ನವದೆಹಲಿ, ಜೂನ್ 10: ಸಂಕಷ್ಟಗಳ ಸರಮಾಲೆಗಳ ಮಧ್ಯೆ ಲಾಭದ ಹಳಿಗೆ ಬರಲು ಹತಾಶೆಯ ಪ್ರಯತ್ನದಲ್ಲಿರುವ ಪೇಟಿಎಂ ಸಂಸ್ಥೆ (Paytm) ಈಗ ಆ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ಜರುಗಿಸಿದೆ. ಲೇ ಆಫ್ ಮಾಡಲಾಗಿರುವುದನ್ನು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಖಚಿತಪಡಿಸಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಸಿಗಲು ನೆರವನ್ನೂ ಕೂಡ ಸಂಸ್ಥೆ ಒದಗಿಸುತ್ತಿದೆ. ಆದರೆ, ಎಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ನಿರ್ದಿಷ್ಟವಾಗಿ ಸಂಸ್ಥೆ ಹೇಳಿಲ್ಲ. ವರದಿಗಳ ಪ್ರಕಾರ 3,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಹೋಗಿದೆ ಎಂದು ಹೇಳಲಾಗುತ್ತಿದೆ.
ಪೇಟಿಎಂನಲ್ಲಿ 40,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಈಗ 3,500 ಮಂದಿಯ ಲೇ ಆಫ್ ಆದರೆ ಅದರ ಸಿಬ್ಬಂದಿ ವರ್ಗದ ಸಂಖ್ಯೆ 36,521ಕ್ಕೆ ಇಳಿಯಬಹುದು. ಲೇ ಆಫ್ ಆದವರಲ್ಲಿ ಸೇಲ್ಸ್ ವಿಭಾಗದವರು ಹೆಚ್ಚು ಎನ್ನಲಾಗಿದೆ.
ಆರ್ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ಬಿದ್ದದ್ದು ಒನ್97 ಕಮ್ಯೂನಿಕೇಶನ್ಸ್ನ ವಿವಿಧ ಬಿಸಿನೆಸ್ಗಳಿಗೆ ಹೊಡೆತ ಬಿದ್ದಂತಾಗಿದೆ. ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಪೇಟಿಎಂಗೆ ಆದ ನಷ್ಟ 550 ಕೋಟಿ ರೂ. ಈ ನಷ್ಟವನ್ನು ಕಡಿಮೆ ಮಾಡಬೇಕೆಂದರೆ ಸಂಸ್ಥೆಯ ಸಿಬ್ಬಂದಿ ವರ್ಗದ ಮರುರಚನೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಇವರಿಲ್ಲದೇ ಏನೂ ಇಲ್ಲ… ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸಾಮಿಯನ್ನು ಹಾಡಿಹೊಗಳಿದ ಇಲಾನ್ ಮಸ್ಕ್
ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಕೊಡಿಸಲು ಕಂಪನಿ ಸಹಾಯವಾಗಿದೆ. ಅದರ ಮಾನವ ಸಂಪನ್ಮೂಲ ತಂಡಗಳು ಬೇರೆ ಬೇರೆ ಕಂಪನಿಗಳ ಜೊತೆ ಸಂಪರ್ಕದಲ್ಲಿದ್ದು, ಉದ್ಯೋಗಿಗಳಿಗೆ ಕೆಲಸ ಕೊಡಿಸಲು ಪ್ರಯತ್ನಿಸುತ್ತಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ