ನಮ್ಮ ಹಣಕಾಸು ವಹಿವಾಟಿಗೆ ಪಾನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಪಾನ್ ಕಾರ್ಡ್ ದುರುಪಯೋಗ ತಡೆಯಲು ಮತ್ತು ಹೆಚ್ಚು ಸಮರ್ಪಕವಾಗಿ ಅದರ ಉಪಯೋಗವಾಗಲೆಂದು ಆಧಾರ್ ಕಾರ್ಡ್ ಜೊತೆ ಅದನ್ನು ಲಿಂಕ್ ಮಾಡಲು (Linking Aadhaar and PAN number) ತಿಳಿಸಲಾಗುತ್ತಿದೆ. ಆಧಾರ್ ಮತ್ತು ಪಾನ್ ನಂಬರ್ಗಳ ಜೋಡಣೆಗೆ ಆದಾಯ ತೆರಿಗೆ ಇಲಾಖೆ ಸಾಕಷ್ಟು ಬಾರಿ ಡೆಡ್ಲೈನ್ ವಿಸ್ತರಿಸಿದೆ. ಇದೀಗ ಮಾರ್ಚ್ 31ಕ್ಕೆ ಗಡುವು ಕೊಟ್ಟಿದೆ. ಮೂಲಗಳ ಪ್ರಕಾರ ಇದು ಅಂತಿಮ ಗಡುವು. ಇಷ್ಟರೊಳಗೆ ನೀವು ಆಧಾರ್ ಜೊತೆ ಪಾನ್ ಅನ್ನು ಲಿಂಕ್ ಮಾಡಿಲ್ಲದೇ ಹೋದಲ್ಲಿ ನಿಮ್ಮ ಪಾನ್ ನಂಬರ್ ನಿಷ್ಕ್ರಿಯಗೊಳ್ಳಲಿದೆ.
ಮಾರ್ಚ್ 31ರ ಬಳಿಕ ನೀವು ಪಾನ್ ಮತ್ತು ಆಧಾರ್ ನಂಬರ್ಗಳನ್ನು ಜೋಡಿಸಲು ಅವಕಾಶ ಇರುತ್ತದೆ. ಆದರೆ, ಅದಕ್ಕೆ 1000 ರೂ ಶುಲ್ಕ ತೆರಬೇಕಾಗುತ್ತದೆ. ಈಗ ನೀವು ಲಿಂಕ್ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ.
ಒಂದು ವೇಳೆ ನೀವು ನಿಷ್ಕ್ರಿಯಗೊಂಡ ಪಾನ್ ನಂಬರ್ ಅನ್ನು ಬಳಕೆ ಮಾಡಿದಲ್ಲಿ ತೀವ್ರ ದಂಡ ತೆರಬೇಕಾಗುತ್ತದೆ. ಐಟಿ ಕಾಯ್ದೆಯ ಸೆಕ್ಷನ್ 272ಎನ್ ಅಡಿಯಲ್ಲಿ ನಿಮಗೆ 10,000 ರೂ ದಂಡ ಬೀಳಬಹುದು.
ಇದನ್ನೂ ಓದಿ: Hyundai ಮತ್ತು KIA ಕಾರುಗಳಿಂದ ಭಾರತಕ್ಕೆ ಭಾರೀ ನಷ್ಟ? ಕೊರಿಯನ್ ಕಂಪನಿಗಳ ಬಗ್ಗೆ ಸಚಿವ ಗೋಯಲ್ ಅಸಮಾಧಾನ
ಇನ್ನೂ ಒಂದು ಸಂಗತಿ ಎಂದರೆ ನೀವು ಅಕಸ್ಮಾತ್ ಆಗಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಬಳಸಿದರೆ ಕನಿಷ್ಠ 10 ಸಾವಿರ ರೂ ದಂಡ ಬೀಳುವುದರ ಜೊತೆಗೆ 6 ವರ್ಷ ಜೈಲುಶಿಕ್ಷೆಗೂ ಒಳಗಾಗಬೇಕಾಗಬಹುದು.
ಆಧಾರ್ ಮತ್ತು ಪಾನ್ ನಂಬರ್ ಜೋಡಣೆ ಹೇಗೆ?
ಆದಾಯ ತೆರಿಗೆ ವೆಬ್ಸೈಟ್ಗೆ ಹೋದರೆ ಆಧಾರ್ ಮತ್ತು ಪಾನ್ ನಂಬರ್ ಅನ್ನು ಸುಲಭವಾಗಿ ಲಿಂಕ್ ಮಾಡಬಹುದು. ಎಸ್ಸೆಮ್ಮೆಸ್ ಮೂಲಕವೂ ಇದು ಸಾಧ್ಯ. ನೀವು ಎಸ್ಸೆಮ್ಮೆಸ್ ಮೂಲಕ ಮಾಡುವುದಾದರೆ ನೊಂದಾಯಿತ ಮೊಬೈಲ್ ನಂಬರ್ನಿಂದ ಈ ಕೆಳಗಿನ ರೀತಿ ಮೆಸೇಜ್ ಕಳುಹಿಸಬೇಕು:
ಯುಐಡಿಪಿಎನ್ ಎಂದು ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು 12 ಅಂಕಿ ಆಧಾರ್ ನಂಬರ್ ಟೈಪಿಸಬೇಕು. ಮತ್ತೆ ಸ್ಪೇಸ್ ಕೊಟ್ಟು 10 ಅಂಕಿಗಳ ಪಾನ್ ಸಂಖ್ಯೆ ಬರೆಯಬೇಕು. ಬಳಿಕ ಇದನ್ನು 567678 ಅಥವಾ 56161 ನಂಬರ್ಗೆ ಮೆಸೇಜ್ ಆಗಿ ಕಳುಇಸಬೇಕು.
ಒಂದು ವೇಳೆ ನಿಮ್ಮ ಪಾನ್ ನಂಬರ್ ನಿಷ್ಕ್ರಿಯಗೊಂಡಿದ್ದರೆ ಎಸ್ಸೆಮ್ಮೆಸ್ ಮೂಲಕ ಅದನ್ನು ಆ್ಯಕ್ಟಿವೇಟ್ ಮಾಡಲು ಸಾಧ್ಯ. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ 10 ಅಂಕಿ ಪಾನ್ ನಂಬರ್ ಹಾಗೂ 12 ಅಂಕಿ ಆಧಾರ್ ನಂಬರ್ ಅನ್ನು ಟೈಪಿಸಿ 567678 ಅಥವಾ 56161 ನಂಬರ್ಗೆ ಮೆಸೇಜ್ ಕಳುಹಿಸಬೇಕು.