ಬೆಂಗಳೂರು: ಉಳಿತಾಯ ಮಾಡಿದ ಹಣದಿಂದ ಲಾಭ ಪಡೆಯಲು ಜನರು ಈಗಲೂ ಇಚ್ಛಿಸುವ ಮಾರ್ಗ ಎಂದರೆ ಎಫ್ಡಿ, ಅಥವಾ ನಿಶ್ಚಿತ ಠೇವಣಿ. ಸರ್ಕಾರದ ಉಳಿತಾಯ ಯೋಜನೆಗಳು (Savings Schemes) ವರ್ಷಕ್ಕೆ ಶೇ. 7ರಿಂದ 8ರಷ್ಟು ಮಾತ್ರ ಬಡ್ಡಿ ಕೊಡುತ್ತವೆ. ಕೆಲ ದೊಡ್ಡದೊಡ್ಡ ಬ್ಯಾಂಕುಗಳು (Commercial Banks) ತಮ್ಮಲ್ಲಿನ ನಿಶ್ಚಿತ ಠೇವಣಿಗಳಿಗೆ ಶೇ. 9ರವರೆಗೂ ಬಡ್ಡಿ ಕೊಡುತ್ತವೆ. ಆದರೆ, ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು (Suryoday Small Finance Bank) ಅತಿಹೆಚ್ಚು ಎಫ್ಡಿ ದರ ಆಫರ್ ಮಾಡಿದೆ. ನಿಶ್ಚಿತ ಠೇವಣಿಗಳಿಗೆ ಈ ಬ್ಯಾಂಕು ವರ್ಷಕ್ಕೆ ಶೇ. 9.6ರವರೆಗೆ ಬಡ್ಡಿ ನೀಡುತ್ತದೆ. ಅಷ್ಟೇ ಅಲ್ಲ 5 ಲಕ್ಷ ರೂಗಿಂತ ಹೆಚ್ಚು ಮೊತ್ತವನ್ನು ಹಾಗೇ ಸುಮ್ಮನೆ ಖಾತೆಯಲ್ಲಿ ಇಟ್ಟರೂ ವರ್ಷಕ್ಕೆ ಶೇ. 7ರಷ್ಟು ಬಡ್ಡಿ ಕೊಡುತ್ತದೆ ಈ ಬ್ಯಾಂಕು. ಹೊಸ ಬಡ್ಡಿ ದರ 2023 ಮೇ 5ರಿಂದ ಜಾರಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ 2 ಕೋಟಿ ರೂವರೆಗಿನ ಫಿಕ್ಸೆಡ್ ಡೆಪಾಸಿಟ್ಗಳಿಗೆ ಭರ್ಜರಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 4.50ರಿಂದ ಶೇ. 9.60 ವರೆಗೂ ಬಡ್ಡಿ ಬರುತ್ತದೆ. ಇತರ ಸಾಮಾನ್ಯರ ಎಫ್ಡಿಗಳಿಗೆ ಶೇ. 4ರಿಂದ ಶೇ. 9.10ರವರೆಗೂ ಬಡ್ಡಿ ಸಿಗುತ್ತದೆ. 5 ವರ್ಷದ ಠೇವಣಿಗೆ ಗರಿಷ್ಠ ಬಡ್ಡಿ ನೀಡಲಾಗುತ್ತದೆ.
ಇದನ್ನೂ ಓದಿ: EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ
5 ವರ್ಷ ಮೇಲ್ಪಟ್ಟ ಅವಧಿಯ ಠೇವಣಿಗಳಿಗೆ ಸಿಗುವ ವಾರ್ಷಿಕ ಬಡ್ಡಿ ಶೇ. 8ಕ್ಕಿಂತಲೂ ಕಡಿಮೆ ಇರುತ್ತದೆ. ಇನ್ನು 1 ವರ್ಷಕ್ಕಿಂತ ಕಡಿಮೆ ಅವಧಿಯ ಬಡ್ಡಿಯೂ ಶೇ. 6ಕ್ಕಿಂತ ಕಡಿಮೆ ಇರುತ್ತದೆ.
ಇದನ್ನೂ ಓದಿ: EPFO: ನಿವೃತ್ತಿಯ ನಂತರ ಮಾಸಿಕ ಪಿಂಚಣಿಯಾಗಿ 15,670 ರೂ. ಪಡೆಯುವುದು ಹೇಗೆ?
ಇನ್ನು ಹಿರಿಯ ನಾಗರಿಕರಾದರೆ, ಸಾಮಾನ್ಯ ಗ್ರಾಹಕರಿಗಿಂತ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿ ಪಡೆಯಬಹುದು. ಉದಾಹರಣೆಗೆ 5 ವರ್ಷದ ಅವಧಿಯ ಎಫ್ಡಿಗೆ ಸಾಮಾನ್ಯ ಗ್ರಾಹಕರು ಶೇ. 9.10 ಬಡ್ಡಿ ಪಡೆದರೆ ಹಿರಿಯ ನಾಗರಿಕರು ಶೇ. 9.60 ರಷ್ಟು ಇದ್ದಾರೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮಹಾರಾಷ್ಟ್ರದಲ್ಲಿ ಸ್ಥಾಪನೆಯಾಗಿದ್ದು, ದೇಶದ ಏಳೆಂಟು ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಶಾಖಾ ಕಚೇರಿಗಳಿವೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ಒಡಿಸಾ ಮೊದಲಾದ ಕೆಲ ರಾಜ್ಯಗಳಲ್ಲಿ ಈ ಕಿರು ಹಣಕಾಸು ಬ್ಯಾಂಕ್ನ ಶಾಖಾ ಕಚೇರಿಗಳಿವೆ. ಬೆಂಗಳೂರಿನಲ್ಲೂ ಇದರ ಕಚೇರಿಗಳಿವೆ.