
ನವದೆಹಲಿ, ಜನವರಿ 26: ಕೇಂದ್ರ ಸರ್ಕಾರದಿಂದ ನಡೆಸಲಾಗುವ ಅಟಲ್ ಪೆನ್ಷನ್ ಯೋಜನೆಯನ್ನು (APY- Atal Pension Yojana) ಇನ್ನೂ ಐದು ವರ್ಷ ವಿಸ್ತರಣೆ ಮಾಡಲಾಗಿದೆ. 2030-31ರವರೆಗೂ ಈ ರಿಟೈರ್ಮೆಂಟ್ ಸ್ಕೀಮ್ ಮುಂದುವರಿಸಲು ಕೇಂದ್ರ ಸಂಪುಟ ಸಮ್ಮತಿ ಕೊಟ್ಟಿರುವುದು ತಿಳಿದುಬಂದಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂಗಿಂತ ಎಪಿವೈ ಭಿನ್ನವಾದ ಪಿಂಚಣಿ ಯೋಜನೆ. ಎನ್ಪಿಎಸ್ನಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಆದರೆ, ಅಟಲ್ ಪೆನ್ಷನ್ ಯೋಜನೆಯು ಬಡವರು ಹಾಗೂ ಕೆಳ ಮಧ್ಯಮ ವರ್ಗದವರಿಗೆ ಗುರಿಯಾಗಿಸಿದೆ.
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಅಟಲ್ ಪೆನ್ಷನ್ ಯೋಜನೆ ಹೇಳಿ ಮಾಡಿಸಿದ್ದಾಗಿದೆ. ಆದಾಯ ತೆರಿಗೆ ಪಾವತಿ ಮಾಡದೇ ಇರುವಂತಹವರು ಇದರಲ್ಲಿ ಹೂಡಿಕೆ ಮಾಡಬಹುದು. ಈ ಎಪಿವೈ ಯೋಜನೆಯಡಿ 1,000 ರೂನಿಂದ 5,000 ರೂವರೆಗೆ ಮಾಸಿಕ ಪಿಂಚಣಿ ಪಡೆಯಲು ಅವಕಾಶ ಇರುತ್ತದೆ. ಇದಕ್ಕೆ ಪಾವತಿಸುವ ಪ್ರೀಮಿಯಮ್ ಬಹಳ ಕಡಿಮೆ ಮೊತ್ತದ್ದು.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?
18 ವರ್ಷದಿಂದ 40 ವರ್ಷದೊಳಗಿನ ಯಾವುದೇ ಭಾರತೀಯ ನಾಗರಿಕರು ಅಟಲ್ ಪೆನ್ಷನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆಧಾರ್ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್ ಮತ್ತು ಮೊಬೈಲ್ ನಂಬರ್ ಇರಬೇಕು. ಕನಿಷ್ಠ ಪಾವತಿ ಅವಧಿ 20 ವರ್ಷ ಇರುತ್ತದೆ. 60 ವರ್ಷ ವಯಸ್ಸಾಗುವವರೆಗೂ ಪ್ರೀಮಿಯಮ್ ಕಟ್ಟಬೇಕು. 60ರ ವಯಸ್ಸು ರಿಟೈರ್ಮೆಂಟ್ ಏಜ್. ಅಲ್ಲಿಂದ ಪಿಂಚಣಿ ಪ್ರಾರಂಭವಾಗುತ್ತದೆ.
ಈ ಯೋಜನೆಯಲ್ಲಿ ನೀವು 18ರ ವಯಸ್ಸಿಗೆ ಹೂಡಿಕೆ ಆರಂಭಿಸಿದರೆ ಕನಿಷ್ಠ ಪ್ರೀಮಿಯಮ್ ಹಣ ಕೇವಲ 42 ರೂ. ಈ ಹಣಕ್ಕೆ ನಿಮಗೆ ಸಿಗುವ ಮಾಸಿಕ ಪಿಂಚಣಿ 1,000 ರೂ. ನಿಮಗೆ 5,000 ರೂ ಪಿಂಚಣಿ ಬೇಕೆಂದರೆ ಮಾಸಿಕವಾಗಿ 210 ರೂ ಪಾವತಿಸಬೇಕು.
ಹೆಚ್ಚು ವಯಸ್ಸಾದ ನಂತರ ಸ್ಕೀಮ್ನಲ್ಲಿ ಹೂಡಿಕೆ ಆರಂಭಿಸಿದರೆ ಪ್ರೀಮಿಯಮ್ ಹಣ ಹೆಚ್ಚುತ್ತಾ ಹೋಗುತ್ತದೆ. ಈ ಸ್ಕೀಮ್ನಲ್ಲಿ ಗರಿಷ್ಠ ಮಾಸಿಕ ಪಿಂಚಣಿ 5,000 ರೂ ಇರುತ್ತದೆ.
ಇದನ್ನೂ ಓದಿ: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ಪೆನ್ಷನ್ ಸದಸ್ಯರು ಸಾಯುವವರೆಗೂ ಪಿಂಚಣಿ ಸಿಗುತ್ತಾ ಹೋಗುತ್ತದೆ. ಅವರು ಸಾವನ್ನಪ್ಪಿದರೆ ಅವರ ಸಂಗಾತಿಗೆ ಪಿಂಚಣಿ ಮುಂದವರಿಯುತ್ತದೆ. ಅವರೂ ಸತ್ತರೆ ಆಗ ನಿಗದಿತ ನಾಮಿನಿಯ ವ್ಯಕ್ತಿಗೆ ಈ ಪಿಂಚಣಿ ವರ್ಗವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ