ನಮ್ಮಲ್ಲಿ ಬಹಳ ಮಂದಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ (Ancestral Property) ಇರಬಹುದು. ಕೆಲವರು ಈ ಆಸ್ತಿ ಮಾರಲು ಮುಂದಾಗಬಹುದು. ನಿಮ್ಮ ತಂದೆಯ ಹೆಸರಿಂದ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಂಡಾಗ ತೆರಿಗೆ ಇರುತ್ತದಾ? ಈ ಪಿತ್ರಾರ್ಜಿತ ಆಸ್ತಿಯನ್ನು ಮಾರುವಾಗ ತೆರಿಗೆ ಕಟ್ಟಬೇಕಾಗುತ್ತದಾ? ಯಾವ ತೆರಿಗೆ ಅನ್ವಯ ಆಗುತ್ತದೆ ಎಂಬೆಲ್ಲಾ ಗೊಂದಲ ಕೆಲವರಲ್ಲಿ ಇರಬಹುದು. ಮೊದಲಿಗೆ ಅನುವಂಶಿಕ ಅಥವಾ ಪಿತ್ರಾರ್ಜಿತ ಆಸ್ತಿ ಎಂದರೆ ಯಾವುದು? ಇದರ ತೆರಿಗೆ ಲೆಕ್ಕಾಚಾರ ಹೇಗೆ ಎಂಬ ವಿವರ ಇಲ್ಲಿದೆ.
ಆದಾಯ ತೆರಿಗೆ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿ ಎಂದರೆ, ತಂದೆ, ತಂದೆ ಕಡೆಯ ತಾತ ಹಾಗೂ ಮುತ್ತಾತನಿಂದ ಆನುವಂಶಿಕವಾಗಿ ಬಂದದ್ದು. ತಾಯಿ ಕಡೆಯಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ.
ಆನುವಂಶಿಕ ತೆರಿಗೆ ಭಾರತದಲ್ಲಿ ಅನ್ವಯವಾಗುವುದಿಲ್ಲ. ನೀವು ಆನುವಂಶಿಕವಾಗಿ ಪಡೆಯುವ ಆಸ್ತಿಗೆ, ಮಾರಾಟ ಮಾಡಲು ನಿರ್ಧಾರ ಮಾಡುವವರೆಗೂ ತೆರಿಗೆ ಪಾವತಿಸಬೇಕಿರುವುದಿಲ್ಲ. ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯಿಂದ ಗಳಿಸಿದ ಆದಾಯ ಕ್ಯಾಪಿಟಲ್ ಗೇನ್ಸ್ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದರೆ ನೀವು ತೆರಿಗೆ ಪಾವತಿಸಬೇಕು.
ಇದನ್ನೂ ಓದಿ: Knowledge: ಕೆಲ ಲಿಸ್ಟೆಡ್ ಕಂಪನಿಗಳು ಯಾಕೆ ಸ್ಟಾಕ್ ಸ್ಪ್ಲಿಟ್ ಮಾಡುತ್ತವೆ? ಬೋನಸ್ ಷೇರುಗಳ ಹಂಚಿಕೆಯಿಂದ ಏನಾಗುತ್ತೆ?
ಪಿತ್ರಾರ್ಜಿತವಾದ ಆಸ್ತಿಯನ್ನು ಮಾರಾಟ ಮಾಡುವಾಗ ಎಷ್ಟು ತೆರಿಗೆ ವಿಧಿಸಲಾಗುತ್ತದೆ, ಎಂಬುದು ನೀವು ಎಷ್ಟು ಕಾಲ ಅದರ ಮಾಲೀಕತ್ವ ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ನೀವು 24 ತಿಂಗಳುಗಳಿಗೂ ಅಧಿಕ ಕಾಲ ಆಸ್ತಿಯನ್ನು ನಿಮ್ಮ ಒಡೆತನದಲ್ಲಿರಿಸಿಕೊಂಡಿದ್ದರೆ ಶೇಕಡಾ 20.8ರಷ್ಟು ಪ್ರಮಾಣದ ತೆರಿಗೆ, ಅಂದರೆ ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್ ಪಾವತಿಸಬೇಕು. ನೀವು 24 ತಿಂಗಳಿಗೂ ಕಡಿಮೆ ಅವಧಿಗೆ ಆಸ್ತಿ ಇರಿಸಿಕೊಂಡಿದ್ದರೆ ಅಲ್ಪಾವಧಿ ಕ್ಯಾಪಿಟಲ್ ಗೇನ್ಸ್ ತೆರಿಗೆ ಅನ್ವಯವಾಗುತ್ತದೆ. ತೆರಿಗೆ ಪ್ರಮಾಣ ನಿಮ್ಮ ಆದಾಯದ ಮೇಲೆ ಅವಲಂಬಿಸಿರುತ್ತದೆ.
ತೆರಿಗೆ ಹಾಗೂ ಹೂಡಿಕೆ ತಜ್ಞ, ಬಲವಂತ್ ಜೈನ್ ವಿವರಣೆ ಪ್ರಕಾರ, ಪಿತ್ರಾರ್ಜಿತ ಆಸ್ತಿ ನಿಮ್ಮ ವಶದಲ್ಲಿದ್ದ ಅವಧಿ ಬಹಳ ಮುಖ್ಯ. ಈ ಅವಧಿಯನ್ನು ಮೂಲ ಮಾಲೀಕರು ಆಸ್ತಿ ಖರೀದಿಸಿದ ದಿನದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಸ್ವತ್ತಿನ, ಈಗಿನ ಬೆಲೆ ಲೆಕ್ಕ ಹಾಕಲು ಸರ್ಕಾರ ವಾರ್ಷಿಕ ಸೂಚ್ಯಂಕ ಸಿದ್ಧಪಡಿಸಿದೆ. 2001ರಲ್ಲಿ ಈ ಸೂಚ್ಯಂಕ 100 ಇತ್ತು. 2003ರಲ್ಲಿ ಅದು 109 ಆಯಿತು. 2020 ರಲ್ಲಿ ಅದೀಗ 317ಕ್ಕೆ ಮುಟ್ಟಿದೆ.
20 ವರ್ಷಗಳ ಹಿಂದೆ ನೀವು ಒಂದು ಸ್ವತ್ತನ್ನು 10 ಲಕ್ಷ ರೂಪಾಯಿಗೆ ಖರೀದಿಸಿರುತ್ತೀರಿ. ಇದನ್ನು ಈಗಿನ ಸೂಚ್ಯಂಕದಿಂದ ಗುಣಿಸಿ 2003ರ ಸೂಚ್ಯಂಕದಿಂದ ಭಾಗಿಸಿದಾಗ ಆಸ್ತಿಯ ಈಗಿನ ಬೆಲೆ 29.08 ಲಕ್ಷ ರೂಪಾಯಿ ಎಂದು ನಿರ್ಧಾರವಾಗುತ್ತದೆ. ಇದಕ್ಕೆ, ಈಗಿನ ಬೆಲೆಯಾದ 29.08 ಲಕ್ಷ ರೂಪಾಯಿಯಿಂದ ಖರೀದಿ ದರ 10 ಲಕ್ಷ ರೂಪಾಯಿ ಕಳೆಯಬೇಕು. ಆಗ ಕ್ಯಾಪಿಟಲ್ ಗೇನ್ಸ್ 19.08 ಲಕ್ಷ ರೂಪಾಯಿ ಆಗುತ್ತದೆ. ಇದರ ಮೇಲೆ ತೆರಿಗೆ ಶೇಕಡಾ 20.8ರಂತೆ 3.96 ಲಕ್ಷ ರೂಪಾಯಿ ತೆರಿಗೆ ಅನ್ವಯ ಆಗುತ್ತದೆ.
ಈ ಆಸ್ತಿ, 2001ರ ನಂತರ ಖರೀದಿಸಿದ್ದು. 2001ಕ್ಕೂ ಮೊದಲು ಖರೀದಿಸಿದ ಆಸ್ತಿಗಳಿಗೆ ನೀವು ಸರ್ಕಾರದಿಂದ ಅಧಿಕೃತಗೊಂಡ ಸರ್ವೆಯರ್ ಸೇವೆ ಮೂಲಕ ಬೆಲೆ ನಿಗದಿ ಪಡಿಸಿಕೊಳ್ಳಬಹುದು.
ಇಲ್ಲಿ ತಿಳಿಯಬೇಕಾದ ಸಂಗತಿ ಎಂದರೆ ಆಸ್ತಿ ಆನುವಂಶಿಕವಾಗಿ ಅಥವಾ ವಿಲ್ ಮೂಲಕ ಪಡೆದರೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದರೆ, ಅದನ್ನು ಮಾರಾಟ ಮಾಡಿದಾಗ ಗಳಿಸಿದ ಹಣನ್ನು ಆದಾಯ ಎಂದು ಪರಿಗಣಿಸಲಾಗುವುದು. ಈ ಆದಾಯ ಕ್ಯಾಪಿಟಲ್ ಗೇನ್ಸ್ ಅಡಿಯಲ್ಲಿ ಬರುವುದರಿಂದ ತೆರಿಗೆ ಪಾವತಿಸಬೇಕಾಗುತ್ತದೆ.
ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವ ಮೊದಲು ಕಾನೂನು ದಸ್ತಾವೇಜು ಪೂರ್ಣಗೊಳಿಸಿ. ತೆರಿಗೆ ಸಲಹೆಗಾರರಿಂದ ತೆರಿಗೆ ಲೆಕ್ಕಹಾಕಿಸಿ, ತೆರಿಗೆ ಉಳಿತಾಯಕ್ಕೆ ಹೂಡಿಕೆ ಅವಕಾಶಗಳ ಕಡೆಯೂ ಗಮನಹರಿಸಿ. ಕಡೆಯದಾಗಿ, ನೀವು ಆಸ್ತಿ ಮಾರಾಟ ಮಾಡುವುದರಿಂದ ತೆರಿಗೆ ಹೊರೆ ಎದುರಿಸುತ್ತಿದ್ದರೆ, ಅದನ್ನು ಉಳಿಸಲು ಯತ್ನಿಸಿ.
(ಕೃಪೆ: ಮನಿ9)
ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Thu, 3 August 23