ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ

NBFC Branch Expansion Simplified by RBI Reforms: ಭಾರತೀಯ ರಿಸರ್ವ್ ಬ್ಯಾಂಕ್ (RBI) NBFCಗಳಿಗೆ ಶಾಖೆ ತೆರೆಯುವ ನಿಯಮ ಸಡಿಲಗೊಳಿಸಿದೆ. ಇನ್ನು ಮುಂದೆ ಪೂರ್ವಾನುಮತಿ ಇಲ್ಲದೆ ಹೊಸ ಶಾಖೆ ತೆರೆಯಬಹುದು. ಇದು NBFCಗಳ ಕಾರ್ಯನಿರ್ವಹಣಾ ಸ್ವಾತಂತ್ರ್ಯ ಹೆಚ್ಚಿಸಿ, ವ್ಯವಹಾರವನ್ನು ಸುಲಭಗೊಳಿಸಲಿದೆ. ಠೇವಣಿ ಪಡೆಯುವ NBFCಗಳಿಗೆ ನಿವ್ವಳ ಹಣ ಮತ್ತು ಕ್ರೆಡಿಟ್ ರೇಟಿಂಗ್ ಆಧರಿಸಿ ನಿಯಮಗಳಿವೆ. ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳ ನಿಯಮಗಳಲ್ಲೂ ಬದಲಾವಣೆ ತರಲಾಗಿದೆ. ಈ ಹೊಸ ಸುಧಾರಣೆಗಳು ತಕ್ಷಣದಿಂದ ಜಾರಿಗೆ ಬಂದಿವೆ.

ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ
ಆರ್‌ಬಿಐ
Image Credit source: Shutterstock

Updated on: Apr 16, 2026 | 5:04 PM

ನವದೆಹಲಿ, ಏಪ್ರಿಲ್ 16: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ವಲಯದಲ್ಲಿ ಮಹತ್ವದ ಸುಧಾರಣೆ ತಂದಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFC) ಶಾಖೆಗಳನ್ನು ತೆರೆಯುವ ನಿಯಮಗಳನ್ನು ಸಡಿಲಗೊಳಿಸಿದೆ. ರಿಸರ್ವ್ ಬ್ಯಾಂಕ್ ಈಗ NBFC ಸಂಸ್ಥೆಗಳಿಗೆ ತನ್ನ ಪೂರ್ವಾನುಮತಿ ಇಲ್ಲದೆಯೇ ಹೊಸ ಶಾಖೆಗಳನ್ನು ತೆರೆಯಲು ಮುಕ್ತ ಅವಕಾಶ ನೀಡಿದೆ. ಈ ಕ್ರಮವು ಈ ಸಂಸ್ಥೆಗಳ ಕಾರ್ಯನಿರ್ವಹಣಾ ಸ್ವಾತಂತ್ರ್ಯವನ್ನು ಹೆಚ್ಚಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು (Ease of Doing Business) ಸಹಕಾರಿಯಾಗಲಿದೆ.

ಈ ಮುಂಚೆ ಕೆಲ ನಿರ್ದಿಷ್ಟ ವಿಭಾಗಗಳಿಗೆ ಶಾಖೆಗಳನ್ನು ತೆರೆಯಲು ಪೂರ್ವಾನುಮತಿ ಪಡೆಯುವ ಅಗತ್ಯ ಇತ್ತು. ಈಗ ಎನ್​ಬಿಎಫ್​ಸಿಗಳು ಸಾಮಾನ್ಯವಾಗಿ ಮುಕ್ತವಾಗಿ ಹೊಸ ಶಾಖೆಗಳನ್ನು ತೆರೆಯಲು ಸಾಧ್ಯವಾಗಲಿದೆ.

ಠೇವಣಿ ಪಡೆಯುವ NBFCಗಳಿಗೆ ಆರ್​ಬಿಐನ ಮಾರ್ಗಸೂಚಿಗಳು

ಸಾರ್ವಜನಿಕರಿಂದ ಠೇವಣಿ ಪಡೆಯುವ NBFCಗಳ ಹೂಡಿಕೆ ಸಾಮರ್ಥ್ಯ ಮತ್ತು ಕ್ರೆಡಿಟ್ ರೇಟಿಂಗ್ ಆಧಾರದ ಮೇಲೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ:

  • 50 ಕೋಟಿ ರೂಗಿಂತ ಕಡಿಮೆ ನಿವ್ವಳ ಹಣ (Net Owned Funds) ಹೊಂದಿರುವ ಅಥವಾ ‘AA’ ಗಿಂತ ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿರುವ ಸಂಸ್ಥೆಗಳು ತಮ್ಮ ನೋಂದಾಯಿತ ಕಚೇರಿ ಇರುವ ರಾಜ್ಯದಲ್ಲಿ ಮಾತ್ರ ಶಾಖೆಗಳನ್ನು ತೆರೆಯಬಹುದು.
  • 50 ಕೋಟಿ ರೂಗಿಂತ ಹೆಚ್ಚು ನಿವ್ವಳ ಹಣ ಮತ್ತು ‘AA’ ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ರೇಟಿಂಗ್ ಹೊಂದಿರುವ NBFCಗಳು ಭಾರತದಾದ್ಯಂತ ಎಲ್ಲಿ ಬೇಕಾದರೂ ಶಾಖೆಗಳನ್ನು ಆರಂಭಿಸಬಹುದು.
  • 50 ಕೋಟಿ ರೂಗಿಂತ ಹೆಚ್ಚು ನಿವ್ವಳ ಹಣ ಇದ್ದು, ‘AA’ ಗಿಂತಲೂ ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿರುವ ಎನ್​ಬಿಎಫ್​ಸಿಗಳು ತಮ್ಮ ಮೂಲ ರಾಜ್ಯ ಬಿಟ್ಟು ಬೇರೆಡೆ ವಿಸ್ತರಣೆ ಮಾಡಲು ಅವಕಾಶ ಇರದು.

ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳಿಗೂ (CIC) ಬದಲಾವಣೆ

ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳ ವಿದೇಶಿ ಪ್ರತಿನಿಧಿ ಕಚೇರಿಗಳ ವಿಷಯದಲ್ಲೂ RBI ತನ್ನ ಧೋರಣೆಯನ್ನು ಬದಲಿಸಿದೆ. ಈ ಹಿಂದೆ ನಿಯಮ ಉಲ್ಲಂಘನೆಯಾದಲ್ಲಿ ಕಚೇರಿಗಳನ್ನು ಮುಚ್ಚಲು ಆದೇಶಿಸುತ್ತಿದ್ದ RBI, ಈಗ ಅಂತಹ ಕಚೇರಿಗಳಿಗೆ ನೀಡಲಾದ ಅನುಮತಿಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರವನ್ನು ತನ್ನ ಬಳಿ ಇಟ್ಟುಕೊಂಡಿದೆ. ಇದು ಹೆಚ್ಚು ಫ್ಲೆಕ್ಸಿಬಿಲಿಟಿಯಿಂದ ಕೂಡಿದ ನಿಯಂತ್ರಣಾ ಕ್ರಮವಾಗಿದೆ.

ಈ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Thu, 16 April 26

Follow Us