಳಿಕ ಬಣ್ಣ ಬದಲಾಯಿಸಿಕೊಂಡಿದ್ದಾರೆ ಎಂದು ರೈಲ್ವೆ ಸಚಿವರು ಟೀಕಿಸಿದ್ದುಂಟು. ರಘುರಾಮ್ ರಾಜನ್ 2013ರಿಂದ 2016ರವರೆಗೂ ಆರ್ಬಿಐ ಗವರ್ನರ್ ಅಗಿದ್ದರು. ಅವರ ಅವಧಿಯ ಕೊನೆಯ ದಿನಗಳಲ್ಲಿ ನೋಟ್ ಬ್ಯಾನ್ ಮಾಡಲಾಗಿತ್ತು. ಗವರ್ನರ್ ಸ್ಥಾನದಿಂದ ಹೊರಹೋದ ಬಳಿಕ ಅವರು ನೋಟ್ ಬ್ಯಾನ್ ಕ್ರಮವನ್ನು ಟೀಕಿಸಿದ್ದರು. ತಮಗೆ ಗೊತ್ತಿಲ್ಲದೇ ನೋಟು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಆರೋಪ ಮಾಡಿದ್ದರು.
VIDEO | “We all know that when he (Raghuram Rajan) was the RBI governor, he wrecked the entire banking system,” says Union Minister @Rajeev_GoI. pic.twitter.com/fRLkPe5WxG
— Press Trust of India (@PTI_News) June 9, 2023
ಕರ್ನಾಟಕ ಸರ್ಕಾರದ ವಿರುದ್ಧ ರಾಜೀವ್ ಟೀಕೆ
ಶಾಲಾ ಪಠ್ಯಪುಸ್ತಕಗಳಲ್ಲಿ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಬಗೆಗಿನ ಪಾಠವನ್ನು ತೆಗೆಯಲು ಮುಂದಾಗಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸ ಎಂದರೆ ನೆಹರೂ ಮತ್ತು ಗಾಂಧಿ ಕುಟುಂಬಕ್ಕೆ ಮಾತ್ರ ಸೀಮಿತ ಆಗಿದೆ ಎಂದು ಟೀಕಿಸಿದ್ದಾರೆ.
ಇನ್ನು, ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಸಂಘ ಪರಿವಾರಕ್ಕೆ ಉದಾರವಾಗಿ ಸರ್ಕಾರೀ ಜಮೀನುಗಳನ್ನು ನೀಡಲಾಗಿದ್ದು, ಅದನ್ನೆಲ್ಲಾ ಪರಿಶೀಲಿಸಿ, ಅಕ್ರಮ ಎನಿಸಿರುವ ಜಾಗವನ್ನು ಹಿಂಪಡೆಯುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ನೀಡಿದ್ದ ಹೇಳಿಕೆಗೂ ರಾಜೀವ್ ಚಂದ್ರಶೇಖರ್ ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದವರು ಒಂದೋ ಸುಳ್ಳು ಹೇಳುತ್ತಾರೆ, ಇಲ್ಲ ತಲೆಬುಡ ಇಲ್ಲದೇ ಮಾತನಾಡುತ್ತಾರೆ. ಗುಂಡೂರಾವ್ ಈ ಕೆಟಗರಿಗೆ ಸೇರಿದವರು. ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದಾರೋ ಅವರೇ ಹೇಳಬೇಕು ಎಂದು ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ