ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

Operation Oorja Suraksha to escort India bound ships at Hormuz Strait: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತೀಯ ತೈಲ ನೌಕೆಗಳನ್ನು ಸುರಕ್ಷಿತವಾಗಿ ತರಲು ಭಾರತದಿಂದ ಆಪರೇಷನ್ ಊರ್ಜಾ ಸುರಕ್ಷಾ ಕೈಗೊಳ್ಳಲಾಗಿದೆ. ತೈಲ, ಎಲ್​ಪಿಜಿ, ಎಲ್​ಎನ್​ಜಿ ಹೊತ್ತ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ದಾಟಿಬರಲು ರಕ್ಷಣೆ ಒದಗಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ನೌಕಾಪಡೆಯ ಐದು ಸಮರನೌಕೆಗಳು ಈ ಕಾರ್ಯಾಚರಣೆಯಲ್ಲಿ ಇರುತ್ತವೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?
ಭಾರತೀಯ ಎಲ್​ಪಿಜಿ ಹಡಗು
Image Credit source: PTI

Updated on: Mar 27, 2026 | 2:59 PM

ನವದೆಹಲಿ, ಮಾರ್ಚ್ 27: ಭಾರತ ಈ ತಿಂಗಳು (ಮಾರ್ಚ್) ಆಪರೇಷನ್ ಊರ್ಜಾ ಸುರಕ್ಷಾ (Operation Oorja Suraksha) ಆರಂಭಿಸಿದೆ. ಭಾರತೀಯ ನೌಕಾಪಡೆಯ ವಿಶೇಷ ಕಾರ್ಯಾಚರಣೆಯಾದ ಇದರಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಭಾರತೀಯ ತೈಲ ನೌಕೆಗಳ ಸಾಗಣೆಗೆ ರಕ್ಷಣೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಯುದ್ಧದ ಬಳಿಕ ಹಾರ್ಮುಜ್ ಜಲಸಂಧಿಯು ಅಕ್ಷರಶಃ ಇರಾನ್ ಹತೋಟಿಯಲ್ಲಿದೆ. ಭಾರತ ಸೇರಿದಂತೆ ಕೆಲವೇ ಆಯ್ದ ದೇಶಗಳ ತೈಲ ಹಡಗುಗಳಿಗೆ ಸಾಗಲು ಇರಾನ್ ಅನುಮತಿ ಕೊಟ್ಟಿದೆ. ಆದರೂ ತ್ರಿವರ್ಣ ಧ್ವಜ ಲಾಂಛನದ ತೈಲ ಹಡಗುಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಆಪರೇಷನ್ ಊರ್ಜಾ ಸುರಕ್ಷಾ ಕೈಗೊಳ್ಳಲಾಗಿದೆ.

ಊರ್ಜಾ ಎಂದರೆ ಇಂಧನ. ಈ ಕಾರ್ಯಾಚರಣೆಯ ಉದ್ದೇಶ ಇಂಧನ ಸುರಕ್ಷತೆಯಾಗಿದೆ. ಸದ್ಯ ಬಹಳ ಅಪಾಯಕಾರಿಯಾಗಿ ಮಾರ್ಪಟ್ಟಿರುವ ಹಾರ್ಮುಜ್ ಜಲಸಂಧಿ, ಓಮನ್ ಗಲ್ಫ್ ಮೂಲಕ ಕಚ್ಛಾ ತೈಲ, ಎಲ್​ಎನ್​ಜಿ ಮತ್ತು ಎಲ್​ಪಿಜಿ ಹೊತ್ತ ಭಾರತೀಯ ಹಡಗುಗಳು ಸುರಕ್ಷಿತವಾಗಿ ಭಾರತವನ್ನು ತಲುಪುವುದು ಈ ಆಪರೇಷನ್​ನ ಗುರಿ.

ಇದನ್ನೂ ಓದಿ: ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ

ಆಪರೇಷನ್ ಊರ್ಜಾ ಸುರಕ್ಷಾದಲ್ಲಿ ನೌಕಾಪಡೆಯು ತನ್ನ ಫ್ರಂಟ್​ಲೈನ್ ಸಮರನೌಕೆಗಳನ್ನು ಗಲ್ಫ್​ನತ್ತ ಕಳುಹಿಸಿಕೊಡುತ್ತದೆ. ಭಾರತೀಯ ತೈಲ ನೌಕೆಗಳು ಗಲ್ಫ್ ದಾಟಿ ಬರಲು ಅನುವಾಗುವ ರೀತಿಯಲ್ಲಿ ಅದರ ಹಿಂದೆ ಮುಂದೆ ಸಮರನೌಕೆಗಳನ್ನು ನಿಯೋಜಿಸಲಾಗುತ್ತದೆ. ಹಡಗುಗಳನ್ನು ಯಾರಾದರೂ ಹೈಜಾಕ್ ಮಾಡುವುದೋ, ಬೇರೆಡೆ ವಿಮುಖಗೊಳಿಸುವುದೋ ಇತ್ಯಾದಿ ಮಾಡದಂತೆ ನೌಕಾಪಡೆ ಎಚ್ಚರ ವಹಿಸುತ್ತದೆ.

ಹಾರ್ಮುಜ್ ಜಲಸಂಧಿ ಮತ್ತು ಓಮನ್ ಗಲ್ಫ್​ನಲ್ಲಿ ಭಾರತೀಯ ಹಡಗುಗಳಿಗೆ ಸಾಗಲು ಇರಾನ್ ಅನುಮತಿಸಿದೆ. ಆದರೆ ಹೌತಿಸ್ ಬಂಡುಕೋರರು ಅಥವಾ ಇನ್ಯಾರಾದರೂ ತೈಲ ನೌಕೆಗಳಿಗೆ ಹಾನಿ ಮಾಡುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ, ನೌಕೆಗಳ ರಕ್ಷಣೆ ಉದ್ದೇಶದಿಂದ ಮಾತ್ರವೇ ಭಾರತೀಯ ನೌಕಾಪಡೆಯು ಆಪರೇಷನ್ ಊರ್ಜಾ ಸುರಕ್ಷಾ ಕೈಗೊಂಡಿರುವುದು.

ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜವಿರುವ ಹಲವು ಹಡಗುಗಳಿವೆ. ಇವುಗಳ ಪೈಕಿ ಎಲ್​ಪಿಜಿ ಹೊತ್ತಿರುವ 22 ಹಡಗುಗಳನ್ನು ಆಪರೇಷನ್ ಊರ್ಜಾ ಸುರಕ್ಷಾ ಮೂಲಕ ರಕ್ಷಣೆ ಕೊಡಲು ಆಯ್ದುಕೊಳ್ಳಲಾಗಿದೆ. ನೌಕಾಪಡೆಯ ಐದು ಸಮರನೌಕೆಗಳು ಈ ಆಪರೇಷನ್​ನಲ್ಲಿ ಇರುತ್ತವೆ. ಮಲ್ಟಿರೋಲ್ ಫ್ರಿಗೇಟ್ಸ್, ಡೆಸ್ಟ್ರಾಯರ್​ಗಳು ಇದರಲ್ಲಿ ಇರುತ್ತವೆ. ರಾಡಾರ್, ಕ್ಷಿಪಣಿ, ಹೆಲಿಕಾಪ್ಟರ್ ಪ್ಲಾಟ್​ಫಾರ್ಮ್​ಗಳು, ಆ್ಯಂಟಿ ಡ್ರೋನ್ ರಕ್ಷಣೆ, ಎಲೆಕ್ಟ್ರಾನಿಕ್ ದಾಳಿ ರಕ್ಷಣೆ ಇತ್ಯಾದಿ ಪೂರ್ಣ ಮಿಲಿಟರಿ ಸಜ್ಜಿತ ಸಮರನೌಕೆಗಳಿವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us