
ನವದೆಹಲಿ, ಆಗಸ್ಟ್ 19: ಬ್ಯಾಂಕ್ ಇಎಂಐಗಳ ಮೇಲೆ ಪರಿಣಾಮ ಬೀರಬಹುದಾದಂತಹ ಒಂದು ನಿಯಮ ಬದಲಾವಣೆಯನ್ನು ಆರ್‌ಬಿಐ (RBI) ಮಾಡಲು ಹೊರಟಿದೆ. ಬಡ್ಡಿದರ ಬದಲಾವಣೆ ಎಷ್ಟು ವೇಗವಾಗಿ ಆಗುತ್ತದೆ ಎನ್ನುವುದು ಈ ಪ್ರಸ್ತಾಪಿತ ನಿಯಮವು ಹೇಳುತ್ತದೆ. ಫ್ಲೋಟಿಂಗ್-ರೇಟ್ (Floating-rate) ಸಾಲಗಳ (ಗೃಹ ಸಾಲ) ಬಡ್ಡಿ ದರಗಳ ಬದಲಾವಣೆ ಗ್ರಾಹಕರಿಗೆ ಶೀಘ್ರವಾಗಿ ತಲುಪುವಂತೆ ಮಾಡಲು ಹೊಸ ಕರಡು ನಿಯಮಾವಳಿಯನ್ನು (Draft Framework) ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತಾಪಿಸಿದೆ. ಸದ್ಯ ಇದು ಇನ್ನೂ ಪ್ರಸ್ತಾಪಿತ ಹಂತದಲ್ಲಿದೆ. ಇದು ಜಾರಿಯಾಗಲು ಐದಾರು ತಿಂಗಳಾದರೂ ಆಗಬಹುದು.
ಪ್ರಸ್ತುತ ಹೆಚ್ಚಿನ ಫ್ಲೋಟಿಂಗ್-ರೇಟ್ ಗೃಹ ಸಾಲಗಳ ಬಡ್ಡಿದರವನ್ನು ವರ್ಷಕ್ಕೊಮ್ಮೆ ಮಾತ್ರ ಬ್ಯಾಂಕುಗಳು ಪರಿಶೀಲಿಸಿ ಬದಲಾಯಿಸುತ್ತವೆ (Reset). ಇದರಿಂದ ಆರ್‌ಬಿಐ ರೆಪೋ ದರ ಇಳಿಸಿದರೂ ಅದರ ಲಾಭ ಗ್ರಾಹಕರಿಗೆ ಸಿಗಲು ತಿಂಗಳುಗಳೇ ಕಾಯಬೇಕಾಗುತ್ತದೆ. ಪ್ರಸ್ತಾಪಿಸಲಾಗಿರುವ ಹೊಸ ನಿಯಮದ ಪ್ರಕಾರ, ಫ್ಲೋಟಿಂಗ್-ರೇಟ್ ಸಾಲಗಳ ಬಡ್ಡಿದರವನ್ನು ಗರಿಷ್ಠ 3 ತಿಂಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಇದರಿಂದ ಆರ್‌ಬಿಐ ರೆಪೋ ದರ ಇಳಿಸಿದಾಗ ಅಥವಾ ಹೆಚ್ಚಿಸಿದಾಗ, ಸಾಲಗಾರರ EMI ಮೇಲಾಗುವ ಪರಿಣಾಮ ತಕ್ಷಣವೇ ಸಿಗಲಿದೆ.
ಈ ಪ್ರಸ್ತಾವನೆಗೆ ಸಲಹೆ ಮತ್ತು ಅಭಿಪ್ರಾಯ ನೀಡಲು 2026ರ ಸೆಪ್ಟೆಂಬರ್ 11 ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂತಿಮಗೊಂಡ ನಂತರ, ಈ ನಿಯಮಗಳು 2027ರ ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ: ನಿಮ್ಮ ಸಂಬಳದ ಎಷ್ಟು ಮೊತ್ತವನ್ನು ಗೃಹ ಸಾಲಕ್ಕೆ ಮೀಸಲಿಡುವುದು ಸೂಕ್ತ
ಸಾಲದ ಬಡ್ಡಿಯಲ್ಲಿ ಎರಡು ವಿಧ ಇರುತ್ತದೆ. ಫ್ಲೋಟಿಂಗ್ ರೇಟ್ ಮತ್ತು ಫಿಕ್ಸೆಡ್ ರೇಟ್. ಫಿಕ್ಸೆಡ್ ರೇಟ್ನಲ್ಲಿ ಸಾಲಕ್ಕೆ ಪೂರ್ವನಿಗದಿತ ಬಡ್ಡಿದರ ಇರುತ್ತದೆ. ಸಾಲದ ಪೂರ್ಣ ಅವಧಿಯಾದ್ಯಂತ ಇದೇ ದರ ಇರುತ್ತದೆ. ಫ್ಲೋಟಿಂಗ್ ರೇಟ್ ಎಂದರೆ ಮಧ್ಯೆ ಮಧ್ಯೆ ದರ ಬದಲಾವಣೆಗೆ ಅವಕಾಶ ಇರುತ್ತದೆ. ಆರ್‌ಬಿಐ ರೆಪೋ ದರ ಬದಲಾಯಿಸಿದಾಗ ಬ್ಯಾಂಕುಗಳೂ ತಮ್ಮ ಬೆಂಚ್‌ಮಾರ್ಕ್ ರೇಟ್ಗಳನ್ನು ಬದಲಾಯಿಸಬಹುದು. ಆಗ ಬಡ್ಡಿದರ ಪರಿಷ್ಕರಣೆ ಆಗುತ್ತದೆ. ಗೃಹ ಸಾಲಗಳಲ್ಲಿ ಈ ಎರಡು ಆಯ್ಕೆಗಳು ಇರುತ್ತವೆ.
ವೈಯಕ್ತಿಕ ಸಾಲ (Personal Loan) ಮತ್ತು ವಾಹನ ಸಾಲಗಳು (Auto Loan) ಹೆಚ್ಚಾಗಿ ಸ್ಥಿರ ಬಡ್ಡಿದರ (Fixed-rate) ಹೊಂದಿರುತ್ತವೆ. ಆದ್ದರಿಂದ, ಚಾಲ್ತಿಯಲ್ಲಿರುವ ವೈಯಕ್ತಿಕ ಸಾಲಗಳ EMI ಗಳ ಮೇಲೆ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಹೊಸ ಸಾಲ ಪಡೆಯುವವರಿಗೆ ಬ್ಯಾಂಕುಗಳು ಬೆಂಚ್‌ಮಾರ್ಕ್ ದರ ಮತ್ತು ಮರುಹೊಂದಿಕೆ ದಿನಾಂಕಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಾಗುತ್ತದೆ.
ಇದನ್ನೂ ಓದಿ: Income Tax Dept: ಸಂಶಯಾಸ್ಪದ ವಿದೇಶಿ ಹಣ ರವಾನೆ: ದೇಶಾದ್ಯಂತ ಪರಿಶೀಲನೆ ಆರಂಭಿಸಿದ ಆದಾಯ ತೆರಿಗೆ ಇಲಾಖೆ
ಪ್ರಸ್ತುತ ಗೃಹ ಸಾಲ ಹೊಂದಿರುವವರಿಗೆ ಏನೂ ಪರಿಣಾಮ ಇಲ್ಲ. ಬ್ಯಾಂಕುಗಳು ಹಾಲಿ ಸಾಲಗಳನ್ನು 2029ರ ಏಪ್ರಿಲ್ 1 ರೊಳಗೆ ಗ್ರಾಹಕರ ಒಪ್ಪಿಗೆಯೊಂದಿಗೆ ಹೊಸ ನಿಯಮಾವಳಿಗೆ ಬದಲಾಯಿಸಲಾಗುತ್ತದೆ (Migrate). ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಬ್ಯಾಂಕುಗಳು ವಿಧಿಸುವಂತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ