
ಕ್ರೆಡಿಟ್ ಕಾರ್ಡ್ನಲ್ಲಿ ಶಾಪಿಂಗ್ ಮಾಡಿ ಅಭ್ಯಾಸ ಇದ್ದವರಲ್ಲಿ ಹೆಚ್ಚಿನವರು ಇಎಂಐ ಆಯ್ಕೆಗಳನ್ನು ಬಳಸಿರುತ್ತಾರೆ, ಅಥವಾ ಅದರ ಬಗ್ಗೆ ಗೊತ್ತಿರುತ್ತದೆ. ಅಧಿಕ ಮೌಲ್ಯದ ವಸ್ತುವನ್ನು ಖರೀದಿಸಿದಾಗ ಮುಂದಿನ ಬಿಲ್ನಲ್ಲಿ ಅಷ್ಟೂ ಹಣ ಕಟ್ಟಲಾಗದಿದ್ದರೆ, ಜನರು ಸುಲಭವೆನಿಸುವ ಇಎಂಐ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ನೋ ಕಾಸ್ಟ್ ಅಥವಾ ಝೀರೋ ಕಾಸ್ಟ್ ಇಎಂಐ ತಲೆಬರಹ ನೋಡಿ ಮಾರುಹೋಗುವುದುಂಟು. ಈ ಕ್ರೆಡಿಟ್ ಕಾರ್ಡ್ ಇಎಂಐ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ.
ನೀವು 80,000 ರೂ ಮೊತ್ತದ ವಾಷಿಂಗ್ ಮೆಷೀನ್ ಶಾಪಿಂಗ್ ಮಾಡುತ್ತೀರಿ. ಅದಕ್ಕೆ 12 ಕಂತುಗಳಲ್ಲಿ ಕಟ್ಟುವ ಆಯ್ಕೆಯನ್ನು ಅಂಗಡಿಯವರು ನಿಮಗೆ ನೀಡುತ್ತಾರೆ. 7,900 ರೂಗಳ 12 ಇಎಂಐಗಳಲ್ಲಿ ಕಟ್ಟುವ ಆಫರ್ ಇರುತ್ತದೆ. ಒಮ್ಮೆಗೆ 80,000 ರೂ ಕಟ್ಟುವುದಕ್ಕಿಂತ ತಿಂಗಳಿಗೆ 7,900 ರೂ ಕಟ್ಟುವುದು ಸುಲಭ ಎನಿಸುತ್ತದೆ. ಆದರೆ, ಯಾರೂ ಕೂಡ ಈ ಇಎಂಐಗಳ ಹಿಂದಿನ ಮರ್ಮ ತಿಳಿದಿರುವುದಿಲ್ಲ.
ಇಎಂಐ = ಸಾಲ
ನಿಮ್ಮ ಖರೀದಿಯನ್ನು ಇಎಂಐಗಳಾಗಿ ಪರಿವರ್ತಿಸಿದಾಗ ಅದು ಸಾಲ ಎನಿಸುತ್ತದೆ. ಹಣಕಾಸು ಸಂಸ್ಥೆ ಅಷ್ಟು ಮೊತ್ತದ ಸಾಲವನ್ನು ನಿಮಗೆ ಕೊಟ್ಟಿದೆ ಎಂದರ್ಥ. ಪರ್ಸನಲ್ ಲೋನ್ಗೆ ಇರುವಷ್ಟು ಬಡ್ಡಿದರ ಅನ್ವಯ ಆಗುತ್ತದೆ. ಶೇ. 12ರಿಂದ 24ರಷ್ಟು ವಾರ್ಷಿಕ ಬಡ್ಡಿದರ ಇರಬಹುದು. ಇದರ ಜೊತೆಗೆ ಪ್ರೋಸಸಿಂಗ್ ಫೀ, ಜಿಎಸ್ಟಿ ಇತ್ಯಾದಿ ಇತರೆ ಶುಲ್ಕಗಳು ಸೇರ್ಪಡೆಯಾಗುತ್ತದೆ. ನಿಮ್ಮ 80,000 ರೂ ವಾಷಿಂಗ್ ಮೆಷೀನ್ಗೆ ನೀವು ಒಂದು ವರ್ಷದ ಅಂತರದಲ್ಲಿ ಒಂದು ಲಕ್ಷ ರೂ ಆದರೂ ಪಾವತಿಸಿರಬಹುದು. ನಿಮ್ಮ ಗಮನಕ್ಕೂ ಅದು ಬಂದಿರುವುದಿಲ್ಲ.
ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು
ನೀವು ಒಮ್ಮೆ ಇಎಂಐ ಆಯ್ಕೆ ಆರಿಸಿಕೊಂಡರೆ, ಅಷ್ಟು ಕಂತುಗಳನ್ನು ಕಟ್ಟಬೇಕು. ಮುಂಗಡವಾಗಿ ಕೆಲ ಕಂತುಗಳನ್ನು ಕಟ್ಟುತ್ತೇನೆಂದರೆ, ಅಥವಾ ಮುಂಗಡವಾಗಿ ಪೂರ್ಣ ಹಣ ಕಟ್ಟುತ್ತೇನೆಂದರೆ ಶೇ. 5ರವರೆಗಿನ ಬಾಕಿ ಹಣವನ್ನು ದಂಡವಾಗಿ ತೆರಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಾಗ ರಿವಾರ್ಡ್ ಪಾಯಿಂಟ್, ಕ್ಯಾಷ್ಬ್ಯಾಕ್ ಇತ್ಯಾದಿ ಸಿಗುತ್ತವೆ. ಆದರೆ, ಇಎಂಐಗೆ ಪರಿವರ್ತಿಸಿದಾಗ ಈ ಸೌಲಭ್ಯ ಅನ್ವಯ ಆಗುವುದಿಲ್ಲ. ಇನ್ನು, ವರ್ತಕರು ತಮ್ಮ ಅಂಗಡಿಗಳಲ್ಲಿ ಡಿಸ್ಕೌಂಟ್ ಸೇಲ್ಗೆ ಇಟ್ಟಾಗ, ನೀವು ಇಎಂಐ ಆಯ್ಕೆ ಮಾಡಿಕೊಂಡಾಗ ಆ ಡಿಸ್ಕೌಂಟ್ ಸಿಗದೇ ಹೋಗಬಹುದು.
ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?
ಅಂಗಡಿಗಳಲ್ಲಿ ಕೆಲ ವಸ್ತುಗಳ ಖರೀದಿಗೆ ಝೀರೋ ಕಾಸ್ಟ್ ಇಎಂಐ ಆಫರ್ ಇರುವುದನ್ನು ನೋಡಿ, ಬಡ್ಡಿರಹಿತವಾಗಿ ಕಂತುಗಳನ್ನು ಕಟ್ಟಬಹುದು ಎಂದೇ ಬಹಳ ಜನರು ಭಾವಿಸುತ್ತಾರೆ. ಜನರಿಗೆ ತಿಳಿಯದ ಸಂಗತಿ ಎಂದರೆ, ಅಂಗಡಿಗಳು ಕೆಲ ಉತ್ಪನ್ನಗಳಿಗೆ ಡಿಸ್ಕೌಂಟ್ ಕೊಟ್ಟಿರುತ್ತವೆ. ಅದರ ಜೊತೆಗೆ ಝೀರೋ ಕಾಸ್ಟ್ ಇಎಂಐ ಆಯ್ಕೆಯನ್ನೂ ಕೊಟ್ಟಿರುತ್ತವೆ. ಜನರು ಡಿಸ್ಕೌಂಟ್ ಮತ್ತು ಬಡ್ಡಿರಹಿತ ಇಎಂಐ ಎರಡೂ ಸಿಗುತ್ತೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದುಂಟು. ಇಲ್ಲಿ ಇಎಂಐ ಪಡೆದಾಗ ಡಿಸ್ಕೌಂಟ್ ಅನ್ವಯ ಆಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ