ಯುಪಿಐ ಪೇಮೆಂಟ್​ಗೆ ಎಂಡಿಆರ್, ಮತ್ತಷ್ಟು ಸ್ಪಷ್ಟತೆ; 2,000 ರೂ ಮೇಲ್ಪಟ್ಟ ಪಾವತಿಗೆ ಎಷ್ಟಿರುತ್ತೆ ಶುಲ್ಕ? ಇಲ್ಲಿದೆ ಪೂರ್ಣ ವಿವರ

ಕೇಂದ್ರ ಸರ್ಕಾರವು ಪಿಎಸ್​ಎಸ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಯುಪಿಐ ಪೇಮೆಂಟ್​ಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಕುರಿತು ಕಾನೂನು ಅವಕಾಶಗಳನ್ನು ನೀಡಲಾಗಿದೆ. ಎನ್​ಪಿಸಿಐ ಸುತ್ತೋಲೆ ಹೊರಡಿಸಿದ್ದು, ಎಂಡಿಆರ್​ಗಳು ಯಾರಿಗೆ ಮತ್ತು ಎಷ್ಟು ಅನ್ವಯ ಆಗುತ್ತದೆ ಎಂದು ವಿವರ ನೀಡಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಎಷ್ಟೇ ಮೊತ್ತದ ಯುಪಿಐ ಪಾವತಿಗೆ ಈ ಶುಲ್ಕ ಅನ್ವಯ ಆಗುವುದಿಲ್ಲ. ದೊಡ್ಡ ವ್ಯಾಪಾರಿಗೆ 2,000 ರೂ ಮೇಲ್ಪಟ್ಟು ಮಾಡುವ ಪಾವತಿಗೆ ಎಂಡಿಆರ್ ಶುಲ್ಕ ಇರುತ್ತದೆ.

ಯುಪಿಐ ಪೇಮೆಂಟ್​ಗೆ ಎಂಡಿಆರ್, ಮತ್ತಷ್ಟು ಸ್ಪಷ್ಟತೆ; 2,000 ರೂ ಮೇಲ್ಪಟ್ಟ ಪಾವತಿಗೆ ಎಷ್ಟಿರುತ್ತೆ ಶುಲ್ಕ? ಇಲ್ಲಿದೆ ಪೂರ್ಣ ವಿವರ
ಯುಪಿಐ
Image Credit source: Getty Images

Updated on: Sep 15, 2026 | 8:20 PM

ನವದೆಹಲಿ, ಸೆಪ್ಟೆಂಬರ್ 15: ವ್ಯಕ್ತಿಯಿಂದ ವ್ಯಕ್ತಿ ನಡುವೆ ದೊಡ್ಡ ಮೊತ್ತದ ಯುಪಿಐ ವಹಿವಾಟು ಮಾಡಿದಾಗ ಅದಕ್ಕೆ ಯಾವ ಎಂಡಿಆರ್ ಶುಲ್ಕ ಇರೋದಿಲ್ಲ. ಅಂಗಡಿಗಳಿಗೆ ವ್ಯಕ್ತಿ ಮಾಡುವ ಪೇಮೆಂಟ್ ಆಗಿದ್ದರೆ 2,000 ರೂ ಒಳಗಿನ ಪಾವತಿಗೆ ಶುಲ್ಕ ಇರೋದಿಲ್ಲ. ಅದಕ್ಕೂ ಮೇಲ್ಪಟ್ಟ ವಹಿವಾಟು ಮೊತ್ತಕ್ಕೆ ಶೇ. 0.4 ಅಥವಾ 300 ರೂ (ಯಾವುದು ಕಡಿಮೆಯೋ) ಎಂಡಿಆರ್ ವಿಧಿಸಲಾಗುತ್ತದೆ. ಅವಶ್ಯಕ ಕ್ಷೇತ್ರಗಳಲ್ಲಿ ಶೇಕಡವಾರು ಎಂಡಿಆರ್ ಬದಲು ಪ್ರತೀ ಟ್ರಾನ್ಸಾಕ್ಷನ್​ಗೆ 5 ರೂ ಶುಲ್ಕ ವಿಧಿಸಲಾಗುತ್ತದೆ. ಎನ್​ಪಿಸಿಐ ಸಂಸ್ಥೆ ಸಮಗ್ರ ವಿವರಗಳನ್ನೊಳಗೊಂಡ ಸುತ್ತೋಲೆಯನ್ನು ಇಂದು ಪ್ರಕಟಿಸಿದೆ. ಯುಪಿಐ ಮತ್ತು ಎಂಡಿಆರ್ ಶುಲ್ಕದ ಕುರಿತು ಸರ್ಕಾರ ಜಾರಿಗೆ ತರಲಿರುವ ಕೆಲ ಪ್ರಮುಖ ನಿಯಮಗಳು ಮತ್ತು ವಿವರಗಳು ಈ ಕೆಳಕಂಡಂತಿವೆ:

ವ್ಯಕ್ತಿಯಿಂದ ವ್ಯಕ್ತಿಗೆ (P2P) ಯುಪಿಐ ಪಾವತಿ: ಶುಲ್ಕ ಇಲ್ಲ

ವಹಿವಾಟಿನ ಮೊತ್ತ ಎಷ್ಟೇ ಇದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ (P2P) ಮಾಡುವ ಯಾವುದೇ ಯುಪಿಐ ಪಾವತಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರಿಗೆ ಯುಪಿಐ ಬಳಕೆಯಲ್ಲಿ ಯಾವುದೇ ಮಾಸಿಕ ಮಿತಿಗಳು, ಕೊಟಾಗಳು ಅಥವಾ ಗುಪ್ತ ಶುಲ್ಕಗಳು (Hidden Charges) ಇರುವುದಿಲ್ಲ. ಇಲ್ಲಿ ಎರಡು ಸಾವಿರ ರೂ ವಹಿವಾಟು ನಿಬಂಧನೆಗಳು ಇತ್ಯಾದಿ ಇರುವುದಿಲ್ಲ. ಶೇ. 37ರಷ್ಟು ಯುಪಿಐ ವಹಿವಾಟು ಪಿ2ಪಿ ಇರುತ್ತದೆ. ವಹಿವಾಟು ಮೌಲ್ಯದಲ್ಲಿ ಶೇ. 70ರಷ್ಟು ಭಾಗವು ಎಂಡಿಆರ್ ವ್ಯಾಪ್ತಿಗೆ ಬರುವುದಿಲ್ಲ.

ವರ್ತಕರಿಗೆ ಗ್ರಾಹಕರ ಪಾವತಿ (P2M) ಮತ್ತು ಎಂಡಿಆರ್ ಶುಲ್ಕ

  • ₹2,000 ವರೆಗೆ ಉಚಿತ: ₹2,000 ವರೆಗಿನ ಯಾವುದೇ ಮರ್ಚೆಂಟ್ (P2M) ಪಾವತಿಗಳಿಗೆ ಯಾವುದೇ ಎಂಡಿಆರ್ ಶುಲ್ಕ ಇರುವುದಿಲ್ಲ. ಅಂದರೆ, ಗ್ರಾಹಕರು ವ್ಯಾಪಾರಿಗೆ ಮಾಡುವ ₹2,000 ಒಳಗಿನ ಮೊತ್ತದ ಪಾವತಿಗೆ ಶುಲ್ಕ ಇರುವುದಿಲ್ಲ.
  • ಹೆಚ್ಚಿನ ಪಾವತಿಗೆ ಶೇ. 0.4 ಎಂಡಿಆರ್: ₹2,000 ದಾಟುವ ವರ್ತಕರ ವಹಿವಾಟಿನ ಮೇಲೆ ಶೇಕಡಾ ಶೇ. 0.4 ರಷ್ಟು ನಗಣ್ಯ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಇದು ದೊಡ್ಡ ವ್ಯಾಪಾರಿಗೆ ಮಾತ್ರವೇ ಅನ್ವಯ ಆಗುತ್ತದೆ. ಸಣ್ಣ ವ್ಯಾಪಾರಿಗೆ ಎಂಡಿಆರ್ ಶುಲ್ಕ ಅನ್ವಯ ಆಗದೇ ಇರಬಹುದು.
  • ಗರಿಷ್ಠ ಶುಲ್ಕದ ಮಿತಿ (Cap): ₹75,000 ಹಾಗೂ ಅದಕ್ಕಿಂತ ಹೆಚ್ಚಿನ ಬೃಹತ್ ವಹಿವಾಟುಗಳಿಗೆ ಎಂಡಿಆರ್ ಶುಲ್ಕವನ್ನು ಶೇಕಡವಾರು ಲೆಕ್ಕದ ಬದಲು ಗರಿಷ್ಠ ₹300 ಗೆ ನಿಗದಿಪಡಿಸಲಾಗಿದೆ.
  • ಅಗತ್ಯ ರಂಗಗಳಿಗೆ ಸ್ಥಿರ ಎಂಡಿಆರ್: ರೈಲ್ವೆ, ಟೆಲಿಕಾಂ, ವಿಮೆ, ಇಂಧನ (Fuel), ಹಾಗೂ ಕೃಷಿ ವಲಯಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ಪ್ರತಿ ವಹಿವಾಟಿಗೆ ಕೇವಲ ₹5 ಸ್ಥಿರ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗಲಿದೆ.
  • ಕ್ಯಾಪಿಟಲ್ ಮಾರ್ಕೆಟ್: ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ ವಹಿವಾಟುಗಳಿಗೆ ಶೇಕಡಾ ಶೇ 0.02 ಎಂಡಿಆರ್ ಅನ್ವಯಿಸಲಿದ್ದು, ಗರಿಷ್ಠ ಮಿತಿ ₹300 ಇರಲಿದೆ.

ಇದನ್ನೂ ಓದಿ: ಆಮದಿಗಿಂತ ಭಾರೀ ಏರಿದ ರಫ್ತು; ಆಗಸ್ಟ್​ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 26 ಬಿಲಿಯನ್ ಡಾಲರ್​ಗೆ ಇಳಿಕೆ

ಸಣ್ಣ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ರಕ್ಷಣೆ (P2PM)

ಯುಪಿಐ ಕ್ಯೂಆರ್ (QR) ಕೋಡ್ ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ಸ್ವೀಕರಿಸುವ ಸಣ್ಣ ವರ್ತಕರಿಗೆ (P2PM ವರ್ಗ) ಎಂಡಿಆರ್ ಸಂಪೂರ್ಣ ಉಚಿತವಾಗಿರುತ್ತದೆ. ಅಂದರೆ, ಒಂದು ತಿಂಗಳಲ್ಲಿ ಯುಪಿಐ ಮೂಲಕ ₹1 ಲಕ್ಷಕ್ಕಿಂತ ಕಡಿಮೆ ಪೇಮೆಂಟ್ ಪಡೆಯುವ ವ್ಯಾಪಾರಿಯನ್ನು ಸಣ್ಣ ವರ್ತಕರೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಪೇಮೆಂಟ್ ಪಡೆಯುವ ವರ್ತಕರಿಗೆ ಎಂಡಿಆರ್ ಶುಲ್ಕ ಹಾಕಲಾಗುತ್ತದೆ.

ದತ್ತಾಂಶಗಳ ಪ್ರಕಾರ, ದೇಶದ ಶೇ. 96 ರಷ್ಟು ವರ್ತಕರ ವಹಿವಾಟುಗಳು ₹2,000 ಗಿಂತ ಕಡಿಮೆಯಿರುವುದರಿಂದ ಅಥವಾ P2PM ವಿನಾಯಿತಿ ವ್ಯಾಪ್ತಿಗೆ ಬರುವುದರಿಂದ, ಈ ಹೊಸ ನಿಯಮದಿಂದ ಕೇವಲ ಶೇ. 4 ರಷ್ಟು ದೊಡ್ಡ ವರ್ತಕರಿಗೆ ಮಾತ್ರ ಪರಿಣಾಮ ಬೀರಲಿದೆ.

ಯುಪಿಐ ಆ್ಯಪ್​ಗಳು ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ…

ಯುಪಿಐ ಆಪ್‌ಗಳು (Google Pay, PhonePe ಇತ್ಯಾದಿ) ಯಾವುದೇ ಮಾದರಿಯ ‘ಪ್ಲಾಟ್‌ಫಾರ್ಮ್ ಫೀ’ ಅಥವಾ ಹೆಚ್ಚುವರಿ ಸೇವಾ ಶುಲ್ಕಗಳನ್ನು ವಿಧಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವರ್ತಕರು ಈ ಎಂಡಿಆರ್ ಶುಲ್ಕದ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸದಂತೆ ಎಚ್ಚರ ವಹಿಸಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ವರ್ಲ್ಡ್​​ಸ್ಕಿಲ್ಸ್ ಶಾಂಘೈ 2026; ಗಾರೆ, ಮರಗೆಲಸದಿಂದ ಹಿಡಿದು ಸಾಫ್ಟ್​ವೇರ್​ವರೆಗೆ 64 ಕೌಶಲ್ಯಗಳಲ್ಲಿ ಸ್ಪರ್ಧೆ; ಭಾರತದ ಭರ್ಜರಿ ಉಪಸ್ಥಿತಿ

ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ನಿಧಿ

ಸಂಗ್ರಹವಾಗುವ ಒಟ್ಟು ಎಂಡಿಆರ್ ಮೊತ್ತದಲ್ಲಿ ಶೇ. 5 ಭಾಗವನ್ನು ಸಣ್ಣ ವರ್ತಕರಲ್ಲಿ ಯುಪಿಐ ಬಳಕೆಯನ್ನು ಉತ್ತೇಜಿಸಲು ಮೀಸಲಾದ ವಿಶೇಷ ನಿಧಿಗೆ ಜಮೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿ ಜಾಲ ಮತ್ತಷ್ಟು ವಿಸ್ತರಣೆಯಾಗಲಿದೆ.

ಹಣಕಾಸು ವಿಷಯದ ಸಂಸದೀಯ ಸ್ಥಾಯಿ ಸಮಿತಿಯ (Standing Committee on Finance) 32 ನೇ ವರದಿಯ ಶಿಫಾರಸಿನಂತೆ, ಯುಪಿಐ ವ್ಯವಸ್ಥೆಯು ದೀರ್ಘಕಾಲೀನ ಆರ್ಥಿಕ ಸುಸ್ಥಿರತೆ ಪಡೆಯಲು ಈ ಸುಧಾರಣೆಯನ್ನು ಜಾರಿಗೆ ತರಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us